ADVERTISEMENT

ಖರ್ಗೆಗೆ ರೈಲ್ವೇ ಖಾತೆ, ಕೇಂದ್ರ ಸಂಪುಟಕ್ಕೆ 8 ಹೊಸಬರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 13:31 IST
Last Updated 17 ಜೂನ್ 2013, 13:31 IST

ನವದೆಹಲಿ (ಪಿಟಿಐ): ಬಹುಶ: ಹಾಲಿ ಕೇಂದ್ರ ಸಚಿವ ಸಂಪುಟದ ಕೊನೆಯ ಪುನರ್ರಚನೆ ಹಾಗೂ ವಿಸ್ತರಣೆಯಲ್ಲಿ ಸೋಮವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ರೈಲ್ವೇ ಸಚಿವರನ್ನಾಗಿ ಮಾಡಲಾಗಿದ್ದು, ಹಿರಿಯ ಸದಸ್ಯರಾದ ಸಿಸ್ ರಾಮ್ ಓಲಾ ಮತ್ತು ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಎಂಟು ಮಂದಿಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ.

ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ರಾಜಸ್ತಾನದ ಹಿರಿಯ ಮಹಿಳಾ ನಾಯಕಿ ಗಿರಿಜಾ ವ್ಯಾಸ್ ಮತ್ತು ಆಂದ್ರ ಪ್ರದೇಶದ ಕೆ.ಎಸ್. ರಾವ್ ಅವರನ್ನು ಪಕ್ಷದಲ್ಲಿ ಭಾನುವಾರ ಮಾಡಲಾದ ಪುನರ್ರಚನೆಗಳ ಬಳಿಕ ಈದಿನ ಕೇಂದ್ರ ಸಚಿವ ಸಂಪುಟಕ್ಕೆ ಸಂಪುಟ ದರ್ಜೆ ಸಚಿವರನ್ನಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಸಂಪುಟಕ್ಕೆ ಸೇರ್ಪಡೆಯಾಗಿರುವ ಹೊಸ ಮುಖಗಳು: ಸಂತೋಷ ಚೌಧರಿ, ಜೆ.ಡಿ. ಸೇಲಂ ಮತ್ತು ಇ.ಎನ್ಎಸ್ ನಚಿಪ್ಪನ್- ಇವರೆಲ್ಲರನ್ನೂ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಹಿರಿಯ ಸದಸ್ಯ ಮಹಾರಾಷ್ಟ್ರದ ನಾಯಕ ಮಾಣಿಕ್ ರಾವ್ ಗವಿಟ್ ಅವರನ್ನು ರಾಜ್ಯ ಸಚಿವರನ್ನಾಗಿ ಸೇರಿಸಿಕೊಳ್ಳಲಾಗಿದೆ.

ಸಚಿವ ಸಂಪುಟಕ್ಕೆ ಮಾಡಲಾದ ಹೊಸ ಸೇರ್ಪಡೆಯೊಂದಿಗೆ ಸಂಪುಟದ ಗಾತ್ರ ಇದೀಗ 77ಕ್ಕೆ ಏರಿದೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೂತರ ಸಚಿವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಕೇಂದ್ರ ಸಚಿವರು ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ತಿಂಗಳು ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಮುಖ್ಯಮಂತ್ರಿ ಸ್ಥಾನ ಪಡೆಯಲು ವಿಫಲರಾದ 71ರ ಹರೆಯದ ಖರ್ಗೆ ಅವರನ್ನು ಇದೀಗ ಕಾರ್ಮಿಕ ಇಲಾಖೆಯಿಂದ ಬದಲಾಯಿಸಿ ರೈಲ್ವೇಖಾತೆ ನೀಡುವ ಮೂಲಕ ಪರಿಹಾರ ಕಲ್ಪಿಸಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.