ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾಡ ಜಿಲ್ಲೆಯ ಮಾಚಿಲ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರಿ ನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಭದ್ರತಾ ಪಡೆ, ಐವರು ಉಗ್ರರನ್ನು ಹತ್ಯೆ ಮಾಡಿದೆ.
ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಗಡಿಯಾಚೆಗೆ ಓಡಾಡುತ್ತಿದ್ದುದನ್ನು ಗಸ್ತು ತಿರುಗುತ್ತಿದ್ದ ಯೋಧರು ಗಮನಿಸಿದರು. ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದರು. ಹಿಂದೆ ಸರಿಯುವಂತೆ ಯೋಧರು ಸೂಚಿಸಿದಾಗ ಅವರು ಗುಂಡು ಹಾರಿಸಲು ಯತ್ನಿಸಿದರು. ಯೋಧರು ನಡೆಸಿದ ಪ್ರತಿದಾಳಿಗೆ ಐವರು ಉಗ್ರರು ಬಲಿಯಾಗಿದ್ದಾರೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿ ನಡೆದ ಸ್ಥಳದಿಂದ ಐದು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತ್ಯೆಯಾದ ಉಗ್ರರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಬಾರಾಮುಲ್ಲಾ ಮತ್ತು ಕುಪ್ವಾಡ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಉಗ್ರರು ನುಸುಳುವ ಪ್ರದೇಶಗಳಲ್ಲಿ ಈಗ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ. ಹಾಗಾಗಿ ಅಲ್ಲಿ ನುಸುಳಲು ಯತ್ನಿಸುವ ಉಗ್ರರ ಹತ್ಯೆಯ ಪ್ರಮಾಣ ಹೆಚ್ಚಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಹೆಚ್ಚಿನ ಯಶಸ್ಸು ದೊರೆಯುತ್ತಿದೆ. ಹಲವು ಉಗ್ರರು ಬಲಿಯಾಗಿದ್ದಾರೆ. ಹಾಗಾಗಿ ಜಮ್ಮು ಕಾಶ್ಮೀರದಲ್ಲಿ ಇರುವ ಪಾಕಿಸ್ತಾನದ ಉಗ್ರರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದು ನುಸುಳುವಿಕೆ ಪ್ರಯತ್ನ ಹೆಚ್ಚಲು ಕಾರಣ ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಈ ವರ್ಷ ಈವರೆಗೆ 130ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದು ಕಳೆದ ಎಂಟು ವರ್ಷಗಳಲ್ಲಿಯೇ ಅತಿ ಹೆಚ್ಚು. ರಕ್ಷಣಾ ಪಡೆಯು ಉಗ್ರರ ‘ನಿರ್ಮೂಲನಾ ಪಟ್ಟಿ’ ಸಿದ್ಧಪಡಿಸಿದೆ. ಅದಕ್ಕೆ ಅನುಗುಣವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.