ಈ ಬಾರಿ ವಾಡಿಕೆಗಿಂತಲು ಮೊದಲೇ ಮಾನ್ಸೂನ್ ಪ್ರವೇಶಿಸಿದೆ. ಜೂನ್ ತಿಂಗ ಮೊದಲ ಎರಡು ವಾರಗಳಲ್ಲಿ ದೇಶದ 19 ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕರ್ನಾಟಕದಲ್ಲೂ ವಾಡಿಕೆಗಿಂತ ಶೇ 96ರಷ್ಟು ಹೆಚ್ಚು ಮಳೆಯಾಗಿದೆ. 12 ರಾಜ್ಯಗಳಲ್ಲಿ ಮಳೆ ಕೊರತೆಯಾಗಿದೆ.
**
ಈಶಾನ್ಯ ಭಾರತ, ಕೇರಳದಲ್ಲಿ ಮುಂಗಾರಿನ ಅಬ್ಬರ
ತಿರುವನಂತಪುರ: ಕೇರಳದ ಹಲವೆಡೆ ಗುರುವಾರ ಭಾರಿ ಮಳೆಯಾಗಿದೆ. ಕೋಯಿಕ್ಕೋಡ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ಗುಡ್ಡಕುಸಿದು, ನಾಲ್ವರು ಮೃತಪಟ್ಟಿದ್ದಾರೆ. ಇನ್ನೂ ಹತ್ತು ಮಂದಿ ಕಾಣೆಯಾಗಿದ್ದಾರೆ. ಕಾಣೆಯಾದವರ ಪತ್ತೆಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮೇ 29ರಿಂದ ರಾಜ್ಯದಲ್ಲಿ ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿದೆ. ಕೋಯಿಕ್ಕೋಡ್, ಮಲಪ್ಪುರ, ಕಣ್ಣೂರು, ವಯನಾಡು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಕಾರಣ ದಿಢೀರ್ ಪ್ರವಾಹ ಉಂಟಾಗಿತ್ತು.
‘ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳು ತುಂಬಿವೆ. ಯಾವುದೇ ಸಮಯದಲ್ಲಿ ಅವುಗಳಿಂದ ನೀರನ್ನು ಹೊರಕ್ಕೆ ಬಿಡಬಹುದು. ಹೀಗಾಗಿ ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಇರುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ’ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಫಾಲಾ ವರದಿ: ಈಶಾನ್ಯ ಭಾರತದ ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಬುಧವಾರ ತಡರಾತ್ರಿಯಿಂದ ಭಾರಿ ಮಳೆಯಾಗುತ್ತಿದೆ. ನಾಲ್ಕೂ ರಾಜ್ಯಗಳ ಹಲವೆಡೆ ಪ್ರವಾಹ ಸ್ಥಿತಿ ತಲೆದೋರಿದೆ.
ಅಸ್ಸಾಂನಲ್ಲಿ 222 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ರಾಜ್ಯದಲ್ಲಿ ಒಟ್ಟು 1.48 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ತ್ರಿಪುರಾದಲ್ಲಿ 3,500 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.