ನವದೆಹಲಿ (ಪಿಟಿಐ): 1948ರ ಜನವರಿ 30ರಂದು ನಡೆದ ಮಹಾತ್ಮ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಎಫ್‌ಐಆರ್ ಹಾಗೂ ಆರೋಪ ಪಟ್ಟಿ ಬಹಿರಂಗಗೊ ಳಿಸುವಂತೆ ಕೇಂದ್ರ ಮಾಹಿತಿ ಆಯೋಗ ಗೃಹ ಸಚಿವಾಲಯಕ್ಕೆ ಸೂಚಿಸಿದೆ.
ಒಡಿಶಾದ ಹೇಮಂತ್ ಪಾಂಡಾ ಎಂಬುವವರು ಗಾಂಧಿ ಹತ್ಯೆಯ ಸಂದರ್ಭದಲ್ಲಿ ದಾಖಲಾದ ಎಫ್‌ಐಆರ್ ಹಾಗೂ ಆರೋಪ ಪಟ್ಟಿ ನೀಡುವಂತೆ ಗೃಹ ಸಚಿವಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಕಾನೂನಿಗೆ ಅನುಗುಣವಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತೆ ಎಂದೂ ಪ್ರಶ್ನಿಸಿದ್ದರು.
ಗೃಹ ಸಚಿವಾಲಯ ಈ ಅರ್ಜಿಯನ್ನು ರಾಷ್ಟ್ರೀಯ ಪತ್ರಾಗಾರಕ್ಕೆ ಕಳುಹಿಸಿತ್ತು. ಗಾಂಧಿ ಸ್ಮೃತಿ ಹಾಗೂ ದರ್ಶನ ಸಮಿತಿಗೂ ಪಾಂಡಾ ಅವರ ಅರ್ಜಿ ಕಳುಹಿಸಲಾಗಿತ್ತು.
ಗಾಂಧಿ ಅವರ ಕುಟುಂಬ ಸದಸ್ಯರ ಇಚ್ಛೆಯಂತೆ ಮರಣೋತ್ತರ ಪರೀಕ್ಷೆ ನಡೆಸಲಾಗಿರಲಿಲ್ಲ. ಎಫ್ಐಆರ್ ಹಾಗೂ ಆರೋಪಪಟ್ಟಿ ತುಘಲಕ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಇರುವ ಸಾಧ್ಯತೆಯಿದೆ ಎಂದು ಗಾಂಧಿ ಸ್ಮೃತಿ ಹಾಗೂ ದರ್ಶನ ಸಮಿತಿಗಳು ಹೇಳಿದ್ದವು.
ಪಾಂಡಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯಂತೆ ಎಲ್ಲ ಮಾಹಿತಿಯನ್ನೂ ಶೋಧಿಸಿ ನೀಡುವಂತೆ ಗೃಹ ಸಚಿವಾಲಯಕ್ಕೆ ಮಾಹಿತಿ ಆಯುಕ್ತರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.