ನಡಿಯಾಡ್ (ಗುಜರಾತ್): ದೇಶದ ಜನರ ಹೃದಯದಲ್ಲಿ ‘ಗುಜರಾತ್ ಮಾದರಿ’ ಎಂಬ ಕನಸನ್ನು ಬಿತ್ತಿ ಕೇಂದ್ರದ ಗದ್ದುಗೆ ಏರಿದ ಪ್ರಧಾನಿ ನರೇಂದ್ರ ಮೋದಿ ಈಗ ತವರು ರಾಜ್ಯದಲ್ಲಿ ಇದೇ ಕುದುರೆ ಏರಿ ಬೆವರು ಸುರಿಸತೊಡಗಿದ್ದಾರೆ.
ಭಾನುವಾರ ಗುಜರಾತಿನಲ್ಲಿ ನಾಲ್ಕು ಚುನಾವಣಾ ರ‍್ಯಾಲಿ ನಡೆಸಿದ ಮೋದಿ ಸೋಮವಾರವೂ ಇಲ್ಲಿಯೇ ಸುತ್ತಿದ್ದಾರೆ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಥ್ ನೀಡುತ್ತಿದ್ದಾರೆ.
ಕೇಂದ್ರ ಮಂತ್ರಿಮಂಡಲದ ಅರ್ಧದಷ್ಟು ಸಚಿವರೂ ಇಲ್ಲಿ ಬೀಡು ಬಿಟ್ಟಿದ್ದಾರೆ.
ನಡಿಯಾಡ್, ಮಾತರ್, ಮೆಹದಾಬಾದ್, ಮಾವುದಾ, ಕಟವಾಲ್, ಆನಂದ ಮುಂತಾದ ಕ್ಷೇತ್ರಗಳಲ್ಲಿ ಸಂಚರಿಸಿದರೆ ‘ಗುಜರಾತ್ ಮಾದರಿ’ ಕಣ್ಣಿಗೆ ರಾಚುತ್ತದೆ.
ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳಿವೆ. ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳಿವೆ. ಉತ್ತಮ ಕಟ್ಟಡಗಳಿವೆ. ನೀರು, ಒಳಚರಂಡಿ ಸೌಲಭ್ಯಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯಗಳಿವೆ. ಜಾತಿಗೊಂದು ಸ್ಮಶಾನವಿದೆ. ಎಲ್ಲವನ್ನೂ ಇಲ್ಲಿಯ ಜನರು ಹೆಮ್ಮೆಯಿಂದ ತೋರಿಸುತ್ತಾರೆ.
‘ಒಳ್ಳೆಯ ಹೆದ್ದಾರಿಗಳಿವೆ. ಕೈಗಾರಿಕೆಗಳಿಗೆ ಉತ್ತೇಜನ ಸಿಕ್ಕಿದೆ. ಅಹಮದಾಬಾದ್, ಸೂರತ್, ಬರೋಡ, ರಾಜ್‌ಕೋಟ್‌ಗಳಲ್ಲಿ ಉತ್ತಮ ಕಟ್ಟಡಗಳಿವೆ. ಕ್ರೀಡಾ ಸಂಕೀರ್ಣಗಳಿವೆ. ಆದರೆ ಇವುಗಳ ಹಿಂದೆ ನೋವಿನ ಕತೆಗಳೂ ಇವೆ’ ಎಂದು ನಡಿಯಾಡ ನಗರಸಭೆ ಆವರಣದಲ್ಲಿ ಕುಳಿತ ಜಿಗ್ನೇಶ್ ಹೇಳುತ್ತಾರೆ. ಆದರೆ ನಗರಸಭೆ ಸದಸ್ಯ ಮನೀಶ್ ದೇಸಾಯಿ ಇದನ್ನು ನಿರಾಕರಿಸುತ್ತಾರೆ.
1990ರವರೆಗೂ ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿ ಇದ್ದವು. ಆಗ ಆಕ್ಟ್ರಾಯ್ ಮಾತ್ರ ಈ ಸಂಸ್ಥೆಗಳ ಆದಾಯದ ಮೂಲಗಳಾಗಿದ್ದವು. ಆದರೆ ನರೇಂದ್ರ ಮೋದಿ ಅವರು ಗುಜರಾತ್ ಚುಕ್ಕಾಣಿ ಹಿಡಿದ ನಂತರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಹಣ ನೀಡುವ ಪದ್ಧತಿ ಜಾರಿಗೆ ತಂದರು. ಆಗಲೇ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಯಿತು. ಇದರ ಆಧಾರದಲ್ಲಿಯೇ ಈಗ ಬಿಜೆಪಿ ಮತ ಕೇಳುತ್ತಿದೆ. ಜನರು ಮತ್ತೆ ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ಹೇಳುತ್ತಾರೆ.
ರಾಜ್ಯ ಬಿಜೆಪಿ ಪ್ರಧಾನ ವಿಪ್ ಆಗಿರುವ ನಡಿಯಾಡ ಶಾಸಕ ಮತ್ತು ನರೇಂದ್ರ ಮೋದಿ ಅವರ ಪರಮ ಆಪ್ತ ಪಂಕಜ್ ದೇಸಾಯಿ ಕೂಡ ಈ ಮಾತುಗಳನ್ನು ಬೆಂಬಲಿಸುತ್ತಾರೆ. ‘ಎಲ್ಲ ಜನರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇ ಗುಜರಾತ್ ಮಾದರಿ. ರಾಜ್ಯದ ಎಲ್ಲ ಹೊಲಗಳಿಗೂ ಈಗ ಉತ್ತಮ ರಸ್ತೆಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಎಲ್ಲ ಕಡೆ ಒಂದೇ ರೀತಿಯ ಅಭಿವೃದ್ಧಿ ಕೆಲಸಗಳಾಗಿವೆ. ನವಜಾತ ಶಿಶುವಿನಿಂದ ಹಿಡಿದು ಮನುಷ್ಯ ಸಾಯುವವರೆಗೂ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ಪರಿಶಿಷ್ಟರು, ಆದಿವಾಸಿಗಳು, ಹಿಂದುಳಿದ ವರ್ಗದವರಿಗೆ ಸೌಲಭ್ಯ ನೀಡಲಾಗಿದೆ. ರೈತರಿಗೆ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಗುಜರಾತಿನಲ್ಲಿ ರೈತರ ಆತ್ಮಹತ್ಯೆ ಎಂಬ ಪಿಡುಗು ಇಲ್ಲವೇ ಇಲ್ಲ.
ಸರ್ದಾರ್ ಸರೋವರ ಯೋಜನೆ ಪೂರ್ಣಗೊಂಡಿದ್ದರಿಂದ ಸೌರಾಷ್ಟ್ರದಲ್ಲಿ ನೀರಿನ ತೊಂದರೆ ಇಲ್ಲ. ಈಗ ಅಲ್ಲಿನ ರೈತರು ಎರಡು, ಮೂರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಣೆಕಟ್ಟಿನ ಎತ್ತರ ಹೆಚ್ಚಿಸಲಾಗಿದೆ. ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮತ್ತೇನು ಬೇಕು?’ ಎಂದು ಪ್ರಶ್ನೆ ಮಾಡುತ್ತಾರೆ.
22 ವರ್ಷಗಳ ಬಿಜೆಪಿ ಆಡಳಿತ ಅಭಿವೃದ್ಧಿಗೆ ಹೊಸ ವ್ಯಾಖ್ಯೆ ನೀಡಿದೆ.
‘ನಾನು ಗುಜರಾತ್, ನಾನು ವಿಕಾಸ’ ಎಂಬ ಘೋಷಣೆ ನಮ್ಮ ಕೈಬಿಡುವುದಿಲ್ಲ ಎನ್ನುವುದು ಅವರ ನಂಬಿಕೆ. ಆದರೆ ಇದೇ ಮಾತನ್ನು ಹೇಳಲು ಗ್ರಾಮೀಣ ಪ್ರದೇಶದ ಜನರು ಸಿದ್ಧರಿಲ್ಲ.
ಹೈನುಗಾರಿಕೆಗೆ ಹೊಸ ದಿಕ್ಕನ್ನು ತೋರಿದ ಆನಂದ ಜಿಲ್ಲೆಯ ಬಾದ್ರನ್ ಗ್ರಾಮದಲ್ಲಿ ಯುವಕರು ಬಿಜೆಪಿ ಸರ್ಕಾರದ ಬಗ್ಗೆ ಸಿಟ್ಟು ಪ್ರದರ್ಶಿಸುತ್ತಾರೆ. ಬಾದ್ರನ್ ಗ್ರಾಮ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಗ್ರಾಮ. ಈಗಲೂ ಇಲ್ಲಿಯ ಕಟ್ಟಡಗಳ ಮೇಲೆ ‘ಗೋ ಬ್ಯಾಕ್’ ಎಂಬ ಘೋಷಣೆಗಳು ಇವೆ. ಈ ಹೇಳಿಕೆಗಳಿಗೆ ಗಾಜಿನ ಚೌಕಟ್ಟು ಹಾಕಿ ಕಾಪಾಡಲಾಗಿದೆ. ಇಲ್ಲಿನ ಯುವಕರ ಮಾತುಗಳನ್ನು ಕೇಳಿದರೆ ಅದು ‘ಗೋ ಬ್ಯಾಕ್ ಬಿಜೆಪಿ’ ಎಂದು ಕೇಳಿಸುತ್ತದೆ.
‘ಎಲ್ಲವೂ ತೋರಿಕೆಯ ಅಭಿವೃದ್ಧಿ ಅಷ್ಟೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲಂಚ ಕೊಡದೇ ಯಾವ ಕೆಲಸವೂ ಆಗುವುದಿಲ್ಲ. ಸ್ವಜನ ಪಕ್ಷಪಾತಕ್ಕೂ ಲೆಕ್ಕ ಇಲ್ಲ. ಅಭಿವೃದ್ಧಿ ಅಭಿವೃದ್ಧಿ ಎಂದು ಹೇಳುತ್ತಾರಲ್ಲ. ಯಾವುದಾದರೂ ಗುತ್ತಿಗೆ ಕೆಲಸ ಬೇರೆಯವರಿಗೆ ಸಿಕ್ಕಿದೆಯಾ? ಎಲ್ಲವೂ ಶಾಸಕರ ಹಿಂಬಾಲಕರಿಗೇ ಸಿಕ್ಕಿದೆ.
ಶೇಂಗಾ ಬೆಳೆದವರಿಗೆ ಉತ್ತಮ ಬೆಲೆ ಇಲ್ಲ. ಹತ್ತಿ ಬೆಲೆ ಪಾತಾಳಕ್ಕೆ ಕುಸಿದಿದೆ’ ಎಂದು ಹಿತೇನ್ ಪಟೇಲ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಈ ಬಾರಿ ನಾವು ಬದಲಾವಣೆ ಬಯಸುತ್ತಿದ್ದೇವೆ. 2019ಕ್ಕೆ ಮತ್ತೆ ಮೋದಿಗೇ ನಾವು ಮತ ಹಾಕುತ್ತೇವೆ. ಆದರೆ ಗುಜರಾತಿನಲ್ಲಿ ಈಗ ಬದಲಾವಣೆ ಬೇಕು ಅಷ್ಟೆ’ ಎಂಬುದು ಅವರ ಸ್ಪಷ್ಟ ಅಭಿಪ್ರಾಯ.
ಬಾದ್ರನ್ ಗ್ರಾಮದಲ್ಲಿ ಪಟೇಲ್ ಸಮುದಾಯದವರು ಹೆಚ್ಚಾಗಿದ್ದರೂ ಅವರಲ್ಲಿ ಬಹುತೇಕ ಮಂದಿ ವಿದೇಶದಲ್ಲಿದ್ದಾರೆ. ಸಾಂಪ್ರದಾಯವಾಗಿ ಇಲ್ಲಿನ ಪಟೇಲರು ಬಿಜೆಪಿ ಬೆಂಬಲಿಗರಾದರೂ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಗೆಲ್ಲುತ್ತಿದೆ.
‘ನನ್ನ ತಂದೆ ಸರ್ಕಾರಿ ಅಧಿಕಾರಿಯಾಗಿದ್ದರು. ಅವರು ಮೃತಪಟ್ಟಾಗ ಪಿಂಚಣಿ ಪಡೆಯಲು ನಾವು ಸಾಕಷ್ಟು ಬಾರಿ ಅಲೆದಾಡಬೇಕಾಯಿತು. ತಂದೆ ಸತ್ತಾಗ ಮುಖ್ಯಮಂತ್ರಿ ಮೋದಿ ಅವರು ದೂರವಾಣಿ ಮೂಲಕ ನನಗೆ ಸಾಂತ್ವನ ಹೇಳಿದ್ದರು. ಆದರೂ ನಮಗೆ ಬರಬೇಕಾದ ಹಣ ಬರಲಿಲ್ಲ. ಎರಡು ವರ್ಷ ಕಾದು ನಾನು ಈ ವಿಷಯವನ್ನು ಮೋದಿಗೆ ತಿಳಿಸಿದೆ. ಅವರು ತಕ್ಷಣ ಮಾಡಿಕೊಡುವುದಾಗಿ ಹೇಳಿದರು. ಎರಡೇ ದಿನದಲ್ಲಿ ನಮಗೆ ಬರಬೇಕಾಗಿದ್ದ ಎಲ್ಲ ಹಣ ಬಂತು. ನಾನು ಮೋದಿಯ ಬಗ್ಗೆ ಅಭಿಮಾನ ಹೊಂದಿದೆ. ಆದರೆ ಆಗ ಅಮ್ಮ ಹೇಳಿದಳು. ಇವೆಲ್ಲ ಮೋದಿ ಮಹಿಮೆ ಅಲ್ಲ. ನಾನು ₹ 70, 000 ಲಂಚ ನೀಡಿದ್ದರಿಂದ ಆದ ಪವಾಡ’ ಎಂದು ಸುನಿಲ್ ರಘು ಹೇಳಿ ‘ಇದೇ ನೋಡಿ ಗುಜರಾತ್ ಮಾದರಿ’ ಎಂದರು.
ಗುಜರಾತ್ ಮಾದರಿಯ ಕುದುರೆ ಏರಿಯೇ ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೋಡಿ ಈ ಬಾರಿಯೂ ಮತಭಿಕ್ಷೆ ಕೇಳುತ್ತಿದ್ದರೂ ಅವರಿಗೆ ಈ ಪಯಣ ಸುಲಭದ ತುತ್ತಾಗಿಲ್ಲ. ಬೆವರು ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.