ADVERTISEMENT

ಗೋಧ್ರಾ ರೈಲು ಹತ್ಯಾಕಾಂಡ: 11 ಮಂದಿಗೆ ಮರಣದಂಡನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST
ಗೋಧ್ರಾ ರೈಲು ಹತ್ಯಾಕಾಂಡ: 11 ಮಂದಿಗೆ ಮರಣದಂಡನೆ
ಗೋಧ್ರಾ ರೈಲು ಹತ್ಯಾಕಾಂಡ: 11 ಮಂದಿಗೆ ಮರಣದಂಡನೆ   

ಅಹಮದಾಬಾದ್ (ಪಿಟಿಐ): ಗುಜರಾತ್ ರೈಲು ಹತ್ಯಾಕಾಂಡದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದ 31ಜನರ ಪೈಕಿ 11 ಮಂದಿಗೆ ಮರಣದಂಡನೆ ಮತ್ತು ಇತರ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

2002ರಲ್ಲಿ ನಡೆದ ಈ ಹತ್ಯಾಕಾಂಡದಲ್ಲಿ 59 ಮಂದಿ ಕರಸೇವಕರು ಬಲಿಯಾಗಿದ್ದು ನಂತರ ನಡೆದ ಗಲಭೆಗಳಲ್ಲಿ ಸುಮಾರು 1200 ಜನರು ಜೀವತೆತ್ತಿದ್ದರು.

 ಈ ಪ್ರಕರಣವನ್ನು ‘ವಿರಳಾತಿ ವಿರಳ’ ಎಂದು ಪರಿಗಣಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಆರ್. ಪಟೇಲ್, 11ಮಂದಿಗೆ ಮರಣದಂಡನೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದರು.

‘ಗೋಧ್ರಾ ಬಳಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದನ್ನು ಮತ್ತು ಈ ಸಂಚಿನಲ್ಲಿ ಅವರ ಸಕ್ರಿಯ ಪಾತ್ರವನ್ನು ಪರಿಗಣಿಸಿ 11 ಮಂದಿಗೆ ಮರಣದಂಡನೆ ವಿಧಿಸಲಾಗಿದೆ’ ಎಂದು ಸರ್ಕಾರದ ಪರ ವಕೀಲ ಜೆ.ಎಂ. ಪಂಚಾಳ್ ಅವರು ಸಾಬರಮತಿ ಜೈಲಿನಲ್ಲಿ ತೀರ್ಪು ಪ್ರಕಟವಾದ ಬಳಿಕ ಹೇಳಿದರು.

 ಇದು ಅತ್ಯಂತ ಹೀನ ಕೃತ್ಯವಾದ್ದರಿಂದ ಎಲ್ಲಾ 31 ಮಂದಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು ಎಂದು ಪಂಚಾಳ್  ಕೋರಿದ್ದರು.

ತೀರ್ಪಿನ ವಿವರ ಒಳಗೊಂಡ ಪ್ರತಿ ತಮಗಿನ್ನೂ ದೊರೆಯದ ಕಾರಣ ಶಿಕ್ಷೆ ಪ್ರಮಾಣದಲ್ಲಿನ ವ್ಯತ್ಯಾಸದ -11 ಮಂದಿಗೆ ಮರಣದಂಡನೆ ಮತ್ತು ಇತರರಿಗೆ ಜೀವಾವಧಿ ಶಿಕ್ಷೆ- ಬಗ್ಗೆ ತಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ರಾಷ್ಟ್ರದಲ್ಲಿ  11 ಮಂದಿಗೆ ಮರಣದಂಡನೆ ಶಿಕ್ಷೆಯಾಗಿರುವ  ಮೊದಲ ಪ್ರಕರಣ ಇದು ಎಂದು ಪಂಚಾಳ್ ಹೇಳಿದರು. ಮೇಲ್ಮನವಿ ಸಲ್ಲಿಸಲು ಆರೋಪಿಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ. 20 ಮಂದಿ ತಪ್ಪಿತಸ್ಥರ ಒಟ್ಟಾರೆ ಶಿಕ್ಷೆಯಲ್ಲಿ ಅವರು ಈಗಾಗಲೇ ಜೈಲಿನಲ್ಲಿ ಕಳೆದಿರುವ ಅವಧಿಯನ್ನೂ ಪರಿಗಣಿಸಲಾಗುವುದು ಎಂದರು.

ಮೇಲ್ಮನವಿ ಖಚಿತ: ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಗಳು ಮೇಲ್ಮನವಿ ಸಲ್ಲಿಸುವುದು ಖಚಿತ ಎಂದು ಅವರ ಪರ ವಕೀಲ ಐ.ಎಂ. ಮುನ್ಷಿ ಹೇಳಿದರು. 2002ರ ಫೆ. 27ರಂದು ಗೋಧ್ರಾ ರೈಲು ಹೊತ್ತಿಕೊಂಡು ಉರಿದ ಬಳಿಕ ನಂತರದಲ್ಲಿ ಗುಜರಾತ್‌ನ ವಿವಿಧೆಡೆ ದೊಡ್ಡ ಪ್ರಮಾಣದಲ್ಲಿ ಕೋಮು ಗಲಭೆಗಳು ನಡೆದಿತ್ತು. ಇದರಲ್ಲಿ ಮುಖ್ಯವಾಗಿ ಅಲ್ಪಸಂಖ್ಯಾತರು ಸೇರಿದಂತೆ 1200 ಮಂದಿ ಸಾವಿಗೀಡಾಗಿದ್ದರು.

ಸಾಬರಮತಿ ಜೈಲಿನೊಳಗೆ 2009 ಜೂನ್‌ನಲ್ಲಿ ಪ್ರಕರಣ ವಿಚಾರಣೆ ಆರಂಭಿಸಲಾಗಿತ್ತು. ಸುಮಾರು 253 ಸಾಕ್ಷ್ಯಗಳನ್ನು ಮತ್ತು 1,500 ದಾಖಲಾತಿ ಸಾಕ್ಷ್ಯಗಳನ್ನು ಗುಜರಾತ್ ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದರು.

ಆರಂಭದಲ್ಲಿ ಒಟ್ಟು 134 ಮಂದಿಯನ್ನು ಆರೋಪಿಗಳೆಂದು ಹೇಳಲಾಗಿದ್ದು 14 ಮಂದಿಯನ್ನು ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆ ಮಾಡಲಾಗಿತ್ತು. ಐವರು ಬಾಲಾಪರಾಧಿಗಳಾಗಿದ್ದರು ಮತ್ತು ಒಂಬತ್ತು ವರ್ಷಗಳ ವಿಚಾರಣೆ ಅವಧಿಯಲ್ಲಿ ಐವರು ಅಸು ನೀಗಿದ್ದರು ಮತ್ತು 16 ಮಂದಿ ನಾಪತ್ತೆಯಾಗಿದ್ದರು. ಹೀಗಾಗಿ 94 ಆರೋಪಿಗಳ ವಿರುದ್ಧ ವಿಚಾರಣೆ ನಡೆಯಿತು.

ಈ 94 ಆರೋಪಿಗಳಲ್ಲಿ ಪ್ರಮುಖ ಆರೋಪಿಗಳಾದ ಮೌಲಾನಾ ಉಮರ್ಜಿ, ಮೊಹಮ್ಮದ್ ಹುಸೇನ್ ಕಲೊಟಾ, ಮೊಹಮ್ಮದ್ ಅನ್ಸಾರಿ ಮತ್ತು  ನನುಮಿಯಾ ಚೌಧುರಿ ಸೇರಿದಂತೆ 63 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು.

ಗೋಧ್ರಾ ರೈಲು ಹತ್ಯಾಕಾಂಡದಲ್ಲಿ ಕೇವಲ 11 ಮಂದಿಗೆ ಮರಣ ದಂಡನೆ ವಿಧಿಸಿ ನ್ಯಾಯಾಲಯ ನೀಡಿರುವ ತೀರ್ಪಿನಿಂದ ನಿರಾಶೆ ಆಗಿದೆ. ರಾಜ್ಯ ಸರ್ಕಾರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರತಿಕ್ರಿಯಿಸಿದೆ. ‘ಎಲ್ಲಾ 94 ಮಂದಿ ಆರೋಪಿಗಳಿಗೂ ಮರಣ ದಂಡನೆ ವಿಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ’ ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.