ADVERTISEMENT

ಗೋ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ಟ್ ಅಪ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 11:39 IST
Last Updated 11 ಏಪ್ರಿಲ್ 2017, 11:39 IST
ಗೋ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ಟ್ ಅಪ್
ಗೋ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ಟ್ ಅಪ್   

ಗಾಂಧೀನಗರ: ಗೋ ರಕ್ಷಣೆಗಾಗಿ ಹೊಸ ಕಾನೂನುಗಳನ್ನು ಜಾರಿಗೆ ತಂದ ನಂತರ ಗುಜರಾತ್‍ನಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಗೋವುಗಳಿಗೆ ಸಂಬಂಧಿಸಿದ ವ್ಯವಸಾಯಗಳಿಗೆ ಉತ್ತೇಜನ ನೀಡಲು ಚಿಂತನೆ ನಡೆಸಿದೆ.

ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೋ ಉತ್ಪನ್ನಗಳಾದ ಹಾಲು, ತುಪ್ಪ, ಗೋಮೂತ್ರ, ಸೆಗಣಿ ಮೊದಲಾದವುಗಳನ್ನು ಮಾರಾಟ ಮಾಡುವ ಸ್ಟಾರ್ಟ್ ಅಪ್‍ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ. ಈ ಸ್ಟಾರ್ಟ್ ಅಪ್‍ಗಳ ಮೂಲಕ ಗೋ ಉತ್ಪನ್ನಗಳನ್ನು ನವೀನ ರೀತಿಯಲ್ಲಿ ಮಾರಾಟ ಮಾಡಲಾಗುವುದು.

ಇಲ್ಲಿನ ಗೋ ಸೇವಾ ಆಯೋಗವು, ಗೋ ಉತ್ಪನ್ನ ಆಧಾರಿತ ಸ್ಟಾರ್ಟ್ ಅಪ್‌‍ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಚೇಂಬರ್ ಆಫ್ ಕಾಮರ್ಸ್, ಇಂಡಸ್ಟ್ರಿ ಅಸೋಸಿಯೇಷನ್ ಮತ್ತು ಬೃಹತ್ ಕಂಪನಿಗಳ ಜತೆ ಮಾತುಕತೆ ನಡೆಸಿದೆ, ಇದಕ್ಕಾಗಿ ಸರ್ಕಾರ ಕೂಡಾ ವಿಶೇಷ ನಿಧಿಯನ್ನು ನೀಡಲಿದೆ.

ADVERTISEMENT

ಗೋ ಪೋಷಣೆ ಮತ್ತು ಗೋ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಹೈನುಗಾರಿಕೆ ಮೂಲಕ ಹಲವಾರು ಜನರಿಗೆ ಉದ್ಯೋಗವೂ ಲಭಿಸುತ್ತದೆ. ಇದೀಗ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಗೋ ಉತ್ಪನ್ನಗಳ ಸ್ಟಾರ್ಟ್ ಅಫ್ ಆರಂಭಿಸಲು ಮುಂದಾಗಿದ್ದೇವೆ, ಅದಕ್ಕಾಗಿ ಚೇಂಬರ್ ಆಫ್ ಕಾಮರ್ಸ್,ಎಂಎಸ್ಎಂಇ ಅಸೋಸಿಯೇಷನ್  ಸೇರಿದಂತೆ ಹಲವಾರು ಉದ್ದಿಮೆ ಸಂಸ್ಥೆಗಳನ್ನು ಆಹ್ವಾನಿಸಿದ್ದೇವೆ. ಗೋ ಉತ್ಪನ್ನಗಳಾದ ಹಾಲು, ತುಪ್ಪ, ಗೋಮೂತ್ರ, ಸೆಗಣಿ, ಔಷಧಿ ಮತ್ತು ಸೌಂದರ್ಯ ಕ್ರೀಮುಗಳನ್ನು ಈ ಸ್ಟಾರ್ಟ್ ಅಪ್ ಮೂಲಕ ಮಾರಾಟ ಮಾಡಲು ತೀರ್ಮಾನಿಸಿದ್ದೇವೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿಯೂ ಗೋ ಉತ್ಪನ್ನಗಳನ್ನು ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಮಾರಾಟ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ. ಈ ಕಾರ್ಯಗಳಲ್ಲಿ ಮಹಿಳೆಯರೂ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುವುದು  ಎಂದು ಗೋ ಸೇವಾ ಆಯೋಗದ ಅಧ್ಯಕ್ಷ ಡಾ. ವಲ್ಲಭ್ ಕಥಿರಿಯಾ ಹೇಳಿದ್ದಾರೆ.

ಗೋ ಉತ್ಪನ್ನಗಳನ್ನು ಯಾವ ರೀತಿಯಲ್ಲಿ ವಾಣಿಜ್ಯೋದ್ಯಮಕ್ಕೆ ಬಳಸಬಹುದು ಮತ್ತು ಗೋ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಗೋ ಸಂತರ ಸಮ್ಮೇಳನವನ್ನು ಆಯೋಜಿಸಲು ಗೋ ಸೇವಾ ಆಯೋಗ ಮುಂದಾಗಿದೆ.

ಅದೇ ವೇಳೆ ಹಿಂದೂ ಮತದಾರರನ್ನು ಓಲೈಸಲು ಮತ್ತು ಗೋ ರಕ್ಷಣೆಯ ಹೊಸ ಕಾನೂನಿನ ಬಗ್ಗೆ ಜನರಿಗೆ ಮನವರಿಕೆ ಮಾಡಲು ಬಿಜೆಪಿ ಗುಜರಾತಿನಲ್ಲಿ ಗೋ ರಕ್ಷಕ್ ಜನ್ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲು ಸಜ್ಜಾಗಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.