ಚಂಡ ಮಾರುತ ಎಂದರೆ...
ಚಂಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆ. ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶದತ್ತ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಇಲ್ಲಿ ಗಾಳಿಯು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ತಿರುಗುತ್ತಿರುತ್ತದೆ.
ಎಲ್ಲವೂ ಒಂದೇ!
ಚಂಡಮಾರುತವನ್ನು ಸೈಕ್ಲೋನ್, ಹರಿಕೇನ್, ಟೈಫೂನ್ (ತೂಫಾನು) ಎಂದೆಲ್ಲ ಕರೆಯಲಾಗುತ್ತದೆ. ವಾಸ್ತವದಲ್ಲಿ ಮೂರು ಪದಗಳ ಅರ್ಥ ಒಂದೇ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಅಟ್ಲಾಂಟಿಕ್ ಪ್ರದೇಶದಲ್ಲಿ ಹರಿಕೇನ್ ಎಂದೂ, ಪೆಸಿಫಿಕ್ ತೀರದಲ್ಲಿ ಟೈಫೂನ್ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್ ಎಂದು ಕರೆಯುವ ಪದ್ಧತಿ ಜಾರಿಯಲ್ಲಿದೆ.
ಹೆಸರು ಇಡಲು ಒಂದು ಪ್ರಕ್ರಿಯೆ
ಪ್ರತಿ ಚಂಡಮಾರುತಕ್ಕೂ ಹೆಸರು ಇಡಲಾಗುತ್ತದೆ. ಪ್ರಸ್ತುತ, ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೂ ಒಂದು ಕೇಂದ್ರ ಅಧಿಕೃತ ಹೆಸರು ಇಡುತ್ತದೆ.
ಮೊದಲು ಚಂಡಮಾರುತಕ್ಕೆ ಇಡಬಹುದಾದ ಎಲ್ಲ ಸಂಭಾವ್ಯ ಹೆಸರುಗಳನ್ನು ಪೆಸಿಫಿಕ್ ಪ್ರದೇಶದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಗೆ ಸಲ್ಲಿಸಬೇಕು.
ಈ ಸಮಿತಿಯು ಹೆಸರುಗಳನ್ನು ತಿರಸ್ಕರಿಸಬಹುದು ಅಥವಾ ಅದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಬಹುದು ಅಥವಾ ತಾನೇ ಹೆಸರು ಇಡಬಹುದು. ಆ ಪ್ರದೇಶದಲ್ಲಿರುವ ವಿವಿಧ ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಅಂತಿಮವಾಗಿ ಹೆಚ್ಚು ಮತ ಗಳಿಸಿದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಇಂಗ್ಲಿಷ್ ವರ್ಣಮಾಲೆಯ ಅನುಕ್ರಮದಲ್ಲಿ ಹೆಸರು ಇಡಲಾಗುತ್ತದೆ.
ಉದಾ: ವರ್ಷದಲ್ಲಿ ಮೊದಲು ಅಪ್ಪಳಿಸುವ ಚಂಡಮಾರುತ್ತಕ್ಕೆ ‘ಎ’ ಅಕ್ಷರದಿಂದ ಆರಂಭವಾಗುವ ಹೆಸರು ಇಡುತ್ತಾರೆ.
ಚಂಡಮಾರುತವು ಅಪಾರ ಹಾನಿ ಮಾಡಿದರೆ, ಡಬ್ಲ್ಯುಎಂಒದ ಹರಿಕೇನ್, ಟೈಫೋನ್ ಮತ್ತು ಸೈಕ್ಲೋನ್ ಸಮಿತಿಯ ಸದಸ್ಯರು, ಈಗಾಗಲೇ ಇಟ್ಟಿರುವ ಹೆಸರನ್ನು ವಾಪಸ್ ಪಡೆಯಲು ಮನವಿ ಮಾಡಬಹುದು. ಸಂಬಂಧಿಸಿದ ಸಮಿತಿಗೆ ಪರ್ಯಾಯ ಹೆಸರನ್ನು ಸೂಚಿಸಬೇಕು. ನಂತರ ಮತದಾನದ ಮೂಲಕ ಹೆಸರು ಆಯ್ಕೆ ಮಾಡಲಾಗುತ್ತದೆ.
ಇಲ್ಲಿ...
ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸದಸ್ಯ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್, ಮ್ಯಾನ್ಮಾರ್, ಮಾಲ್ಡೀವ್ಸ್, ಒಮನ್ ಒಟ್ಟಾಗಿ ಚಂಡಮಾರುತಗಳಿಗೆ ಹೆಸರು ಇಡುವ ನಿರ್ಧಾರವನ್ನು ಕೈಗೊಳ್ಳುತ್ತವೆ. ಈ ತಿಂಗಳ ಆ ರಂಭದಲ್ಲಿ ತಮಿಳುನಾಡು ಮತ್ತು ಕೇರಳ ಕರಾವಳಿಗೆ ಅಪ್ಪಳಿಸಿದ್ದ ಚಂಡಮಾರುತಕ್ಕೆ ‘ನಾದಾ’ ಎಂಬ ಹೆಸರನ್ನು ಒಮನ್ ರಾಷ್ಟ್ರ ಇಟ್ಟಿತ್ತು. ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಯಲ್ಲಿ ‘ನಾದಾ’ ಎಂದರೆ ‘ಏನೂ ಇಲ್ಲ’ ಎಂದರ್ಥ. ರಷ್ಯಾ ಭಾಷೆಯಲ್ಲಿ ‘ಭರವಸೆ’ ಎಂದರ್ಥ.
ವಾರ್ದಾ ಹೆಸರಿಟ್ಟಿದ್ದು ಪಾಕಿಸ್ತಾನ
2016ರ ಡಿಸೆಂಬರ್ ತಿಂಗಳಲ್ಲಿ ಅಪ್ಪಳಿಸಿರುವ ಚಂಡಮಾರುತಕ್ಕೆ ‘ವಾರ್ದಾ’ ಎಂದು ಹೆಸರಿಟ್ಟಿದ್ದು ಪಾಕಿಸ್ತಾನ. ಇದರ ಅರ್ಥ ‘ಕೆಂಪು ಗುಲಾಬಿ’.
ಹಲವು ವಿಧ
ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ ಗಾಳಿಯ ವೇಗದ ತೀವ್ರತೆಯನ್ನು ಆಧರಿಸಿ ಚಂಡಮಾರುತವನ್ನು ಹಲವು ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ.
1. ವಾಯುಭಾರ ಕುಸಿತ: ಕಡಿಮೆ ವೇಗದ ಬಿರುಗಾಳಿಗೆ ಈ ರೀತಿ ಕರೆಯುತ್ತಾರೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 31ರಿಂದ 49 ಕಿ.ಮೀವರೆಗೆ ಇರುತ್ತದೆ.
2. ತೀವ್ರ ವಾಯುಭಾರ ಕುಸಿತ: ವಾಯುಭಾರ ಕುಸಿತ ತೀವ್ರಗೊಂಡಾಗಿನ ಸ್ಥಿತಿ. ಈ ಸ್ಥಿತಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50ರಿಂದ 61 ಕಿ.ಮೀ ನಷ್ಟಿರುತ್ತದೆ.
3. ಚಂಡಮಾರುತ: ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾದರೆ (ಗಾಳಿಯ ವೇಗ ಪ್ರತಿಗಂಟೆಗೆ 62ರಿಂದ 88 ಕಿ.ಮೀನಷ್ಟು) ಅದನ್ನು ಚಂಡಮಾರುತ ಎನ್ನುತ್ತಾರೆ.
4. ತೀವ್ರ ಚಂಡಮಾರುತ(ಸಿವಿಯರ್ ಸೈಕ್ಲೋನಿಕ್ ಸ್ಟಾರ್ಮ್): ಗಾಳಿಯ ವೇಗ ಪ್ರತಿ ಗಂಟೆಗೆ 89ರಿಂದ117 ಕಿ.ಮೀನಷ್ಟಿರುತ್ತದೆ.
5. ಉಗ್ರ ಚಂಡಮಾರುತ (ವೆರಿ ಸಿವಿಯರ್ ಸೈಕ್ಲೋನಿಕ್ ಸ್ಟಾರ್ಮ್): ಪ್ರತಿ ಗಂಟೆಗೆ ಗಾಳಿಯ ವೇಗ 118ರಿಂದ 166 ಕಿ.ಮೀವರೆಗೆ ಇರುತ್ತದೆ.
6. ಅತ್ಯುಗ್ರ ಚಂಡಮಾರುತ: (ಎಕ್ಸ್‌ಟ್ರೀಮ್‌ಲಿ ಸಿವಿಯರ್ ಸೈಕ್ಲೋನಿಕ್ ಸ್ಟಾರ್ಮ್): ಇಲ್ಲಿ ಗಾಳಿಯು ಪ್ರತಿ ಗಂಟೆಗೆ 166ರಿಂದ 221ಕಿ.ಮೀ ವೇಗದಲ್ಲಿ ಬೀಸುತ್ತದೆ.
7. ಸೂಪರ್ ಚಂಡಮಾರುತ: ಚಂಡಮಾರುತಗಳ ವರ್ಗೀಕರಣದಲ್ಲಿ ಇದು ಕೊನೆಯ ವಿಧ. ಪ್ರತಿ ಗಂಟೆಗೆ 222 ಕಿ.ಮೀಗಿಂತ ಹೆಚ್ಚು ವೇಗದ ಚಂಡಮಾರುತ ಈ ವರ್ಗಕ್ಕೆ ಸೇರುತ್ತದೆ.
ಎರಡು ವರ್ಷಗಳಲ್ಲಿ ದೇಶದ ಕರಾವಳಿಗೆ ಅಪ್ಪಳಿಸಿರುವ ಪ್ರಮುಖ ಚಂಡಮಾರುತಗಳು
1. ಹುಡ್‌ಹುಡ್ (2014)
2014ರ ಅಕ್ಟೋಬರ್ ತಿಂಗಳಲ್ಲಿ ಒಡಿಶಾ, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅಪ್ಪಳಿಸಿದ್ದ ಹುಡ್ ಹುಡ್ ಚಂಡಮಾರುತ ಮೇ ತಿಂಗಳಲ್ಲಿ ಅಂಡಮಾನ್ ಸಮುದ್ರದಲ್ಲಿ ಸೃಷ್ಟಿಯಾಗಿತ್ತು. ಪೂರ್ವ ಭಾರತ ಮತ್ತು ನೇಪಾಳದಲ್ಲಿ ಭಾರಿ ಹಾನಿಯನ್ನು ಉಂಟು ಮಾಡಿತ್ತು. ಆಂಧ್ರಪ್ರದೇಶ ಮತ್ತು ವಿಶಾಖಪಟ್ಟಣದಲ್ಲೇ 124 ಮಂದಿ ಮೃತಪಟ್ಟಿದ್ದರು. ಅಂದಾಜು ₹21 ಸಾವಿರ ಕೋಟಿ ನಷ್ಟ ಉಂಟು ಮಾಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಒಡಿಶಾದಲ್ಲಿ ನಾಲ್ಕು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.
2. ಎಆರ್‌ಬಿ–02 (2015)
ಕಳೆದ ವರ್ಷದ ಜೂನ್‌ನಲ್ಲಿ ‘ಎಆರ್‌ಬಿ–02’ ಗುಜರಾತ್‌ಗೆ ಅಪ್ಪಳಿಸಿತ್ತು. ನಂತರ ಸುರಿದ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. 70ಕ್ಕೂ ಹೆಚ್ಚು ಜನರು ಪ್ರಾಣಕಳೆದುಕೊಂಡಿದ್ದರು. ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದವು. ಗಿರ್ ಅರಣ್ಯಕ್ಕೂ ಹಾನಿಯಾಗಿತ್ತು.
3. ರೋನು (2016)
ಈ ವರ್ಷದ ಮೇ ತಿಂಗಳಲ್ಲಿ ದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆ ಸುರಿಯಲು ರೋನು ಚಂಡಮಾರುತ ಕಾರಣವಾಗಿತ್ತು.
ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಹುಟ್ಟಿಕೊಂಡಿದ್ದ ರೋನು, ಬಾಂಗ್ಲಾದೇಶದ ಕರಾವಳಿಗೆ ತಲುಪುವಾಗ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು. ಚೆನ್ನೈನಲ್ಲಿ ಎರಡು ದಶಕಗಳಲ್ಲೇ ದಾಖಲೆಯ ಪ್ರಮಾಣದಲ್ಲಿ ವರ್ಷಧಾರೆಯನ್ನು ಸುರಿಸಿತ್ತು.
4. ಕ್ಯಾಂಟ್ (2016)
ಬಂಗಾಳಕೊಲ್ಲಿಯ ಪೂರ್ವ–ಕೇಂದ್ರ ಭಾಗದಲ್ಲಿ ಅಕ್ಟೋಬರ್‌ನಲ್ಲಿ ಹುಟ್ಟಿಕೊಂಡಿದ್ದ ಕ್ಯಾಂಟ್ ಚಂಡಮಾರುತ, ಭಾರತದಲ್ಲಿ ಹೆಚ್ಚು ಹಾನಿ ಉಂಟು ಮಾಡಲಿಲ್ಲ. ಭಾರಿ ಮಳೆಯನ್ನೂ ತರಲಿಲ್ಲ. ಆದರೆ, ಒಡಿಶಾ ಮತ್ತು ಆಂಧ್ರ ಕರಾವಳಿಯಲ್ಲಿ ಭಾರಿ ಗಾಳಿ ಬೀಸುವುದಕ್ಕೆ ಕಾರಣವಾಯಿತು. ಕಡಲುಬ್ಬರ ಹೆಚ್ಚು ಇದ್ದುದರಿಂದ ಮೀನುಗಾರರು ಸಮುದ್ರದಿಂದ ದೂರ ಉಳಿಯಬೇಕಾಯಿತು.
5. ನಾದಾ (2016)
ಈ ತಿಂಗಳ ಆರಂಭದಲ್ಲಿ ಕೇರಳ ಮತ್ತು ತಮಿಳುನಾಡಿಗೆ ಅಪ್ಪಳಿಸಿದ ಚಂಡಮಾರುತ. ಎರಡೂ ರಾಜ್ಯಗಳಲ್ಲಿ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ, ಹಾನಿ ಮಾಡಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.