ನವದೆಹಲಿ (ಪಿಟಿಐ): ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆಯಲ್ಲಿ ಯಶಸ್ಸುಗಳಿಸಿದ ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ತನ್ನ ಚಂದ್ರಯಾನ–2 ಯೋಜನೆಗೆ ರಷ್ಯಾದ ಸಹಭಾಗಿತ್ವ ಕೈಬಿಟ್ಟು ಅಮೆರಿಕದ ಅಲ್ಪ ನೆರವು ಪಡೆದು ಸಂಪೂರ್ಣ ಸ್ವದೇಶಿ ನಿರ್ಮಿತ ಯೋಜನೆಯನ್ನಾಗಿಸಲು ನಿರ್ಧರಿಸಿದೆ.
ಚಂದ್ರಯಾನ–2 ಯೋಜನೆಗೆ ಸ್ವದೇಶಿ ನಿರ್ಮಿತ ಗಗನನೌಕೆ ಮತ್ತು ಸಾಧನವನ್ನು ಬಳಸಲಾಗುವುದು ಮತ್ತು 2017 ಡಿಸೆಂಬರ್ ಅಥವಾ 2018ರ ಮೊದಲ ಆರು ತಿಂಗಳ ಅವಧಿಯೊಳಗೆ ಈ ನೌಕೆಯನ್ನು ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.
ಮಾಹಿತಿಗಳನ್ನು ಕಲೆಹಾಕಿ ಅವುಗಳನ್ನು ಭೂಮಿಗೆ ಕಳುಹಿಸುವ ಸಾಧನಗಳನ್ನು ಈ ಗಗನನೌಕೆ ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಚಂದ್ರಯಾನ-1 ಯೋಜನೆಯಲ್ಲಿ ಭೂಮಿಯ ಏಕೈಕ ಉಪಗ್ರಹದಲ್ಲಿ ನೀರಿನ ಅಂಶಗಳು ಇದೇ ಎಂಬುದನ್ನು ಪತ್ತೆ ಮಾಡಲು ಇಸ್ರೊ ಯಶಸ್ವಿಯಾಗಿತ್ತು.
ಚಂದ್ರಯಾನ–2 ಯೋಜನೆಗೆ ಗಗನನೌಕೆ ನಿರ್ಮಿಸಿಕೊಡಲು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಆರ್‌ಒಎಸ್‌ಸಿಒಎಸ್) 2010ರಲ್ಲಿ ಒಪ್ಪಿಕೊಂಡಿತ್ತು. ಈ ಯೋಜನೆಯಿಂದ ರಷ್ಯಾವನ್ನು ಕೈಬಿಟ್ಟಿರುವ ಇಸ್ರೊ ಯೋಜನೆಗೆ ಗಗನನೌಕೆಯನ್ನು ತಾನೇ ನಿರ್ಮಿಸಲು ಮುಂದಾಗಿದ್ದು ಚಂದ್ರಯಾನ–2 ಸಂಪೂರ್ಣ ಸ್ವದೇಶಿ ನಿರ್ಮಿತ ಯೋಜನೆ ಆಗಲಿದೆ.
‘ರಷ್ಯದ ಗಗನನೌಕೆಯಲ್ಲಿ ಕೆಲ ಸಮಸ್ಯೆಗಳಿವೆ. ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸುವ ಅಗತ್ಯ ಇದೆ ಎಂದು ಅವರು (ರಷ್ಯಾ) ಹೇಳಿದ್ದಾರೆ. ಹಾಗಾಗಿ ಗಗನನೌಕೆಯನ್ನು ದೇಶಿಯಾಗಿ ನಿರ್ಮಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಇಸ್ರೊದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
* * *
ಉಪಗ್ರಹದ ಸಂಪರ್ಕ ಒಂದು ಸ್ಥಳದಿಂದ ಸಾಧ್ಯವಾಗುವುದಿಲ್ಲ. ಹೆಚ್ಚಿನ ಸ್ಥಳಗಳಿಂದ ಸಂಪರ್ಕ ಸಾಧಿಸಲು ನಾಸಾದ ನೆರವು ಪಡೆಯಲಾಗುತ್ತಿದೆ.
-ಕಿರಣ್ ಕುಮಾರ್, ಇಸ್ರೊ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.