ADVERTISEMENT

ಚುನಾವಣೋತ್ತರ ಸಮೀಕ್ಷೆ: ‘ಎಎಪಿ’ ಮುಂದೆ

ಕಾಂಗ್ರೆಸ್‌ ಶೂನ್ಯ ಸಂಪಾದನೆ; ಚಾಣಕ್ಯ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2015, 14:32 IST
Last Updated 7 ಫೆಬ್ರುವರಿ 2015, 14:32 IST

ನವದೆಹಲಿ (ಪಿಟಿಐ): ದೆಹ­ಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ’ಎಎಪಿ’ ಪಕ್ಷಕ್ಕೆ ಬಹುಮತ ಲಭಿಸುವ ಸಾಧ್ಯತೆ ಇದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

ಶನಿವಾರ ಸಂಜೆ ಮತದಾನ ಮುಗಿದ ಬೆನ್ನಲ್ಲೇ, ‘ದಿ ಇಂಡಿಯಾ ಟುಡೆ - ಸಿಸೆರೊ’ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು ‘ಎಎಪಿ’ 35 ರಿಂದ 43 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಒಟ್ಟು 70 ಸ್ಥಾನಗಳಲ್ಲಿ ‘ಬಿಜೆಪಿ’ 23 ರಿಂದ 29 ಸ್ಥಾನಗಳನ್ನು ಮತ್ತು ಕಾಂಗ್ರೆಸ್‌ 3 ರಿಂದ 5 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಸಿ- ವೋಟರ್‌ ಸಂಸ್ಥೆ ಕೂಡ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ್ದು ‘ಎಎಪಿ’ 31ರಿಂದ 39, ಬಿಜೆಪಿ 27ರಿಂದ 35, ಕಾಂಗ್ರೆಸ್‌ 2 ರಿಂದ 4 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. 

ಶೂನ್ಯ ಸಂಪಾದನೆ: ಮತದಾರನ ಮನದಲ್ಲಿ ಏನಿದೆ ಎನ್ನುವುದನ್ನು ತಿಳಿಯುವ ವಾಹಿನಿಗಳ ಸ್ಪರ್ಧೆಯಲ್ಲಿ ‘ಚಾಣಕ್ಯ ತಂತ್ರ’ ಬಹುತೇಕ ಮುನ್ನಡೆಯಲ್ಲಿದೆ. ‘ಟುಡೇಸ್‌ ಚಾಣಕ್ಯ’ ಸಮೀಕ್ಷೆ  ಪ್ರಕಾರ ಈ ಬಾರಿ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನವೂ ಲಭಿಸುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಲಿದೆ ಎಂದಿದೆ. ‘ಎಎಪಿ’ 48 ಮತ್ತು ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ದೆಹಲಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಕೇಜ್ರಿವಾಲ್‌ಗೆ ಶೇ 53ರಷ್ಟಿದೆ ಎಂದಿದೆ.

ADVERTISEMENT

ಎಬಿಪಿ- ನೀಲ್ಸನ್‌ ಸಮೀಕ್ಷೆ ಪ್ರಕಾರ ‘ಎಎಪಿ’ 39 ಮತ್ತು ಬಿಜೆಪಿ 28 ಸ್ಥಾನಗಳನ್ನು ಗೆಲ್ಲಲಿದೆ.  36 ಸ್ಥಾನಗಳನ್ನು ಗೆಲ್ಲುವ ಪಕ್ಷ ದೆಹಲಿಯಲ್ಲಿ ಸರ್ಕಾರ  ರಚಿಸಲಿದೆ.‌

2013ರ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದಿದ್ದ ‘ಎಎಪಿ’, 8 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಜತೆ  ಸೇರಿ ಸಮ್ಮಿಶ್ರ ಸರ್ಕಾರ ರಚಿಸಿ 49 ದಿನಗಳ ಆಡಳಿತ ನಡೆಸಿತ್ತು. ಈ ಚುನಾವಣೆಯಲ್ಲಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ನಿರ್ಬಂಧ: ಫೆ.7ರಂದು ಮತದಾನ ಮುಗಿಯುವವರೆಗೆ (ಬೆಳಿಗ್ಗೆ 7 ಗಂಟೆಯಿಂದ ಸಂಜೆ 6.30ರವರಗೆ) 48 ಗಂಟೆಗಳ ಕಾಲ ಚುನಾವಣೋತ್ತರ ಸಮೀಕ್ಷೆಗಳನ್ನು  ಪ್ರಸಾರ ಮಾಡಬಾರದು, ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.