ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನಗರದಲ್ಲಿ ತೀವ್ರ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಚೆನ್ನೈ ಮಹಾ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಅಧಿಕಾರಿಗಳು ನೀರಿಗಾಗಿ ನಗರದ ಹೊರಭಾಗದಲ್ಲಿರುವ ಕೆರೆ, ಕಲ್ಲಿನ ಕ್ವಾರಿಗಳು ಹಾಗೂ ಸಮುದ್ರ ನೀರಿನ ಮೇಲೆ ಅವಲಂಬಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮೂರು ವರ್ಷಗಳಿಂದ ಬರ ಎದುರಿಸುತ್ತಿರುವ ಚೆನ್ನೈನಲ್ಲಿ ಈ ಬಾರಿಯೂ ಮಳೆ ಬೀಳದ ಪರಿಣಾಮ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಚೆನ್ನೈನ ಹಲವು ಭಾಗಗಳಿಗೆ ತಾತ್ಕಾಲಿಕವಾಗಿ ಖಾಸಗಿ ಟ್ಯಾಂಕರ್‌ಗಳಿಂದ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ. ದಿನೇ ದಿನೇ ಸಮಸ್ಯೆ ಉಲ್ಬಣವಾಗುತ್ತಿರುವುದರಿಂದ ತಮಿಳುನಾಡು ಸರ್ಕಾರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ.
ಇದನ್ನೂ ಓದಿಹೋಟೆಲ್ನಲ್ಲಿ ಕೈತೊಳೆಯುವ ನಲ್ಲಿಗಳು ಬಂದ್
ಚೆನ್ನೈನ ನಾಲ್ಕು ಅಣೆಕಟ್ಟೆಗಳಲ್ಲಿ ನೀರು ತಳಮಟ್ಟ ತಲುಪಿರುವುದು, ನಗರದ 88 ಬಾವಿಗಳಲ್ಲಿ ನೀರು ಇಲ್ಲದೆ ಒಣಗಿ ಹೋಗಿದ್ದು, ಇಲ್ಲಿನ ಪ್ರಮುಖ ಪ್ರದೇಶಗಳಾದ ಟಿ.ನಗರ, ಕೂಲೈ ಮೇಡು, ಮದುರವೋಯಲ್ , ಅಡ್ಯಾರ್, ವಡಪಳನಿ, ಅಶೋಕನಗರ ಪ್ರದೇಶಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು ನೀರೇ ಇಲ್ಲದಂತಾಗಿದೆ.
ಈ ಬಾರಿಯ ಮುಂಗಾರು ಕೈಕೊಟ್ಟ ಪರಿಣಾಮ ಹಾಗೂ ನಗರದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತಕಂಡಿರುವುದು ಸಮಸ್ಯೆ ಇಷ್ಟೊಂದು ಉಲ್ಬಣವಾಗಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಚನ್ನೈನಗರಕ್ಕೆ 830 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಕೆರೆ, ಕಟ್ಟೆಗಳು, ಉಪ್ಪು ನೀರಿನ (ಸಮುದ್ರ) ಪುನರ್ ಬಳಕೆ ಮಾಡುವ ಘಟಕಗಳಿಂದ ಸುಮಾರು 530 ಮಿಲಿಯನ್ ಲೀಟರ್ ನೀರನ್ನು ಸರ್ಕಾರ ಸರಬರಾಜು ಮಾಡುತ್ತಿದೆ. ಉಳಿದ 300 ಮಿಲಿಯನ್ ಲೀಟರ್ ನೀರು ಸಿಗದೆ ಪ್ರತಿದಿನ ಸಮಸ್ಯೆ ಎದುರಿಸುವಂತಾಗಿದೆ.
ಚೆನ್ನೈನ ಕೊಯಂಬೇಡು, ವಲಸರವಕ್ಕಂ, ವಿರುಗಂಬಾಕ್ಕಂ, ಮಾಂಬಳಂ ಪ್ರದೇಶಗಳು, ಪಾಲವಕ್ಕಂ, ಕೊಟ್ಟಿವಕ್ಕಂ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸಾಮಾನ್ಯಮಟ್ಟಕ್ಕಿಂತ 6.22 ಮೀಟರ್ ಗಳಿಂದ 7.6 ಮೀಟರ್‌ಗಳು ತಳಮಟ್ಟಕ್ಕೆ ತಲುಪಿದೆ. ಇಷ್ಟೊಂದು ತಳಮಟ್ಟದಿಂದ ನೀರು ಮೇಲೆ ಬರಲು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಚೆನ್ನೈನ ಬಹುತೇಕ ಭಾಗಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ.
ನಗರ ತೊರೆಯುತ್ತಿರುವ ಜನ: ತೀವ್ರ ನೀರಿನ ಸಮಸ್ಯೆಯಿಂದಾಗಿ ಚೆನ್ನೈ ನಗರ ನಿವಾಸಿಗಳು ಮನೆಗಳನ್ನು ಖಾಲಿ ಮಾಡಿಕೊಂಡು ದೇಶದ ಇತರೆ ಭಾಗಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಕಳೆದ ಮಾರ್ಚ್‌ನಿಂದಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಸಾಧ್ಯವಿರುವ ಇತರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸ, ದಿನ ನಿತ್ಯದ ಊಟ, ಸ್ನಾನ ಮುಂತಾದ ಕ್ರಿಯೆಗಳಿಗೆ ನೀರಿನ ಅಗತ್ಯವಿದ್ದು, ತಾವು ಇಲ್ಲಿ ನೆಲೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕೆಎಸ್ ಆರ್ ಟಿಸಿಗೆ ಸಮಸ್ಯೆ ಬಿಸಿ:ನೀರಿನ ಸಮಸ್ಯೆಯಿಂದಾಗಿ ರಾಜ್ಯದಿಂದ ತೆರಳುವ ಕೆಎಸ್ ಆರ್ ಟಿಸಿ ಸಂಸ್ಥೆಯ ಸಿಬ್ಬಂದಿ ಚೆನ್ನೈಗೆ ಹೋಗಲು ನಿರಾಕರಿಸುತ್ತಿದ್ದಾರೆ. ಚೆನ್ನೈನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಹೊರ ರಾಜ್ಯದಿಂದ ಬರುವ ಬಸ್ ಚಾಲಕರು ಹಾಗೂ ಸಿಬ್ಬಂದಿಗೆ ನೀರಿನ ವ್ಯವಸ್ಥೆ ಮಾಡಿದ್ದರೂ ಈ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಲ್ಲದೆ, ಅಲ್ಲಿನ ಸರ್ಕಾರ ಕೇವಲ ಕುಡಿಯಲು ಮಾತ್ರ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ, ಸ್ನಾನ ಮಾಡದಿದ್ದರೂ ಮುಖ ತೊಳೆದುಕೊಳ್ಳಲು ಉಪ್ಪು ನೀರು ಒದಗಿಸುತ್ತಿದ್ದಾರೆ. ಇದರಿಂದಾಗಿ ಇದು ತಮಗೆ ಒಗ್ಗುವುದಿಲ್ಲ ಎಂಬುದು ಚಾಲಕ ಹಾಗೂ ಸಿಬ್ಬಂದಿಯ ಅಳಲು. ಕೆಲವು ಸಿಬ್ಬಂದಿಯ ಮನವೊಲಿಸಿರುವ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ರಾಜ್ಯದಿಂದಲೇ ಅಲ್ಲಿಗೆ ಬೇಕಾಗುವಷ್ಟು ನೀರನ್ನು ತೆಗೆದುಕೊಂಡು ಹೋಗಿ, ಮತ್ತೆ ಚನ್ನೈನಿಂದ ಮರಳಿದ ನಂತರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂಬ ಸಲಹೆ ನೀಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಚಾಲಕರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.
ಮನೆಯಿಂದಲೇ ಕೆಲಸ ಮಾಡಿ:ನೀರಿನ ಅಭಾವ ಕಾಣಿಸಿಕೊಂಡ ಕಾರಣ ಚೆನ್ನೈನ ಸಾಫ್ಟ್ ವೇರ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀರಿನ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದ್ದು, ಮನೆಯಿಂದಲೇ ಕೆಲಸ ಮಾಡಿ ಎಂದು ತಿಳಿಸಿವೆ. ಚೆನ್ನೈನ ಸಿರುಸೇರಿ ಪ್ರದೇಶದಲ್ಲಿರುವ ಟಾಟಾಕನ್ಸಲ್ಟೆನ್ಸಿ ಸರ್ವೀಸಸ್ ಹಾಗೂ ಕಾಗ್ನಿಜೆಂಟ್ ಟೆಕ್ನಾಲಜಿ ಸರ್ವೀಸಸ್ ಸಂಸ್ಥೆಗಳು ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿವೆ. ಸಂಸ್ಥೆಯ ಆವರಣದಲ್ಲಿಯೇ ಕೆರೆ ನಿರ್ಮಾಣ ಮಾಡಿಕೊಂಡು ಅಂತರ್ಜಲ ಕುಸಿಯದಂತೆ ಕಾಪಾಡಿಕೊಂಡಿವೆ. ಆದರೆ ಉಳಿದ ಕಂಪನಿಗಳು ಹಾಗೂ ಹಳೆ ಮಹಾಬಲಿಪುರಂನ ಸಾಫ್ಟ್ ವೇರ್ ಕಂಪನಿಗಳಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದು, ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿವೆ. ಪರ್ಯಾಯ ವ್ಯವಸ್ಥೆಯಾಗಿ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿ, ಕಚೇರಿಯಲ್ಲಿ ಕೆಲಸ ಮಾಡಲೇಬೇಕಾದ ಉದ್ಯೋಗಿಗಳು ತಮ್ಮ ಮನೆಯಿಂದಲೇ ಪೇಪರ್ ಪ್ಲೇಟ್ ಗಳನ್ನು ತರುವುದು ಕಡ್ಡಾಯ ಎಂದು ತಿಳಿಸಿವೆ.
ತಮಿಳುನಾಡು ಸರ್ಕಾರ ಚೆನ್ನೈ ನೀರಿನ ಸಮಸ್ಯೆ ಪರಿಹಾರಕ್ಕಾಗಿ ತುರ್ತು ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಪ್ರತಿದಿನ ಅಗತ್ಯವಿರುವ 300 ಮಿಲಿಯನ್ ಲೀಟರ್ ನೀರು ಪೂರೈಕೆಗಾಗಿ ಪರದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.