ADVERTISEMENT

ಜಯಲಲಿತಾಗೆ 4 ವರ್ಷ ಜೈಲು, 100 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2014, 13:16 IST
Last Updated 27 ಸೆಪ್ಟೆಂಬರ್ 2014, 13:16 IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ದೋಷಿ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಶನಿವಾರ ತೀರ್ಪು ನೀಡಿದ್ದು, 4 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ 100 ಕೋಟಿ ದಂಡ ವಿಧಿಸಿದೆ.

ಶನಿವಾರ ಮಧ್ಯಾಹ್ನದ ವೇಳೆಗೆ ತೀರ್ಪು ಹೊರಬಿದ್ದರೂ, ಅಪರಾಧಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸುವುದನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸ­ಲಾಗಿತ್ತು.

ವಿಶೇಷ  ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ, ನಂತರ ಜಯ­ಲಲಿತಾ ಸೇರಿ ನಾಲ್ವರು ತಪ್ಪಿತಸ್ಥರಿಗೆ  ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಜಯಲಲಿತಾ ಅವರಿಗೆ 4 ವರ್ಷ ಜೈಲು, 100 ಕೋಟಿ ದಂಡ, ಇತರೆ ಮೂವರು ಆರೋಪಿಗಳಿಗೆ ತಲಾ 10 ಕೋಟಿ ದಂಡ ಮತ್ತು 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ತಪ್ಪಿತಸ್ಥರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸ­ಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

18 ವರ್ಷಗಳಷ್ಟು ಹಳೆಯದಾದ ಈ ಪ್ರಕರಣವನ್ನು ಸುಪ್ರೀಂಕೋರ್ಟ್‌ 2003ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಒಟ್ಟು ಐವರು ನ್ಯಾಯಾಧೀಶರು ಇದುವರೆಗೆ ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಇವರಲ್ಲಿ ಮೈಕಲ್ ಡಿ ಕುನ್ಹಾ ಅವರು   ಕೊನೆಯವರು.

ಈ ಪ್ರಕರಣದಲ್ಲಿ ಜಯಲಲಿತಾ ಅವರಲ್ಲದೇ  ಅವರ ಆಪ್ತರಾದ ಶಶಿಕಲಾ ನಟರಾಜನ್‌, ಇಳವರಸಿ ಹಾಗೂ ಜಯ­ಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾ­ಕ­ರನ್‌ ಅವರ ಮೇಲಿನ ಆರೋಪವೂ ಸಾಬೀತಾಗಿದೆ.

ಈ ತೀರ್ಪಿನಿಂದಾಗಿ ಜಯಲಲಿತಾ ಅವರ ರಾಜಕೀಯ ಭವಿಷ್ಯ ಏನಾಗಲಿದೆ  ಎಂಬ ಕುತೂಹಲ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT