ADVERTISEMENT

`ಜಲಿಯನ್‌ವಾಲಾಬಾಗ್ ನರಮೇಧ ನಾಚಿಕೆಗೇಡು'

ಸ್ವರ್ಣಮಂದಿರದಲ್ಲಿ ಕರಸೇವೆ ಮಾಡಿದ ಬ್ರಿಟನ್ ಪ್ರಧಾನಿ ಕ್ಯಾಮೆರಾನ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST

ಅಮೃತಸರ (ಪಿಟಿಐ/ಐಎಎನ್‌ಎಸ್): ಬ್ರಿಟಿಷ್ ಆಡಳಿತದ ಸಮಯದಲ್ಲಿ 1,000ಕ್ಕೂ ಹೆಚ್ಚು ಭಾರತೀಯ ಪ್ರತಿಭಟನಾಕಾರರು ಜಲಿಯನ್‌ವಾಲಾಬಾಗ್‌ನಲ್ಲಿ ಬ್ರಿಟಿಷ್ ಸೈನಿಕರ ಗುಂಡಿಗೆ ಬಲಿಯಾದ 94 ವರ್ಷಗಳ ನಂತರ, ಬ್ರಿಟನಿನ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಇದು `ಅತ್ಯಂತ ನಾಚಿಕೆಗೇಡಿನ ಘಟನೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ  ದುರಂತಕ್ಕೆ ಬಹಿರಂಗ ಕ್ಷಮೆ ಯಾಚಿಸುವ ಗೋಜಿಗೆ ಅವರು ಹೋಗಿಲ್ಲ. ತಮ್ಮ ಭಾರತ ಪ್ರವಾಸದ ಮೂರನೇ ದಿನವಾದ ಬುಧವಾರ ಕ್ಯಾಮೆರಾನ್ ಅಮೃತಸರಕ್ಕೆ ಭೇಟಿ ನೀಡಿದರು.

ಜಲಿಯನ್‌ವಾಲಾಬಾಗ್‌ಗೆ ತೆರಳುವ ತಿಳಿ ಕೇಸರಿ ಬಣ್ಣ ಬಳಿದ ಕಿರಿದಾದ ಓಣಿಯಲ್ಲಿ ನಡೆದುಕೊಂಡ ಹೋದ ಕ್ಯಾಮೆರಾನ್ ತಮ್ಮ ಮೊಣಕಾಲನ್ನು ಬಗ್ಗಿಸಿ ತಲೆ ಬಾಗಿ ನೂರಾರು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೈಜೋಡಿಸಿ ಒಂದು ನಿಮಿಷ ಮೌನ ಆಚರಿಸಿದರು. ಸುಮಾರು 25 ನಿಮಿಷಗಳ ಕಾಲ ಅಲ್ಲಿಯೇ ಇದ್ದರು.

ಅವರು ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡಿದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮೊದಲ ಬ್ರಿಟನ್ ಪ್ರಧಾನಿಯಾಗಿದ್ದಾರೆ. ಬ್ರಿಟನ್ ರಾಣಿ ಎಲಿಜಬೆತ್ ತಮ್ಮ ಪತಿ ಫಿಲಿಪ್ ಜತೆ 1997ರಲ್ಲಿ ಅಮೃತ್‌ಸರ್‌ಗೆ ಭೇಟಿ ನೀಡಿದ 16 ವರ್ಷಗಳ ನಂತರ ಕ್ಯಾಮೆರಾನ್ ಈ ನಗರಕ್ಕೆ ಭೇಟಿ ನೀಡಿದ್ದಾರೆ.

`ಇದು ಬ್ರಿಟಿಷ್ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ವಿನ್‌ಸ್ಟನ್ ಚರ್ಚಿಲ್ ಆ ಸಂದರ್ಭದಲ್ಲಿ ಅದನ್ನು ರಾಕ್ಷಸೀ ಕೃತ್ಯ ಎಂದು ಬಣ್ಣಿಸಿರುವುದು ಸಹ ಸರಿಯಾಗಿಯೇ ಇದೆ. ಇಲ್ಲಿ ಆಗಿದ್ದನ್ನು ನಾವು ಎಂದಿಗೂ ಮರೆಯಬಾರದು. ಜಗತ್ತಿನಾದ್ಯಂತ ನಡೆಯುವ ಎಲ್ಲ ಶಾಂತಿಯುತ ಪ್ರತಿಭಟನೆಗಳನ್ನೂ ಬ್ರಿಟನ್ ಬೆಂಬಲಿಸುತ್ತದೆ' ಎಂದು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಬರೆದ ಸಂದೇಶದಲ್ಲಿ ಕ್ಯಾಮೆರಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುರಂತದ ವಿವರ: ಜಲಿಯನ್‌ವಾಲಾ ಬಾಗ್‌ನಲ್ಲಿ 1919ರ ಏಪ್ರಿಲ್ 13ರಂದು ಈ ದುರಂತ ನಡೆದಿತ್ತು. 15-20 ಸಾವಿರ ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿದ ಬ್ರಿಟಿಷ್ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಇ. ಎಚ್. ಡಯರ್ 50 ಜನ ಬಂದೂಕುಧಾರಿಗಳಿಗೆ ಆ ಗುಂಪಿನ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದ. ಮುದ್ದುಗುಂಡಿನ ಸಂಗ್ರಹ ಖಾಲಿಯಾಗುವವರೆಗೂ 10 ನಿಮಿಷಗಳ ಕಾಲ ಸತತವಾಗಿ ಗುಂಡು ಹಾರಿಸಲಾಯಿತು. ಈ ಘಟನೆಯಲ್ಲಿ 1000ಕ್ಕೂ ಹೆಚ್ಚು ಜನ ಅಮಾಯಕರು ಸತ್ತು, 1100 ಜನ ಗಾಯಗೊಂಡಿದ್ದರು.

ಸ್ವರ್ಣಮಂದಿರ ಭೇಟಿ: ಜಲಿಯನ್‌ವಾಲಾಬಾಗ್‌ಗೆ ಭೇಟಿ ನೀಡುವುದಕ್ಕೂ ಮುನ್ನ ಕ್ಯಾಮೆರಾನ್ ಸ್ವರ್ಣಮಂದಿರಕ್ಕೆ ಭೇಟಿ ನೀಡಿದರು. ದಟ್ಟ ಬಣ್ಣದ ಸೂಟ್ ಧರಿಸಿದ್ದ ಬ್ರಿಟನ್ ಪ್ರಧಾನಿ ಗರ್ಭಗುಡಿ ಪ್ರವೇಶಿಸುವ ಮುನ್ನ ಸಿಖ್ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿಕೊಂಡಿದ್ದರು. ಅಲ್ಲಿ ಅವರಿಗೆ ಸಾಂಪ್ರದಾಯಿಕ ಗೌರವ ಸಲ್ಲಿಸಲಾಯಿತು.

ಸ್ವರ್ಣಮಂದಿರಲ್ಲಿ ಒಂದು ಗಂಟೆ ಕಾಲ ಕಳೆದ ಕ್ಯಾಮೆರಾನ್ ಸಾಂಕೇತಿಕ `ಕರ ಸೇವೆ'ಯನ್ನೂ ಮಾಡಿದರು. 10 ಸಾವಿರ ಜನರಿಗೆ ಒಮ್ಮೆಲೇ ಊಟ ಒದಗಿಸುವ ಅಲ್ಲಿನ ಅಡುಗೆ ಮನೆಗೆ ಭೇಟಿ ನೀಡಿದರು. ಭಕ್ತರ ಜತೆ ಮಾತನಾಡಿದರು.

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹಾಗೂ ಸ್ವರ್ಣಮಂದಿರದ ಉಸ್ತುವಾರಿ ಹೊತ್ತಿರುವ ಶೀರೊಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಅಧ್ಯಕ್ಷ ಅವತಾರ್ ಸಿಂಗ್ ಮಕ್ಕರ್ ಕ್ಯಾಮೆರಾನ್ ಜತೆಗಿದ್ದರು. ಕ್ಯಾಮೆರಾನ್ ಅವರ ಈ ಭೇಟಿಯಿಂದ ಸಿಖ್ ಸಮುದಾಯವನ್ನು ಈಗ ವಿಶ್ವದಾದ್ಯಂತ ಗುರುತಿಸಲು ಸಾಧ್ಯವಾಗುತ್ತದೆ ಎಂದು ತೀವ್ರವಾದಿ ಸಿಖ್ ಗುಂಪು `ದಲ್ ಖಾಲ್ಸಾ' ಅಭಿಪ್ರಾಯ ಪಟ್ಟಿದೆ.

`ಭಾರತ- ಬ್ರಿಟನ್ ಬಾಂಧವ್ಯ ಭದ್ರವಾಗಲಿ'
ನವದೆಹಲಿ (ಪಿಟಿಐ):
ಭಾರತ- ಬ್ರಿಟನ್ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮುಖ್ಯವಾಗಿ ವ್ಯಾಪಾರ, ಹೂಡಿಕೆ, ರಕ್ಷಣಾ ವಲಯಗಳಲ್ಲಿ ಮತ್ತಷ್ಟು ಗಟ್ಟಿ ಆಗಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.

ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರನ್ನು ಸ್ವಾಗತಿಸಿದ ಮುಖರ್ಜಿ, ಈ ಭೇಟಿಯಿಂದ ಭಾರತ ಕುರಿತು ಬ್ರಿಟನ್ ಬದ್ಧತೆ ಏನು ಎನ್ನುವುದು ಅರ್ಥವಾಗುತ್ತದೆ ಎಂದರು. ಉಭಯ ದೇಶಗಳ ನಡುವೆ ಹೊಸದಾದ, ವಿಶೇಷ ಬಾಂಧವ್ಯ ಬೆಳೆಸಲು ಬ್ರಿಟನ್ ತೋರಿಸಿದ ಆಸಕ್ತಿಮೆಚ್ಚುವಂತಹದ್ದು. ಭಾರತ ಸಹ ಈ ವಿಚಾರದಲ್ಲಿ ಆಸಕ್ತಿ ಹೊಂದಿದೆ ಎಂದು ಮುಖರ್ಜಿ ಹೇಳಿದ್ದಾಗಿ ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಭಯೋತ್ಪಾದನೆ ವಿರುದ್ಧ ಉಭಯ ದೇಶಗಳು ಪರಸ್ವರ ಸಹಕಾರ ತೋರುವಲ್ಲಿ ಪ್ರಾಮುಖ್ಯತೆನೀಡಬೇಕು ಎಂದು ಕ್ಯಾಮೆರಾನ್ ಅವರನ್ನು ಕೋರಿದರು. ವ್ಯಾಪಾರ, ಬಂಡವಾಳ ಹೂಡಿಕೆ, ರಕ್ಷಣೆ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಉಭಯ ದೇಶಗಳ ನಡುವೆ ಪಾಲುದಾರಿಕೆ ಮತ್ತಷ್ಟು ಬಲಿಷ್ಠವಾಗುವಂತೆ ನೋಡಿಕೊಳ್ಳುವ ಅಗತ್ಯ ಇದೆ ಎಂದಿದ್ದಾರೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಕಾಯಂ ಸ್ಥಾನಕ್ಕೆ ಸಂಬಂಧಿಸಿದಂತೆ ಬ್ರಿಟನ್ ತನ್ನ ಬೆಂಬಲಕ್ಕೆ ಬದ್ಧವಾಗಿರುವುದನ್ನು ರಾಷ್ಟ್ರಪತಿ ಶ್ಲಾಘಿಸಿದರು. ಅಂತರರಾಷ್ಟ್ರೀಯ ವೇದಿಕೆಗಳಾದ ಯೂರೋಪ್ ಸಂಘಟನೆ, ಜಿ-8, ಜಿ-20ಗಳಲ್ಲಿ ಭಾರತದ ನಿಲುವವನ್ನು ಬ್ರಿಟನ್ ಬೆಂಬಲಿಸಿದೆ ಎಂದು ಮುಖರ್ಜಿ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.