ADVERTISEMENT

ಜೀವಕ್ಕೆ ಕುತ್ತು ತರುವ ‘ಮಾಂಜಾ’ ದಾರ ನಿಷೇಧ

ಪಿಟಿಐ
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST
ಜೀವಕ್ಕೆ ಕುತ್ತು ತರುವ ‘ಮಾಂಜಾ’ ದಾರ ನಿಷೇಧ
ಜೀವಕ್ಕೆ ಕುತ್ತು ತರುವ ‘ಮಾಂಜಾ’ ದಾರ ನಿಷೇಧ   

ನವದೆಹಲಿ (ಪಿಟಿಐ):  ಪ್ರಾಣಿ–ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಅಪಾಯ ತರಬಲ್ಲ ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ ‘ಮಾಂಜಾ’ ದಾರ ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬುಧವಾರ ಮಧ್ಯಂತರ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಗಾಳಿಪಟ ಹಾರಿಸಲು ಲೋಹ ಮತ್ತು ಗಾಜಿನ ಪುಡಿ ಲೇಪಿತ ‘ಮಾಂಜಾ’ ದಾರ ಬಳಸುವುದು ಪರಿಸರಕ್ಕೆ ಹಾನಿಕಾರ ಎಂದು ಸ್ವತಂತ್ರ ಕುಮಾರ್‌ ನೇತೃತ್ವದ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ನೈಲಾನ್, ಚೈನೀಸ್ ಮತ್ತು ಗಾಜು ಲೇಪಿತ ಹತ್ತಿ ದಾರಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಿರುವ ಪೀಠವು, ಗಾಳಿಪಟ ಹಾರಿಸಲು ಇಂತಹ ದಾರ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸುವಂತೆ ಭಾರತೀಯ ಮಾಂಜಾ ಸಂಘಟನೆಗೆ ನಿರ್ದೇಶ ನೀಡಿದೆ. 

ಪ್ರಾಣಿ ದಯಾ ಸಂಘ ಪೀಪಲ್ಸ್‌ ಫಾರ್‌ ಎಥಿಕಲ್‌ ಟ್ರಿಟ್‌ಮೆಂಟ್‌ ಆಫ್‌ ಅನಿಮಲ್ಸ್‌ (ಪೆಟಾ) ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ಹೊರಡಿಸಿದೆ.

ಮಕರ ಸಂಕ್ರಾತಿ ಹಬ್ಬ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಗಾಳಿಪಟ ಹಾರಿಸಲು ಮಾಂಜಾ ಹೆಚ್ಚು ಬಳಕೆಯಾಗುತ್ತದೆ ಎಂದು ಪೆಟಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿತ್ತು.

ಚೈನಿಸ್‌ ಮಾಂಜಾ ತಯಾರಿಕೆ, ಆಮದು, ಮಾರಾಟ ಮತ್ತು ಬಳಕೆ ಮೇಲೆ  ಅಲಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶದಲ್ಲಿ ಸಂಪೂರ್ಣ ನಿಷೇಧ ಹೇರಿದ ಆದೇಶವನ್ನೂ ಪೆಟಾ ವಿಚಾರಣೆ ವೇಳೆ ಪೀಠದ ಗಮನಕ್ಕೆ ತಂದಿತ್ತು.  ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ 1ಕ್ಕೆ ಮುಂದೂಡಲಾಗಿದೆ.

ಆರೋಗ್ಯಕ್ಕೆ ತೊಂದರೆ
ಗಾಜಿನ ಪುಡಿ ಲೇಪಿತ ದಾರದ ಬಳಕೆಯಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗೂ ಕಾರಣವಾಗುತ್ತದೆ ಇದೂ ಅಲ್ಲದೆ ಲೋಹ, ಗಾಜು ಮತ್ತು ಇತರ ವಸ್ತುಗಳನ್ನು ಬಳಸಿ ಮಾಂಜಾ ತಯಾರಿಸುವುದರಿಂದ ಉತ್ತಮ ವಿದ್ಯುತ್‌ ವಾಹಗಳೂ ಆಗಿವೆ ಎಂದು ಪೆಟಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.