ನವದೆಹಲಿ: ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರ ವಿಷಯದಲ್ಲಿ ತುಳಿದ ಹಾದಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಸಮಯದಲ್ಲೇ ಕಾಕತಾಳೀಯವೆಂಬಂತೆ ಅವರದೇ ಹೆಸರಿನಲ್ಲಿರುವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಭಾರತ ವಿರೋಧಿ ಮತ್ತು ಕಾಶ್ಮೀರ ವಿಮೋಚನೆ ಪರ ಘೋಷಣೆ ಕೂಗಿ ದೊಡ್ಡ ವಿವಾದ ಹುಟ್ಟುಹಾಕಿದೆ.
‘ಅಂಬೇಡ್ಕರ್–ಪೆರಿಯಾರ್ ಅಧ್ಯಯನ ಕೇಂದ್ರ ಸ್ಥಾಪನೆ’ಯಿಂದ ಮದ್ರಾಸ್ ಐಐಟಿಯಲ್ಲಿ, ಮುಜಫ್ಪರ್‌ನಗರ ಗಲಭೆ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನದಿಂದ ಹೈದರಾಬಾದ್ ಸೆಂಟ್ರಲ್ ವಿವಿಯಲ್ಲಿ ನಡೆದ ವಿವಾದದ ಬಳಿಕ ದೆಹಲಿಯ ಜವಾಹರಲಾಲ್ ನೆಹರೂ ವಿವಿ (ಜೆಎನ್‌ಯು) ಯಲ್ಲಿ ಚಳವಳಿ ಭುಗಿಲೆದ್ದಿದೆ.
ಮದ್ರಾಸ್ ಐಐಟಿ, ಹೈದರಾಬಾದ್ ವಿವಿಗಳಂತೆ ಜೆಎನ್‌ಯುದಲ್ಲೂ ಎಡ ಮತ್ತು ಬಲಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾಗಿರುವ ವಿದ್ಯಾರ್ಥಿಗಳ ಮಧ್ಯೆ ವೈಚಾರಿಕ ಸಂಘರ್ಷ ನಡೆಯುತ್ತಿದೆ.
ಸಂಸತ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಪ್ರತಿಭಟಿಸಲು ಕಳೆದ 9ರಂದು ಸೋಮವಾರ ಎಡಪಂಥೀಯ ವಿದ್ಯಾರ್ಥಿಗಳ ಬಣ ಕಾರ್ಯಕ್ರಮ ಏರ್ಪಡಿಸಿತ್ತು. ವಿವಿ ಅದಕ್ಕೆ ಅನುಮತಿ ನೀಡಲಿಲ್ಲ. ಆದರೂ ಕಾರ್ಯಕ್ರಮ ನಡೆಯಿತು. ಇದರ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳು ಪ್ರತಿಭಟಿಸಿದರು. ಇದೇ ಸಂದರ್ಭ ಬಳಸಿಕೊಂಡು ಕೆಲವರು ಕಾಶ್ಮೀರ ವಿಮೋಚನೆ ಪರ ಮತ್ತು ಭಾರತದ ವಿರುದ್ಧ ಘೋಷಣೆ ಕೂಗಿದರು. ಇದರಿಂದಾಗಿ ಜೆಎನ್‌ಯು ‘ರಾಷ್ಟ್ರ ದ್ರೋಹಿ’ ಎಂಬ ಆರೋಪ ಹೊತ್ತಿದೆ.
ಅಫ್ಜಲ್ ಗುರು ನೆನಪಿನ ಕಾರ್ಯಕ್ರಮ ಸಂಘಟಿಸಿದ ವಿದ್ಯಾರ್ಥಿಗಳ ಗುಂಪಿನಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನಯ್ಯಾ ಕುಮಾರ್ ಅವರಿದ್ದರು ಎಂದು ಆರೋಪಿಸಲಾಗಿದೆ. ರಾಷ್ಟ್ರ ದ್ರೋಹದ ಆರೋಪದ ಮೇಲೆ ಬಂಧಿತರಾದ ಅವರು ಪೊಲೀಸರ ವಶದಲ್ಲಿದ್ದಾರೆ. ಇವರು ಸಿಪಿಐಗೆ ಸೇರಿದ ಎಐಎಸ್‌ಎಫ್ ಮುಖಂಡ. ಇನ್ನೂ ಅನೇಕರು ಇಂತಹದೇ ಆರೋಪ ಹೊತ್ತಿದ್ದಾರೆ.
ನಮ್ಮ ಕೆಲವೇ ಅತ್ಯುತ್ತಮ ವಿವಿಗಳಲ್ಲಿ ಒಂದಾಗಿರುವ ಜೆಎನ್‌ಯು ಶೈಕ್ಷಣಿಕ ಹಾಗೂ ಬೌದ್ಧಿಕವಾಗಿ ಅತೀ ಎತ್ತರದಲ್ಲಿ ನಿಲ್ಲುತ್ತದೆ. ಇಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳ ಆಲೋಚನಾ ಲಹರಿಯೇ ಬೇರೆ. ಈ ರೀತಿಯ ವಾತಾವರಣ ಬೇರೆ ವಿವಿಗಳಲ್ಲಿ ಸಿಗುವುದಿಲ್ಲ. ‘ನ್ಯಾಕ್’ ಸಮಿತಿ 2012ರಲ್ಲಿ ಈ ವಿವಿಗೆ ಅತ್ಯಧಿಕ ಅಂಕಗಳನ್ನು ನೀಡಿದೆ. ಈ ವಿವಿಯಲ್ಲಿ ಪ್ರವೇಶ ಸಿಗುವುದು ಕಷ್ಟ. ಅಕಸ್ಮಾತ್ ಸಿಕ್ಕಿದರೆ ಅದೃಷ್ಟ!
ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ರೊಮಿಲ್ಲಾ ಥಾಪರ್, ಅರುಣ್ ಕುಮಾರ್, ಆದಿತ್ಯ ಮುಖರ್ಜಿ, ಸಂಧ್ಯಾ ಪೈ, ರಸ್ತೂಂ ಭರೂಚ, ಎಚ್.ಎಸ್. ಶಿವಪ್ರಕಾಶ್, ಪುರುಷೋತ್ತಮ ಬಿಳಿಮಲೆ, ಪ್ರೊ. ವೆಂಕಟಾಚಲ ಹೆಗಡೆ, ಜಾನಕಿ ನಾಯರ್, ಪ್ರೊ.ನಾಮವರ್ ಸಿಂಗ್ ಮುಂತಾದ ಮೇಧಾವಿಗಳು ಇಲ್ಲಿ ಪಾಠ ಹೇಳಿದ್ದಾರೆ. ಕೆಲವರು ಇನ್ನು ಪಾಠ ಹೇಳುತ್ತಿದ್ದಾರೆ. ಅವರ ವಿದ್ವತ್ತನ್ನೇ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ಸಮೂಹ ಇಲ್ಲಿದೆ.
ಬೌದ್ಧಿಕ ಚಟುವಟಿಕೆ ಕೇಂದ್ರ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗಳ ಒಳಗಡೆ ಔಪಚಾರಿಕವಾಗಿ ಕಲಿಯುವುದಕ್ಕಿಂತ ಹೊರಗೆ ಅನೌಪಚಾರಿಕವಾಗಿ ಕಲಿಯುವುದೇ ಹೆಚ್ಚು. ಮಧ್ಯಾಹ್ನ ಅಥವಾ ರಾತ್ರಿ ಊಟದ ಬಳಿಕ ಬಯಲಲ್ಲಿ ಬೌದ್ಧಿಕ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಸಮಕಾಲೀನ ಸಮಸ್ಯೆಗಳ ಮೇಲೆ, ರಾಜಕೀಯ ಆಗು– ಹೋಗುಗಳ ಬಗ್ಗೆ ಮಧ್ಯರಾತ್ರಿವರೆಗೂ ಚರ್ಚೆಗಳು ಮುಂದುವರಿಯುತ್ತವೆ. ವಿದ್ಯಾರ್ಥಿಗಳ ನಡುವೆ ಬೇಕಾದಷ್ಟು ವಾದ– ವಿವಾದಗಳು ನಡೆಯುತ್ತವೆ.
ಕಳೆದ ವಾರ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಎನ್‌ಡಿಎ ಸರ್ಕಾರದ ‘ಅಚ್ಛೇ ದಿನ್’ ಬಗ್ಗೆ ಮಾತನಾಡಿದ್ದಾರೆ. ಒಮ್ಮೆ ಶಬನಾ ಆಜ್ಮಿ ಬಂದು ಊಟದ ಸಭಾಂಗಣದಲ್ಲೇ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದಾರೆ. ಎಡ ಪಕ್ಷಗಳ ನಾಯಕರಾದ ಪ್ರಕಾಶ್ ಕಾರಟ್, ಸೀತಾರಾಂ ಯಚೂರಿ, ಬೃಂದಾ ಕಾರಟ್, ಬಿಜೆಪಿ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಭಾಷಣ ಮಾಡುತ್ತಾರೆ.
ಅವರಷ್ಟೇ ಅಲ್ಲ, ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ವಿದ್ವಾಂಸರು ಸದ್ದುಗದ್ದಲವಿಲ್ಲದೆ ಬಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ. ಭಾರತದಲ್ಲಿ ಬಾಂಗ್ಲಾ ದೇಶದ ಹೈ ಕಮೀಷನರ್ ಆಗಿರುವ ಸಯ್ಯದ್ ಮುವಾಝಂ ಅಲಿ ಬಂದು ಹೋಗಿದ್ದಾರೆ.
ವಿದ್ಯಾರ್ಥಿಗಳು ಪ್ರತಿಯೊಂದು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ, ಪ್ರತಿಕ್ರಿಯಿಸುತ್ತಾರೆ. ಕೇಂದ್ರ ಸರ್ಕಾರದ ನೀತಿಗಳನ್ನು ಕಟುವಾಗಿ ವಿಮರ್ಶೆಗೆ ಒಳಪಡಿಸುತ್ತಾರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ನಡೆಗಳನ್ನು ಮಾತ್ರವಲ್ಲ, ಹಿಂದಿನ ಸರ್ಕಾರಗಳ ಧೋರಣೆಗಳನ್ನು ವಿದ್ಯಾರ್ಥಿಗಳು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆಂದು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪುರುಷೋತ್ತಮ ಬಿಳಿಮಲೆ ಹೇಳುತ್ತಾರೆ.
ಸೈದ್ಧಾಂತಿಕ ಭಿನ್ನಮತ: ಸಿಪಿಐ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್, ಸಿಪಿಎಂ ವಿದ್ಯಾರ್ಥಿ ಸಂಘಟನೆ ಎಸ್ಎಫ್‌ಐ, ಸಿಪಿಐಎಂಎಲ್‌ಗೆ ಸೇರಿದ ಎಐಎಸ್‌ಎ ಮೊದಲಾದ ಎಡ ಪಂಥದ ಸಂಘಟನೆಗಳು ಜೆಎನ್‌ಯು ಒಳಗೆ ಪ್ರಬಲವಾಗಿವೆ.
ಬಿಜೆಪಿಗೆ ಸೇರಿದ ಎಬಿವಿಪಿ ಸಂಘಟನೆ ಅಸ್ತಿತ್ವವೂ ಕ್ಯಾಂಪಸ್‌ನೊಳಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯ ಚಿಂತನೆ ಹೊಂದಿರುವ ವಿದ್ಯಾರ್ಥಿಗಳದ್ದೇ ಮೇಲುಗೈ. ಒಂದು ಸ್ಥಾನದಲ್ಲಿ ಮಾತ್ರ ಎಬಿವಿಪಿ ಗೆದ್ದಿದೆ.
ಎಡಪಂಥದ ಚಿಂತನೆಯ ವಿದ್ಯಾರ್ಥಿ ಸಂಘಟನೆಗಳ ಪ್ರಾಬಲ್ಯದಿಂದಾಗಿ ಇದುವರೆಗೆ ಮೆತ್ತಗಿದ್ದ ಎಬಿವಿಪಿ ವಿದ್ಯಾರ್ಥಿಗಳೀಗ ಮೈಕೊಡವಿ ಎದ್ದಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರ ದನಿ ಜೋರಾಗಿದೆ.
1969ರಲ್ಲಿ ಆರಂಭವಾದ ಜೆಎನ್‌ಯು ಮೊದಲಿಂದಲೂ ವಿಭಿನ್ನ ವಿಚಾರಗಳಿಗೆ ವೇದಿಕೆಯಾಗಿದೆ. ಲೆಕ್ಕವಿಲ್ಲದಷ್ಟು ವಿವಾದಾತ್ಮಕ ವಿಷಯಗಳು ಚರ್ಚೆಯಾಗಿವೆ. ಪರ– ವಿರುದ್ಧ ವಾದಿಸಿದ ವಿದ್ಯಾರ್ಥಿಗಳು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡಿದ್ದಾರೆ. ಯಾವುದೇ ವಿಚಾರ ಅಥವಾ ಭಿನ್ನಮತಗಳು ಸ್ನೇಹಿತರ ನಡುವಿನ ಪ್ರೀತಿ– ವಿಶ್ವಾಸಕ್ಕೆ ಅಡ್ಡಿಯಾಗಿಲ್ಲ. 45 ವರ್ಷಗಳಲ್ಲಿ ಮೊದಲ ಬಾರಿಗೆ ವಿವಿಯಲ್ಲಿ ಇಂಥ ವಾತಾವರಣ ಸೃಷ್ಟಿಯಾಗಿದೆ.ಇದಕ್ಕೆ ಕಾರಣ ಏನೆಂದು ಎಲ್ಲರೂ ಕುಳಿತು ಚರ್ಚಿಸಬೇಕಾಗಿದೆ.
ವಿದ್ಯಾರ್ಥಿಗಳು ಏನು ಹೇಳುತ್ತಾರೆ?
‘ಮೋದಿ ಎಂದರೆ ಭಾರತ, ಭಾರತ ಎಂದರೆ ಮೋದಿ ಎಂಬ ವಾತಾವರಣ ಸೃಷ್ಟಿಯಾಗಿರುವುದರಿಂದ ಅವರನ್ನು ವಿರೋಧಿಸುವ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ’ ಎಂದು ಅನೇಕ ಎಡಪಂಥೀಯ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.
’ನಾವು ಮರಣ ದಂಡನೆ ವಿರೋಧಿಸುತ್ತೇವೆ. ಅಫ್ಜಲ್ ಗುರುವನ್ನು ನೇಣಿಗೇರಿಸಿದ ದಿನ ಸಾಂಕೇತಿಕವಾಗಿ ಸೇರಿದ್ದೆವು. ಕೆಲವು ಕಿಡಿಗೇಡಿಗಳು ಘೋಷಣೆಗಳನ್ನು ಕೂಗಿದರು. ನಾವು ಅವರನ್ನು ಬೆಂಬಲಿಸುವುದಿಲ್ಲ. ಅವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲಿ. ಆದರೆ, ಮರಣ ದಂಡನೆ ವಿರೋಧಿಸುವವರು ದೇಶ ವಿರೋಧಿಗಳು ಎಂದು ನೋಡುವುದು ಸರಿಯಲ್ಲ. ಈ ವಿಷಯದಲ್ಲಿ ನಮ್ಮ ನಿಲುವು ವ್ಯಕ್ತಪಡಿಸಲು ನಮಗೆ ಸ್ವಾತಂತ್ರ್ಯವಿದೆ. ಇದು ನಮ್ಮ ಹಕ್ಕು. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಯ್ಯದ್ ಹೇಳಿದರು.
ವರ್ಚಸ್ಸಿಗೆ ಧಕ್ಕೆ ನಿಜ: ಅಂತರರಾಷ್ಟ್ರೀಯ ವಿಭಾಗದ ವಿದ್ಯಾರ್ಥಿ ಬಿಹಾರದ ಅಭಿಷೇಕ್ ಕುಮಾರ್, ‘ಯಾರೋ ಕೆಲವರು ಮಾಡಿದ ತಪ್ಪಿಗೆ ಜೆಎನ್‌ಯುಗೆ ಕೆಟ್ಟ ಹೆಸರು ಬಂದಿದೆ. ಇಲ್ಲಿರುವ ವಿದ್ಯಾರ್ಥಿಗಳು ಒಳ್ಳೆಯವರು. ದೇಶದ ವಿರುದ್ಧವಾಗಿ ಯಾರೂ ಆಲೋಚನೆ ಮಾಡುವುದಿಲ್ಲ. ಕೆಲವರ ಪ್ರಮಾದದಿಂದಾಗಿ ವಿವಿ ವರ್ಚಸ್ಸಿಗೆ ಧಕ್ಕೆ ಬಂದಿರುವುದು ನಿಜ’ ಎನ್ನುತ್ತಾರೆ.
ಇದೇ ವಿಭಾಗದ ಮತ್ತೊಬ್ಬ ವಿದ್ಯಾರ್ಥಿ ರಾಜು ಮಿತ್ತಲ್, ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರಿಗೆ ಎಸ್‌ಎಫ್‌ಐ, ಎಐಎಸ್‌ಎಫ್ ಹಾಗೂ ಎಐಎಸ್‌ಎ ಬೆಂಬಲವಿದೆ ಎಂದು ಆರೋಪಿಸಿದರು.
ಪರ್ಷಿಯನ್ ವಿಭಾಗದ ರಣವೀರ್ ಪಟೇಲ್ ತಮ್ಮ ಕೈಯಲ್ಲಿದ್ದ ರಾಖಿ, ಕೊರಳಲ್ಲಿದ್ದ ಕಪ್ಪು ದಾರ, ಹಣೆಯಲ್ಲಿದ್ದ ತಿಲಕ ತೋರಿಸಿ, ‘ ವಿವಿ ಆವರಣದೊಳಗೆ 2014ರ ಬಳಿಕ ಇವುಗಳನ್ನು ಧರಿಸಲು ಸಾಧ್ಯವಾಗಿದೆ. ಈವರೆಗೆ ನಮಗೆ ದನಿಯೇ ಇರಲಿಲ್ಲ’ ಎಂದು ವಿವರಿಸಿದರು.
‘ಅಫ್ಜಲ್‌ಗುರು ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ್ದು ಸರಿಯಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳೇ ಬೇಕಾದಷ್ಟಿದೆ. ಅದರ ಬಗ್ಗೆ ನಾವು ಚರ್ಚೆ ಮಾಡದೆ ಸಂಬಂಧಪಡದ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದೇವೆ’ ಎಂದು ಅರ್ಥಶಾಸ್ತ್ರ ಓದುತ್ತಿರುವ ವಿದ್ಯಾರ್ಥಿನಿ ಸುವಿದ್ಯಾ ಹೇಳಿದರು. ಕಾಶ್ಮೀರದ ವಿದ್ಯಾರ್ಥಿ ಸೋಹೆಲ್ ಘಾಜಿ, ಸೋಮವಾರದ ಕಾರ್ಯಕ್ರಮ ನಾಚಿಕೆಗೇಡು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಜೆಎನ್‌ಯು ಪ್ರಜಾಸತ್ತಾತ್ಮಕ ತಳಹದಿ ಮೇಲೆ ನಿಂತಿರುವ ಸಂಸ್ಥೆ. ಇಲ್ಲಿ ಎಲ್ಲ ವಿಚಾರಗಳನ್ನು ಚರ್ಚಿಸಲು ಮುಕ್ತವಾದ ಅವಕಾಶ ಇರಬೇಕು. ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂದು ಹೇಳಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು ಎಂದು ಪ್ರತಿಪಾದಿಸುವ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.