ADVERTISEMENT

ಟಿಪ್ಪು ವಿವಿ ಕನಸು ಭಗ್ನ

ಸುಖದೇವ್ ಥೋರಟ್ ಅಧ್ಯಕ್ಷತೆಯ ತಜ್ಞರ ಸಮಿತಿ ವಿರೋಧ

ಹೊನಕೆರೆ ನಂಜುಂಡೇಗೌಡ
Published 26 ಮೇ 2013, 19:59 IST
Last Updated 26 ಮೇ 2013, 19:59 IST

ನವದೆಹಲಿ: ರಾಜ್ಯದ ಲೇಖಕರು ಮತ್ತು ಚಿಂತಕರ ವಲಯದಲ್ಲಿ ತೀವ್ರ ವಾದ-ವಿವಾದ ಹುಟ್ಟುಹಾಕಿದ್ದ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ `ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿಶ್ವವಿದ್ಯಾಲಯ'ಕ್ಕೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ `ಕೆಂಪು ಸಂಕೇತ' ತೋರಿಸಿದೆ.

ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್ ವಿವಿ ಒಳಗೊಂಡಂತೆ ದೇಶದಾದ್ಯಂತ ಐದು ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿದ್ದ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲು ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಶಿಕ್ಷಣ- ಕಾನೂನು ತಜ್ಞರ ಸಮಿತಿ  ನೇಮಿಸಿತ್ತು. ಹೊಸ ವಿವಿಗಳ ಸ್ವರೂಪ, ಪಠ್ಯಕ್ರಮ ಹಾಗೂ ಯಾವ್ಯಾವ ಸ್ಥಳಗಳಲ್ಲಿ ಸ್ಥಾಪನೆ ಮಾಡಬಹುದೆಂಬ ಅಂಶಗಳನ್ನು ಕುರಿತು ಪರಿಶೀಲಿಸುವಂತೆ ಸಮಿತಿಗೆ ಕೇಳಲಾಗಿತ್ತು.

ಆದರೆ, `ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ' ಎಂದು ಥೋರಟ್ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಆದರೆ, `ಕೇಂದ್ರೀಯ ವಿವಿ'ಗಳನ್ನು ತೆರೆದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಆದ್ಯತೆ ಕೊಡಬಹುದೆಂದು  ಅಭಿಪ್ರಾಯ ಪಟ್ಟಿದೆ. ಈ ವರದಿಯಿಂದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ. ರೆಹಮಾನ್ ಖಾನ್ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.

ಶ್ರೀರಂಗಪಟ್ಟಣದಲ್ಲಿ ಟಿಪ್ಪುಸುಲ್ತಾನ್ ಅಲ್ಪಸಂಖ್ಯಾತ ವಿವಿ ಸ್ಥಾಪನೆ ಮಾಡುವುದಾಗಿ ಸಚಿವ ರೆಹಮಾನ್ ಖಾನ್ ಪ್ರಕಟಿಸುತ್ತಿದ್ದಂತೆ ಹಿರಿಯ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ತೀವ್ರವಾಗಿ ವಿರೋಧಿಸಿದ್ದರು. ಖ್ಯಾತ ಲೇಖಕರಾದ ಡಾ.ಯು.ಆರ್. ಅನಂತಮೂರ್ತಿ, ಪ್ರೊ. ಬರಗೂರು ರಾಮಚಂದ್ರಪ್ಪ ಟಿಪ್ಪು ವಿವಿ ಪರ ದನಿ ಎತ್ತಿದ್ದರು. `ಎಷ್ಟೇ ವಿರೋಧ ಬಂದರೂ ಈ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ' ಎಂದು ರೆಹಮಾನ್ ಖಾನ್ ಘೋಷಿಸಿದ್ದರು.
ಸಂವಿಧಾನದ ಕಲಂ 30 (1) ರ ಅನ್ವಯ, ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಇಚ್ಛೆಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಹಕ್ಕಿದೆ. ಆದರೆ, ಸರ್ಕಾರ ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತರ ಶಾಲೆ ಇಲ್ಲವೆ ಸಂಸ್ಥೆಗಳು ಎನ್ನುವ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.

ಅಲ್ಪಸಂಖ್ಯಾತ ಸಮುದಾಯಕ್ಕೆ ಶಿಕ್ಷಣ ಕೊಡುವ ಉದ್ದೇಶದಿಂದ ಆರಂಭಿಸಲಾಗಿರುವ ಅಲಿಗಡ ಮುಸ್ಲಿಂ ವಿವಿ ಹಾಗೂ ದೆಹಲಿಯ ಜಾಮಿಯ ಮಿಲಿಯ ವಿವಿಗೆ ಸಂಸತ್ತಿನಲ್ಲಿ ಕಾಯ್ದೆಗಳನ್ನು ಮಾಡುವ ಮೂಲಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲಾಗಿದೆ. ಆದರೆ, ಈ ಕ್ರಮವನ್ನು ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಲಾಗಿದೆ.

ಕೇಂದ್ರೀಯ ವಿವಿ ಸ್ಥಾಪನೆಗೆ ಸಲಹೆ: ಐದು `ಕೇಂದ್ರೀಯ  ವಿವಿ'ಗಳನ್ನು ಮುಸ್ಲಿಮರು, ಕ್ರೈಸ್ತರು ಹಾಗೂ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸ್ಥಳಗಳಲ್ಲಿ ತೆರೆಯಬಹುದೆಂದು ಥೋರಟ್ ಸಮಿತಿ ಹೇಳಿದೆ. `ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಸೂಚಿಸುವ ಮೂಲಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬಹುದೇ?' ಎಂಬ ಸಂಗತಿಯನ್ನು  ಪರಿಶೀಲಿಸುವ ಕೆಲಸವನ್ನು ಸಮಿತಿ ಮಾಡಿಲ್ಲ. `ಇದು ಸಮಿತಿಯ ಅಧಿಕಾರ ವ್ಯಾಪ್ತಿಯಲ್ಲಿ ಇರಲಿಲ್ಲ' ಎಂದು ಸಮಿತಿ ಮೂಲಗಳು ಖಚಿತಪಡಿಸಿವೆ.

ಕೇಂದ್ರೀಯ ವಿವಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರವೇಶ ನೀಡುವಾಗ ನಿಯಮಗಳನ್ನು ಸಡಿಲಿಸಬಹುದು. ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚುವರಿ ಅಂಕ ಕೊಡಬಹುದು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಹಿಳೆಯರು ಹಾಗೂ ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಈ ರೀತಿ ವಿಶೇಷ ಸೌಲಭ್ಯಗಳಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.

ಬೇಕಾದರೆ ಕೇಂದ್ರೀಯ ವಿವಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಕುರಿತ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗ ತೆರೆಯಬಹುದು ಎಂದು ಸಮಿತಿ ಹೇಳಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಆರು ವರ್ಷದ ಹಿಂದೆಯೇ ಅಲ್ಪಸಂಖ್ಯಾತ ವಿವಿ ಸ್ಥಾಪನೆಗೆ ಮುಂದಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯ ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.