ADVERTISEMENT

ಡಾ.ಅಮೃತ ಸೋಮೇಶ್ವರ್‌ಗೆ ಭಾಷಾ ಸಮ್ಮಾನ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 19:30 IST
Last Updated 30 ಆಗಸ್ಟ್ 2017, 19:30 IST
ಡಾ.ಅಮೃತ ಸೋಮೇಶ್ವರ್‌
ಡಾ.ಅಮೃತ ಸೋಮೇಶ್ವರ್‌   

ನವದೆಹಲಿ: ತುಳು ಸಾಹಿತಿ, ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ‘ಭಾಷಾ ಸಮ್ಮಾನ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ತಾಮ್ರ ಪದಕ ಒಳಗೊಂಡಿದೆ ಎಂದು ಅಕಾಡೆಮಿಯ ಕಾರ್ಯದರ್ಶಿ ಡಾ.ಕೆ. ಶ್ರೀನಿವಾಸರಾವ್‌ ತಿಳಿಸಿದ್ದಾರೆ.

ಮಂಗಳೂರು ಬಳಿಯ ಕೋಟೆಕಾರು ಗ್ರಾಮದಲ್ಲಿ 1935ರಲ್ಲಿ ಜನಿಸಿರುವ ಡಾ.ಅಮೃತ ಸೋಮೇಶ್ವರ ಅವರು, ತುಳು ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ತುಳು ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಸಂಶೋಧನೆಯನ್ನೂ ಕೈಗೊಂಡಿರುವ ಇವರು, ತುಳುವಿನಲ್ಲಿ ರಚಿತವಾದ ‘ಪಾಡ್ದನಗಳು’ ಮತ್ತು ‘ಭಾಮಕುಮಾರ ಸಂಧಿ’ ಸೇರಿದಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನಿವಾದಿಸಿದ್ದಾರೆ.

ADVERTISEMENT

‘ತಂಬಿಲ’ ಮತ್ತು ’ರಂಗಿತ’ ಕವನ ಸಂಕಲನಗಳು ಹಾಗೂ ಏಳು ಪ್ರಮುಖ ನಾಟಕಗಳನ್ನು ರಚಿಸಿರುವ ಇವರು ಕನ್ನಡ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮರಾಠಿ ಸಾಹಿತಿ ಮಧುಕರ ಅನಂತ ಮೆಹಂದಳೆ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಾಲಿ ಮತ್ತು ಪ್ರಾಕೃತ ಭಾಷಾ ತಜ್ಞರಾಗಿರುವ ಮೆಹಂದಳೆ ಅವರು ಮಧ್ಯಯುಗೀನ ಸಾಹಿತ್ಯ ಹಾಗೂ ಮಹಾಕಾವ್ಯಗಳಲ್ಲಿ ಪ್ರಬುದ್ಧತೆ ಹೊಂದಿದ್ದು, ಮರಾಠಿ, ಇಂಗ್ಲಿಷ್‌ ಮತ್ತು ಸಂಸ್ಕೃತಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ತುಳು ಭಾಷೆಗೆ ಸಂದ ಗೌರವ
ನನಗೆ ದೊರೆತ ಭಾಷಾ ಸಮ್ಮಾನ್‌ ತುಳು ಭಾಷೆಗೆ ದೊರೆತ ದೊಡ್ಡ ಸನ್ಮಾನ ಎಂದೇ ಭಾವಿಸಿದ್ದೇನೆ. ಕೆದಂಬಾಡಿ ಜತ್ತಪ್ಪ ರೈ ಅವರಂತಹ ಸಾಧಕರ ಸಾಲಲ್ಲಿ ಸೇರುವ ಸೌಭಾಗ್ಯ ನನಗೂ ದೊರೆಯಿತು ಎಂಬ ಖುಷಿಯೂ ಇದೆ.
–ಪ್ರೊ.ಅಮೃತ ಸೋಮೇಶ್ವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.