ಡಿಜಿಟಲ್ ಪಾವತಿಗೆ ರಿಯಾಯಿತಿ ಪ್ರಕಟಿಸಿದ ಸರ್ಕಾರ
Published 8 ಡಿಸೆಂಬರ್ 2016, 13:45 IST Last Updated 8 ಡಿಸೆಂಬರ್ 2016, 13:45 IST ಡಿಜಿಟಲ್ ಪಾವತಿಗೆ ರಿಯಾಯಿತಿ ಪ್ರಕಟಿಸಿದ ಸರ್ಕಾರ
ನವದೆಹಲಿ: ದೇಶದಲ್ಲಿ ನಗದು ರಹಿತ ವ್ಯವಸ್ಥೆ ಪ್ರಚುರಪಡಿಸಲು ಸರ್ಕಾರ ಮುಂದಾಗಿದ್ದು, ಡಿಜಿಟಲ್ ಪಾವತಿ ಮೂಲಕ ಡೀಸೆಲ್ ಮತ್ತು ಪೆಟ್ರೋಲ್ ಖರೀದಿಗೆ ಶೇ.0.75ರಷ್ಟು ರಿಯಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದಾರೆ.
ನಿತ್ಯ ಅಂದಾಜು 4.5 ಕೋಟಿ ಗ್ರಾಹಕರು ಇಂಧನ ಖರೀದಿಸುತ್ತಿದ್ದು, ಕಾರ್ಡ್ ಅಥವಾ ಇ–ವಾಲೆಟ್ ಮೂಲಕ ಪಾವತಿ ಮಾಡಿದರೆ ಶೇ.0.75ರಷ್ಟು ರಿಯಾಯಿತಿ ಸಿಗಲಿದೆ.
ಡಿಜಿಟಲ್ ಪಾವತಿ ಮೂಲಕ ರೈಲು ಟಿಕೆಟ್ ಪಡೆಯುವ ಉಪನಗರಗಳ ಪ್ರಯಾಣಿಕರು 2017ರ ಜನವರಿ 1ರಿಂದ ಶೇ.0.5ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಇನ್ನೂ ಆನ್‌ಲೈನ್ ಟಿಕೆಟ್ ಖರೀದಿಸುವವರು ₹10 ಲಕ್ಷ ವಿಮಾ ರಕ್ಷಣೆ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಸತಿ, ವಿಶ್ರಾಂತಿ ಕೋಣೆ, ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ರಿಯಾಯಿತಿ ಪಡೆಯುತ್ತಾರೆ.
ನೋಟು ರದ್ದತಿ ಬಳಿಕ ನಗದು ರಹಿತ ವ್ಯವಸ್ಥೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಮೊಬೈಲ್ ವಾಲೆಟ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಬಳಕೆಗೆ ಉತ್ತೇಜನ ನೀಡುತ್ತಿದೆ.
ಆನ್‌ಲೈನ್ ಮೂಲಕ ಜನರಲ್ ಇನ್ಶ್ಯೂರೆನ್ಸ್ ಕಂತು ಪಾವತಿ ಮಾಡುವ ಗ್ರಾಹಕರು ಶೇ.10 ಹಾಗೂ ಜೀವ ವಿಮಾ ಕಂತು ಪಾವತಿಗೆ ಶೇ.8ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
* ಸರ್ಕಾರಿ ಸಂಸ್ಥೆಗಳಲ್ಲಿ ಡಿಜಟಲ್ ಪಾವತಿಗೆ ವಹಿವಾಟು ಶುಲ್ಕ ವಿಧಿಸುವುದಿಲ್ಲ
* ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ಸ್ಮಾರ್ಟ್ TAGs and RFID ಬಳಕೆ ಹಾಗೂ ಡಿಜಿಟಲ್ ಪಾವತಿದಾರರಿಗೆ ಶೇ.10 ರಿಯಾಯಿತಿ
* 10 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿಗಳಿಗೆ ಎರಡು ಪಾಯಿಂಟ್ ಆಫ್ ಸೇಲ್ ಮೆಷಿನ್ ವ್ಯವಸ್ಥೆ ಮಾಡಲಾಗುತ್ತದೆ. ದೇಶದ 1 ಲಕ್ಷ ಹಳ್ಳಿಗಳಲ್ಲಿ ಪ್ರಸ್ತುತ ಯೋಜನೆಯ ವಿಸ್ತರಣೆ ಆಗಲಿದೆ.