ADVERTISEMENT

ತಿಮ್ಮಪ್ಪನ ಚಿನ್ನದ ಠೇವಣಿ ಗಾತ್ರ 4.5 ಟನ್‌..!

ಬಡ್ಡಿ ರೂಪದಲ್ಲೇ ವಾರ್ಷಿಕ 80 ಕೆ.ಜಿ ಚಿನ್ನ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2015, 9:16 IST
Last Updated 8 ಆಗಸ್ಟ್ 2015, 9:16 IST

ಹೈದರಾಬಾದ್‌: ದೇಶದ ಅತ್ಯಂತ ಶ್ರೀಮಂತ ದೇವರಾದ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಸದ್ಯ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವ ಚಿನ್ನ ಎಷ್ಟು ಗೊತ್ತೇ? ಅಂದಾಜು  4.5 ಟನ್‌. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಪ್ರಕಾರ, ಇದಕ್ಕೆ ವಾರ್ಷಿಕ ಬಡ್ಡಿ ರೂಪದಲ್ಲೇ  80 ಕೆ.ಜಿಯಷ್ಟು ಚಿನ್ನ ಸೇರ್ಪಡೆಯಾಗುತ್ತದೆ.

ಹೌದು!.  ನಗದು ಬದಲು ಬಡ್ಡಿಯಾಗಿ ಚಿನ್ನವೇ ಈ ಠೇವಣಿಗೆ ಸೇರ್ಪಡೆಯಾಗುತ್ತದೆ.  ಈಗಿನ 4.5 ಟನ್‌ ಚಿನ್ನ ಜತೆಗೆ ಈ ವರ್ಷ ಇನ್ನೂ 1.5 ಟನ್‌ಗಳಷ್ಟು ಹೆಚ್ಚುವರಿ ಚಿನ್ನವನ್ನು ಠೇವಣಿ ಇರಿಸಲು ಟಿಟಿಡಿ ನಿರ್ಧರಿಸಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಡಿ.ಸಾಂಬಶಿವರಾವ್‌ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.  ಅಂದರೆ ತಿಮ್ಮಪ್ಪನ ಚಿನ್ನದ ಠೇವಣಿ ಗಾತ್ರ 5,500 ಕೆ.ಜಿಗೆ ಹಿಗ್ಗಲಿದೆ. ಈಗಿನ ಚಿನ್ನದ ದರದಂತೆ ಲೆಕ್ಕಹಾಕಿದರೂ ಇದರ ಅಂದಾಜು ಮೌಲ್ಯ ರೂ 1,320 ಕೋಟಿ ದಾಟಲಿದೆ.

ಟಿಟಿಡಿ 2010ರಿಂದ ವಿವಿಧ  ಬ್ಯಾಂಕುಗಳಲ್ಲಿ ಚಿನ್ನದ ಠೇವಣಿ ಇರಿಸುತ್ತಾ ಬಂದಿದೆ. ಸದ್ಯ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಒಂದರಲ್ಲೇ 1,800 ಕೆ.ಜಿ ಚಿನ್ನದ ಠೇವಣಿ ಇಡಲಾಗಿದೆ. ಈಗ ಮತ್ತೆ ಎಸ್‌ಬಿಐನಲ್ಲೇ  1,500 ಕೆ.ಜಿಯಷ್ಟು ಚಿನ್ನ ಠೇವಣಿ ಇಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT