ADVERTISEMENT

ದಲಿತ ಸಾಹಿತಿಗಳು ಬಲವಂತವಾಗಿ ಹೊರಕ್ಕೆ

ಮಹಾರಾಷ್ಟ್ರ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಶಿವಾಜಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ

ಪಿಟಿಐ
Published 13 ಅಕ್ಟೋಬರ್ 2016, 19:30 IST
Last Updated 13 ಅಕ್ಟೋಬರ್ 2016, 19:30 IST
ದಲಿತ ಸಾಹಿತಿಗಳು ಬಲವಂತವಾಗಿ ಹೊರಕ್ಕೆ
ದಲಿತ ಸಾಹಿತಿಗಳು ಬಲವಂತವಾಗಿ ಹೊರಕ್ಕೆ   

ಪುಣೆ: ಮರಾಠಿ ಸಾಹಿತ್ಯ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಸಿದ್ಧ ದಲಿತ ಸಾಹಿತಿ ಪ್ರಜ್ಞಾ ಪವಾರ್ ಹಾಗೂ ದಲಿತ ವಿದ್ವಾಂಸ ರಾವ್‌ಸಾಹೇಬ್ ಕಸಬೆ ಅವರನ್ನು ಹೊರಹಾಕಲಾಗಿದೆ.

ಸತಾರ ಜಿಲ್ಲೆಗೆ ಹೊಂದಿಕೊಂಡಿರುವ ಪಟನ್ ಎಂಬಲ್ಲಿ ಮಹಾರಾಷ್ಟ್ರ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಶಿವಾಜಿ ಬಗ್ಗೆ ನೀಡಿದ ಹೇಳಿಕೆಯಿಂದ ಮರಾಠಿ ಜನರ ಭಾವನೆಗಳಿಗೆ  ನೋವಾಗಿದೆ ಎಂದು ಆರೋಪಿಸಿದ ಒಂದು ಗುಂಪು, ಕಾರ್ಯಕ್ರಮದಿಂದ ಹೊರನಡೆಯುವಂತೆ ಪ್ರಜ್ಞಾ ಅವರಿಗೆ ಸೂಚಿಸಿತು.

ADVERTISEMENT

ಕಸಬೆ ಅವರನ್ನು ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರಜ್ಞಾ ಅವರನ್ನು ಆಯ್ಕೆ ಮಾಡಲಾಗಿತ್ತು.

‘ಸಮ್ಮೇಳನದ  ಮೊದಲ ದಿನವಾದ ಭಾನುವಾರ ಕಸಬೆ ಹಾಗೂ ನಾನು ಭಾಷಣ ಮಾಡಿದೆವು. ಸಭಿಕರಿಂದ ಉತ್ತಮ ಸ್ಪಂದನೆಯೂ ಸಿಕ್ಕಿತು. ಆದರೆ ಎರಡನೇ ದಿನದ ಕಾರ್ಯಕ್ರಮದ ವೇಳೆ ಸುಮಾರು ನೂರು ಜನರ ಗುಂಪೊಂದು  ಸ್ಥಳಕ್ಕೆ ಬಂದು ಕಾರ್ಯಕ್ರಮ ಬಿಟ್ಟು ಹೊರನಡೆಯುವಂತೆ ನಮ್ಮ ಮೇಲೆ ಒತ್ತಡ ಹೇರಿತು’ ಎಂದು ಪ್ರಜ್ಞಾ ಹೇಳಿದ್ದಾರೆ.

‘ಭದ್ರತೆ ಕಾರಣ ಮುಂದಿಟ್ಟ ಕಾರ್ಯಕ್ರಮ ಆಯೋಜಕರು, ತಕ್ಷಣವೇ  ಕಾರ್ಯಕ್ರಮ ಸ್ಥಳದಿಂದ ಹೊರಡುವಂತೆ ಸೂಚಿಸಿದರು’ ಎಂದೂ ಅವರು ಹೇಳಿದ್ದಾರೆ.
‘ನಾವು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆ ತಕ್ಷಣವೇ ಏಕೆ ಪ್ರತಿರೋಧ ಏಳಲಿಲ್ಲ’ ಎಂದು ಪ್ರಜ್ಞಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ನೀವು ದಲಿತರು, ನೀವು ಮರಾಠರ ಬಗ್ಗೆ ಮಾತನಾಡುವಂತಿಲ್ಲ ಎಂದು ಆ ಗುಂಪು ನಮಗೆ ಎಚ್ಚರಿಸಿತು. ತಕ್ಷಣ ಸ್ಥಳದಿಂದ ಹೊರನಡೆಯುವಂತೆಯೂ ಸೂಚಿಸಿತು’ ಎಂದು ಪ್ರಜ್ಞಾ ಹೇಳಿದ್ದಾರೆ.

ತಾವು ಆ ಗುಂಪಿನ ಜನರ ಜತೆ ಮಾತುಕತೆಗೆ ಒಲವು ವ್ಯಕ್ತಪಡಿಸಿದರೂ, ಅವರು ಕೇಳಿಸಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ ಎಂದು ಕಸಬೆ ಹೇಳಿದ್ದಾರೆ.

‘ನಾನು  ಯಾರು ಎಂದು ಅವರನ್ನು  ಕೇಳಿದೆ? ನನ್ನ ಬರಹ ಓದಿದ್ದೀರಾ ಎಂದೆ. ನಿನ್ನೆ ನಾನು ಏನು ಹೇಳಿದೆ ಎಂದು ನಿರ್ದಿಷ್ಟವಾಗಿ ನಿಮಗೆ ಗೊತ್ತಾ ಎಂದು ಕೇಳಿದೆ. ಆದರೆ ನನ್ನ ಮಾತು ನಿರ್ಲಕ್ಷಿಸಿದ ಅವರು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಸಮ್ಮೇಳನ ಆಯೋಜಕರಲ್ಲಿ ಒಬ್ಬರಾದ ಎನ್‌ಸಿಪಿ ಮುಖಂಡ ವಿಕ್ರಂಸಿನ್ಹಾ ಪಠಾಣ್‌ಕರ್ ಅವರೊಂದಿಗೆ ರಾಜಕೀಯ ವೈರತ್ವ ಹೊಂದಿರುವ ಸ್ಥಳೀಯ ಶಿವಸೇನೆ ಶಾಸಕ ಶಂಭುರಾಜ್ ದೇಸಾಯಿ ಅವರು ಜನರನ್ನು ಕಳುಹಿಸಿದ್ದರು’ ಎಂದು ಕಸಬೆ ಆರೋಪಿಸಿದ್ದಾರೆ.

**

ಕ್ರಮಕ್ಕೆ ಆಗ್ರಹಿಸಿದ್ದೆ: ದೇಸಾಯಿ

‘ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಜ್ಞಾ ಹಾಗೂ ಕಸಬೆ ಅವರು ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಅಂಶ ತಿಳಿಯಿತು. ಹೀಗಾಗಿ ಸ್ಥಳೀಯಾಡಳಿತ ಹಾಗೂ ಎಸ್‌ಪಿ ಅವರಿಗೆ ಪತ್ರ ಬರೆದು, ಮರಾಠಿ ಸಮುದಾಯದವರ ಭಾವನೆಗಳಿಗೆ ನೋವುಂಟು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೆ’ ಎಂದು ದೇಸಾಯಿ ಅವರು ಪ್ರತಿಕ್ರಿಯಿಸಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸತಾರ ಎಸ್ಪಿ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.