ADVERTISEMENT

ದಾದ್ರಿ, ಕಲಬುರ್ಗಿ ಘಟನೆಗಳಿಗೆ ರಾಜ್ಯಗಳೇ ಉತ್ತರಿಸಬೇಕು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2015, 10:42 IST
Last Updated 19 ಅಕ್ಟೋಬರ್ 2015, 10:42 IST

ಪಟ್ನಾ, ಬಿಹಾರ (ಪಿಟಿಐ): ಗೋಮಾಂಸ ವಿವಾದ ಹಾಗೂ ‘ಹೆಚ್ಚುತ್ತಿರುವ ಅಹಿಷ್ಣುತೆಯ’ ವಿರುದ್ಧದ ಸಾಹಿತಿಗಳ ಪ್ರತಿಭಟನೆಗೆ ಕುರಿತ ಬಿಜೆಪಿ ನಿಲುವು ಸೋಮವಾರ ಬದಲಾಗಿದೆ.

ಉತ್ತರ ಪ್ರದೇಶದಲ್ಲಿ ನಡೆದ ದಾದ್ರಿ ಘಟನೆ ಹಾಗೂ ಕರ್ನಾಟಕದಲ್ಲಿ ನಡೆದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಬಿಜೆಪಿಯನ್ನು ದೂರುವಂತಿಲ್ಲ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ.

ವಿವಾದಾತ್ಮಕ ಹೇಳಿಕೆಗಳ ಸಂಬಂಧ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಪಕ್ಷದ ಹಲವು ಮುಖಂಡರಿಗೆ ಬುದ್ದಿವಾದ ಹೇಳಿದ ಒಂದು ದಿನದ ಬಳಿಕ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾದಾಗಿನಿಂದ ಇದೇ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ದಾದ್ರಿ ಘಟನೆ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣಗಳು ಕ್ರಮವಾಗಿ ಸಮಾಜವಾದಿ ಪಕ್ಷದ ಆಡಳಿತವಿರುವ ಉತ್ತರ ಪ್ರದೇಶ ಹಾಗೂ ಕಾಂಗ್ರೆಸ್ ಆಡಳಿತಾರೂಢ ಕರ್ನಾಟಕದಲ್ಲಿ ನಡೆದಿವೆ. ‘ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ಪರೀಧಿಗೆ ಬರುವ ವಿಚಾರ. ನಿಮಗೆಲ್ಲ ಇದು ತಿಳಿದಿದೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇವೇ ಎರಡು ಘಟನೆಗಳಿಗೆ ಸಂಬಂಧಿಸಿದಂತೆಯೇ ಸಾಹಿತಿಗಳ ಪ್ರತಿಭಟನೆ ನಡೆಯುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸುದ್ದಿಗಾರರ ವಿರುದ್ಧ ಕಿಡಿ: ಮೀಸಲಾತಿ ಬಗೆಗಿನ ಭಾಗವತ್ ಅವರ ಹೇಳಿಕೆಗಳು ಹಾಗೂ ದಾದ್ರಿ ಮತ್ತು ಗೋ ಮಾಂಸ ಘಟನೆಗಳ ಕುರಿತು ಪದೇ ಪದೇ ಪ್ರಶ್ನಿಸಿದ ಪತ್ರಕರ್ತರ ಮೇಲೆ ಅಮಿತ್ ಷಾ ಕಿಡಿ ಕಾರಿದರು.

‘ನೀವು ನನಗೆ ಬಿಹಾರ ಅಥವಾ ನಿತಿಶ್ ಕುಮಾರ್ ಅವರ ಸರ್ಕಾರದ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳುತ್ತಿಲ್ಲ..ಬಿಜೆಪಿಯ ಕಾರ್ಯಸೂಚಿಯನ್ನು ಪ್ರಶ್ನಿಸುವ ಮೊದಲು ನೀವು ನಿಮ್ಮ ಕಾರ್ಯಸೂಚಿಯನ್ನು ತಿಳಿಸಿ’ ಎಂದು ರೇಗಿದರು.

ಈ ನಡುವೆ, ನಿರೀಕ್ಷಿತ ಮಟ್ಟದಲ್ಲಿ ಜನಪ್ರಿಯತೆ ಸಿಗದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಪ್ರಚಾರ ಸಭೆಗಳನ್ನು ರದ್ದುಪಡಿಸಲಾಗಿದೆ ಎಂಬ ವರದಿಯನ್ನು ಷಾ ಅವರು ಅಲ್ಲಗಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.