ADVERTISEMENT

‘ದಾಭೋಲ್ಕರ್‌, ಪಾನ್ಸರೆ ಹತ್ಯೆ ಪೂರ್ವಯೋಜಿತ’

ಪಿಟಿಐ
Published 23 ಆಗಸ್ಟ್ 2017, 20:06 IST
Last Updated 23 ಆಗಸ್ಟ್ 2017, 20:06 IST
‘ದಾಭೋಲ್ಕರ್‌, ಪಾನ್ಸರೆ ಹತ್ಯೆ ಪೂರ್ವಯೋಜಿತ’
‘ದಾಭೋಲ್ಕರ್‌, ಪಾನ್ಸರೆ ಹತ್ಯೆ ಪೂರ್ವಯೋಜಿತ’   

ಮುಂಬೈ: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆ ಪೂರ್ವಯೋಜಿತ ಮತ್ತು ಅಪರಾಧಿಗಳು ಸಾಂಸ್ಥಿಕ ಹಿನ್ನೆಲೆ ಉಳ್ಳವರಾಗಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

‘ಇವರಿಬ್ಬರ ಹತ್ಯೆಗೆ ಸ್ಪಷ್ಟವಾದ ಸಂಬಂಧವಿದೆ. ಅಪರಾಧಿಗಳನ್ನು ಬಂಧಿಸಲು ಸದ್ಯ ಪ್ರಗತಿಯಲ್ಲಿರುವ ತನಿಖೆ ಪ್ರಕ್ರಿಯೆಗಿಂತ ಹೆಚ್ಚಿನ ಮಟ್ಟದ ವಿಚಾರಣೆ ನಡೆಸಬೇಕು’ ಎಂದು ನ್ಯಾಯ ಮೂರ್ತಿಗಳಾದ ಎಸ್.ಸಿ.ಧರ್ಮಾಧಿಕಾರಿ ಮತ್ತು ವಿಭಾ ಕಂಕನ್ವಾಡಿ ಅವರಿರುವ ಪೀಠವು ತನಿಖಾಧಿಕಾರಿಗಳಿಗೆ ಸೂಚಿಸಿದೆ.

‘ಇದು ಅಪರೂಪದ ಘಟನೆಯಲ್ಲ. ಯಾವುದೋ ಸಂಘಟನೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ’ ಎಂದು ಸಿಐಡಿ ಮತ್ತು ಸಿಬಿಐ ಸಲ್ಲಿಸಿರುವ ತನಿಖಾ ವರದಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಧರ್ಮಾಧಿಕಾರಿ ಅವರು ಹೇಳಿದ್ದಾರೆ.

ADVERTISEMENT

‘2013ರಲ್ಲಿ ದಾಭೋಲ್ಕರ್‌ ಅವರಿಗೆ ಗುಂಡಿಕ್ಕಿದವರು ಎಂದು ಸಿಬಿಐ ಅಧಿಕಾರಿಗಳು ಗುರುತಿಸಿರುವ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರ ಬ್ಯಾಂಕ್ ವ್ಯವಹಾರ, ಎಟಿಎಂನಿಂದ ಹಣ ಪಡೆದ ವಿವರ, ರೈಲು ಸೀಟ್ ಕಾಯ್ದಿರಿಸಿದ ವಿವರಗಳನ್ನೆಲ್ಲ ಪರಿಶೀಲಿಸಿ. ಇವರು ನಾಲ್ಕೈದು ರಾಜ್ಯಗಳಲ್ಲಿ ಸಂಚರಿಸಿರುವ ಸಾಧ್ಯತೆ ಇದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಯಾರೊಬ್ಬರೂ ದೀರ್ಘಾವಧಿ ಬಚ್ಚಿಟ್ಟುಕೊಳ್ಳುವುದು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಮೇಲಿನ ಸಲಹೆಗಳನ್ನು ಪರಿಗಣಿಸಿ, ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 13ರಂದು ತನಿಖೆ ಪ್ರಗತಿಯ ಹೊಸ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.