ಪಟ್ನಾ: ಲೋಕಸಭೆಯ ಅಧ್ಯಕ್ಷರಾಗಿ ಎಲ್ಲರೂ ಮೆಚ್ಚುವಂತೆ ಕಾರ್ಯನಿರ್ವಹಿಸಿದ ಮೀರಾ ಕುಮಾರ್, ದಲಿತ ನಾಯಕ ಬಾಬು ಜಗಜೀವನ್ ರಾಂ ಅವರ ಏಕೈಕ ಪುತ್ರಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ, ಐದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಮೀರಾ ಕುಮಾರ್ ಮೊದಲ ಚುನಾವಣೆಯಲ್ಲಿಯೇ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಜನತಾ ಪಕ್ಷದ ರಾಂ ವಿಲಾಸ್ ಪಾಸ್ವಾನ್ ಅವರಂತಹ ದಿಗ್ಗಜರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು ಎಂಬ ವಿಷಯ ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ.
1985ರಲ್ಲಿ ಉತ್ತರಪ್ರದೇಶದ ಬಿಜ್ನೂರ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೀರಾ ಕುಮಾರ್ ಅವರು ಈ ಇಬ್ಬರು ನಾಯಕರ ವಿರುದ್ಧ ಗೆಲುವು ಸಾಧಿಸಿದ್ದರು.
ತಮ್ಮ ತಂದೆ ಬಾಬು ಜಗಜೀವನ್ ರಾಂ ಪ್ರತಿನಿಧಿಸುತ್ತಿದ್ದ ಬಿಹಾರದ ಸಾಸಾರಾಮ್ ಮತ್ತು ದೆಹಲಿಯ ಕರೋಲ್‌ಬಾಗ್ ಕ್ಷೇತ್ರದಿಂದ ತಲಾ ಎರಡು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರು.
ರಾಜಕೀಯ ಪ್ರವೇಶಕ್ಕೆ ರಾಜೀವ್ ಕಾರಣ: ಮೃದು ಮಾತು, ನಯ, ನಾಜೂಕಿನ ವ್ಯಕ್ತಿತ್ವ ಹೊಂದಿರುವ ಮೀರಾ ರಾಜಕೀಯ ಕುಟುಂಬಕ್ಕೆ ಸೇರಿದ್ದರೂ ರಾಜಕೀಯ ಪ್ರವೇಶದ ಬಗ್ಗೆ ಕನಸು ಮನಸ್ಸಿನಲ್ಲೂ ಯೋಚಿಸಿದವರಲ್ಲ. ಅದೆಲ್ಲವೂ ಆಕಸ್ಮಿಕ!
1973ರ ಐಎಫ್ಎಸ್ (ವಿದೇಶಾಂಗ ಸೇವೆ) ಅಧಿಕಾರಿಯಾಗಿದ್ದ ಮೀರಾ ಅವರು ತಾವಾಯಿತು, ತಮ್ಮ ಉದ್ಯೋಗವಾಯಿತು ಎನ್ನುವಂತೆ ತಮ್ಮ ಪಾಡಿಗೆ ತಾವಿದ್ದವರು. ಅವರನ್ನು ಸಕ್ರಿಯ ರಾಜಕಾರಣಕ್ಕೆ ಎಳೆದು ತಂದವರು ಅಂದಿನ ಪ್ರಧಾನಿ ರಾಜೀವ್ ಗಾಂಧಿ!
ವಿದೇಶಾಂಗ ಇಲಾಖೆಯಲ್ಲಿದ್ದ ಅವರು ಉತ್ತರ ಪ್ರದೇಶದ ಬಿಜ್ನೂರ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದರು.
ಮೊದಲ ಪ್ರಯತ್ನದಲ್ಲಿಯೇ ಯಶ ಕಂಡ ಅವರು ಆ ನಂತರ ಹಿಂತಿರುಗಿ ನೋಡಲಿಲ್ಲ.
ಕೂಡಲೇ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ನಂತರ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದರು.
ಬಿಹಾರದ ಮಾಜಿ ಸಚಿವೆ ಸುಮಿತ್ರಾ ದೇವಿ ಅವರ ಪುತ್ರ ಹಾಗೂ ಸುಪ್ರೀಂಕೋರ್ಟ್ ವಕೀಲ ಮಂಜುಲ್ ಕುಮಾರ್ ಅವರು ಮೀರಾ ಪತಿ.
2004ರಿಂದ 2009ರವರೆಗೆ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವರಾಗಿದ್ದರು. 2009ರಿಂದ 2014ರವರೆಗೆ ಲೋಕಸಭಾ ಸ್ಪೀಕರ್ ಹುದ್ದೆಯನ್ನು ಅವರು ನಿರ್ವಹಿಸಿದ ರೀತಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು.
ಭಾರತದ ಹಿತಾಸಕ್ತಿ ಪರ ಮತ-ಮೀರಾ ಕರೆ: ಭಾರತದ ಅತ್ಯುತ್ತಮ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಮತ ಚಲಾಯಿಸುವಂತೆ ರಾಷ್ಟ್ರಪತಿ ಚುನಾವಣೆಯ ಮತದಾರರಿಗೆ ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ಕರೆ ನೀಡಿದ್ದಾರೆ.
ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ‘ನಾವು ಪೋಷಿಸಿಕೊಂಡು ಬಂದ ಮೌಲ್ಯಗಳು, ತತ್ವಗಳು ಮತ್ತು ಸಿದ್ಧಾಂತಗಳ ಆಧಾರದಲ್ಲಿ ಮತ ಹಾಕಬೇಕು’ ಎಂದಿದ್ದಾರೆ.
**
ಬಲವಾದ ಸೈದ್ಧಾಂತಿಕ ನೆಲೆಯ ಶಕ್ತಿಗಳು ಒಂದಾಗಿರುವುದನ್ನು ವಿರೋಧ ಪಕ್ಷಗಳ ಒಗ್ಗಟ್ಟು ತೋರಿಸುತ್ತದೆ. ಈ ಸೈದ್ಧಾಂತಿಕ ನೆಲೆಯ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲಿದ್ದೇನೆ.
-ಮೀರಾ ಕುಮಾರ್,
ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.