ADVERTISEMENT

ದೆಹಲಿ: ಶೇ 67ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2015, 15:43 IST
Last Updated 7 ಫೆಬ್ರುವರಿ 2015, 15:43 IST

ನವದೆಹಲಿ (ಪಿಟಿಐ): ದೆಹ­ಲಿ ವಿಧಾನಸಭೆಯ 70 ಸ್ಥಾನ­ಗಳಿಗೆ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆಯವರೆಗೆ ದಾಖಲೆಯ  ಶೇ 67ರಷ್ಟು ಮತದಾನವಾಗಿದೆ. ಸುಮಾರು 1.3 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2013ರ ಚುನಾವಣೆಯಲ್ಲಿ ಶೇ 66ರಷ್ಟು ಮತದಾನ ದಾಖಲಾಗಿತ್ತು. ಈ ಬಾರಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತದಾನ ಆರಂಭಗೊಂಡ ಮೊದಲ 5 ಗಂಟೆಗಳಲ್ಲಿ ಅಂದರೆ 1 ಗಂಟೆವರೆಗೆ ಶೇ 35.82ರಷ್ಟು ಮತದಾನ ದಾಖಲಾಯಿತು. ಚಳಿ ಇದ್ದಿದ್ದರಿಂದ ಬೆಳಿಗ್ಗೆ ಮತಗಟ್ಟೆಗಳಲ್ಲಿ ಅಷ್ಟೊಂದು ಜನದಟ್ಟಣೆ  ಇರಲಿಲ್ಲ,  ಆದರೆ, ಮಧ್ಯಾಹ್ನದ ನಂತರ ಮತದಾನ ಚುರುಕು ಪಡೆಯಿತು ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ,  ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ,  ಉಪಾಧ್ಯಕ್ಷ ರಾಹುಲ್‌ ಗಾಂಧಿ,  ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌,  ಬಿಜೆಪಿಯ ದೆಹಲಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ,  ಮೇನಕಾ ಗಾಂಧಿ, ದೆಹಲಿ ಲೆಫ್ಟಿನಂಟ್‌ ಗವರ್ನರ್‌ ನಜೀಬ್‌ ಜಂಗ್‌, ವರುಣ್‌ ಗಾಂಧಿ ಮತ ಚಲಾಯಿಸಿದವರಲ್ಲಿ ಪ್ರಮುಖರು.

ಒಟ್ಟು  21,177 ಮತಕೇಂದ್ರಗಳಲ್ಲಿ ಮತದಾನ ನಡೆದಿದೆ. ಮತದಾರರು ಅರವಿಂದ್‌ ಕೇಜ್ರಿವಾಲ್‌, ಕಿರಣ್‌ ಬೇಡಿ ಸೇರಿದಂತೆ 673 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಗಿದೆ. ಫೆ.10ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.