ನವದೆಹಲಿ: ಏರ್‌ಟೆಲ್ ದೇಶದ ಪ್ರಥಮ ಪೇಮೆಂಟ್ ಬ್ಯಾಂಕ್ ಪ್ರಾರಂಭಿಸಿದ್ದು, ಠೇವಣಿಗೆ ವಾರ್ಷಿಕ ಶೇ.7.25 ಬಡ್ಡಿ ನೀಡಲಿದೆ.
ರಾಜಸ್ತಾನದಲ್ಲಿ ಪ್ರಾಯೋಗಿಕವಾಗಿ ಭಾರ್ತಿ ಏರ್‌ಟೆಲ್ ಸಂಸ್ಥೆಯು ಬುಧವಾರ ‘ಏರ್‌ಟೆಲ್ ಪೇಮೆಂಟ್ ಬ್ಯಾಂಕ್’ಗೆ ಚಾಲನೆ ನೀಡಿದೆ. ಆಧಾರ್ ಕಾರ್ಡ್ ಬಳಸಿ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ ಹಾಗೂ ಗ್ರಾಹಕರ ಏರ್‌ಟೆಲ್ ಮೊಬೈಲ್ ಸಂಖ್ಯೆಯೇ ಖಾತೆ ಸಂಖ್ಯೆಯೂ ಆಗಿರಲಿದೆ.
ಉಳಿತಾಯ ಖಾತೆಯಲ್ಲಿ ಇಡುವ ಠೇವಣಿಗೆ ವಾರ್ಷಿಕ ಶೇ.7.25ರಷ್ಟು ಬಡ್ಡಿ ಸಿಗಲಿದೆ. ಪ್ರಾರಂಭಿಕವಾಗಿ ರಾಜಸ್ತಾನದ ಪಟ್ಟಣ ಮತ್ತು ಗ್ರಾಮೀಣ ಭಾಗದ ಗ್ರಾಹಕರು ಏರ್‌ಟೆಲ್ ಮಳಿಗೆಗಳಲ್ಲಿ ಬ್ಯಾಂಕ್ ಖಾತೆ ತೆರೆಯಬಹುದಾಗಿದೆ.
ನಗದು ರಹಿತ ವಹಿವಾಟು, ಹಣ ವರ್ಗಾವಣೆ ಸೇರಿದಂತೆ ಇತರೆ ಸೌಲಭ್ಯವನ್ನು ಪೇಮೆಂಟ್ ಬ್ಯಾಂಕ್ ಒಳಗೊಂಡಿದೆ.
ಪೇಮೆಂಟ್ ಬ್ಯಾಂಕ್ :
ಪೇಮೆಂಟ್ ಬ್ಯಾಂಕ್ ವ್ಯವಸ್ಥೆಯು, ಹಣ ಪಾವತಿ ಸೇವೆಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಸೀಮಿತ ಪ್ರಮಾಣದಲ್ಲಿಯಷ್ಟೇ ನಡೆಸುವಂತಹುದು. ಗ್ರಾಹಕರಿಗೆ ಉಳಿತಾಯ ಮತ್ತು ಚಾಲ್ತಿ ಖಾತೆ ತೆರೆಯಲು ಅವಕಾಶವಿದ್ದು, ಗರಿಷ್ಠ ₹1 ಲಕ್ಷ ಠೇವಣಿ ಇಡಬಹುದು.
ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಬ್ಯಾಂಕಿಂಗ್, ಎಟಿಎಂ ಹಾಗೂ ಡೆಬಿಟ್ ಕಾರ್ಡ್ ಸೇವೆಯನ್ನು ಈ ಬ್ಯಾಂಕ್‌ಗಳು ಒದಗಿಸುತ್ತವೆ. ಆದರೆ, ಸಾಲ ನೀಡುವುದು ಅಥವಾ ಕ್ರೆಡಿಟ್ ಕಾರ್ಡ್ ಸೌಲಭ್ಯ ದೊರೆಯುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.