ADVERTISEMENT

ನಂದಿ ಉದ್ದೇಶ ಒಳ್ಳೆಯದು, ಹೇಳಿಕೆ ಕೆಟ್ಟದ್ದು: ಐಲಯ್ಯ

ಜೈಪುರ ಸಾಹಿತ್ಯ ಉತ್ಸವದಲ್ಲಿ ಸೃಷ್ಟಿಯಾದ ವಿವಾದ

​ಪ್ರಜಾವಾಣಿ ವಾರ್ತೆ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST

ಜೈಪುರ (ಐಎಎನ್‌ಎಸ್): `ಸಾಮಾಜಿಕ ಚಿಂತಕ ಆಶಿಷ್ ನಂದಿ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರ ಕುರಿತು ಒಳ್ಳೆಯ ಉದ್ದೇಶದಿಂದ ಕೆಟ್ಟ ಹೇಳಿಕೆ ನೀಡಿದ್ದಾರೆ' ಎಂದು ದಲಿತ ಪರ ಹೋರಾಟಗಾರ ಕಾಂಚಾ ಐಲಯ್ಯ ಅಭಿಪ್ರಾಯಪಟ್ಟಿದ್ದಾರೆ.

ಜೈಪುರ ಸಾಹಿತ್ಯ ಸಮ್ಮೇಳನದ ಆಶಿಷ್ ನಂದಿಯವರ ಗೋಷ್ಠಿಯಲ್ಲಿ ಪ್ರೇಕ್ಷಕರಾಗಿ ಪಾಲ್ಗೊಂಡಿದ್ದ ಅವರು, `ಆಶಿಷ್ ಅವರನ್ನು ಬಹಳ ಕಾಲದಿಂದ ಬಲ್ಲೆ. ಅವರ ಚಿಂತನೆಗಳು ಎಂದೂ ಮೀಸಲಾತಿ ವಿರುದ್ಧವಿಲ್ಲ. ಈ ವಿವಾದಾತ್ಮಕ ವಿಚಾರವನ್ನು ಇಲ್ಲಿಗೇ ಕೊನೆಗೊಳಿಸುವುದು ಒಳ್ಳೆಯದು' ಎಂದು ಹೇಳಿದರು.

ನಂದಿಯವರ ವಿವಾದಾತ್ಮಕ ಹೇಳಿಕೆ ವಿರುದ್ಧ ರಾಜಸ್ತಾನ ಪೊಲೀಸರು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಅನ್ವಯ ಎಫ್‌ಐಆರ್ ದಾಖಲಿಸಿದ ಮಾರನೇ ದಿನ ಕಾಂಚಾಲ ಐಲಯ್ಯ ಈ ಹೇಳಿಕೆ ನೀಡಿದ್ದಾರೆ.

ಆಶೀಶ್ ನಂದಿಯವರು ಮಾತನಾಡಿದ `ರಿಪಬ್ಲಿಕ್ ಆಫ್ ಐಡಿಯಾಸ್' ಎಂಬ ಗೋಷ್ಠಿಯಲ್ಲಿ ತರುಣ್ ತೇಜ್‌ಪಾಲ್, ರಿಚರ್ಡ್ ಸೊರಾಬ್ಜಿ ಮತ್ತು ಊರ್ವಶಿ ಬುತಾಲಿಯಾ ಕೂಡ ಹಾಜರಿದ್ದರು.

ಶನಿವಾರ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ `ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವರಲ್ಲಿ ಬಹುತೇಕರು ಎಸ್‌ಸಿ, ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು' ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ದಲಿತ ಮತ್ತು ಹಿಂದುಳಿದ ವರ್ಗದ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ ಆಶಿಷ್ ನಂದಿಯವರು ಸಮ್ಮೇಳನದ ಉಳಿದ ಗೋಷ್ಠಿಗಳಿಗೆ ಗೈರು ಹಾಜರಾಗಿ, ಜೈಪುರದಿಂದ ಹೊರ ನಡೆದಿದ್ದರು.

ಜೈಪುರ ಬಿಡದಂತೆ ಸೂಚನೆ
ಜೈಪುರ (ಪಿಟಿಐ):
ಆಶಿಷ್ ನಂದಿಯವರ ವಿವಾದಾತ್ಮಕ ಹೇಳಿಕೆ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಜೈಪುರ ಸಾಹಿತ್ಯ ಸಮ್ಮೇಳನದ ಆಯೋಜಕರು ನಗರ ಬಿಟ್ಟು ಹೊರ ಹೋಗದಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT