ADVERTISEMENT

ನಮೋ ಟಿವಿ ಬಗ್ಗೆ ಕೇಂದ್ರ ವಾರ್ತಾ ಇಲಾಖೆಯಿಂದ ಸ್ಪಷ್ಟನೆ ಕೇಳಿದ ಚುನಾವಣೆ ಆಯೋಗ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 7:03 IST
Last Updated 3 ಏಪ್ರಿಲ್ 2019, 7:03 IST
   

ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಬಿಜೆಪಿಯು ಪ್ರಚಾರದ ಉದ್ದೇಶಕ್ಕಾಗಿ ’ನಮೋ ಟಿವಿ’ ಎಂಬ ವಾಹಿನಿ ಆರಂಭಿಸಿರುವ ಕುರಿತು ಪ್ರತಿಪಕ್ಷಗಳು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಕೇಂದ್ರ ಚುನಾವಣೆ ಆಯೋಗವು ಬುಧವಾರ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆಯಿಂದ ಸ್ಪಷ್ಟನೆ ಕೇಳಿದೆ.

ನರೇಂದ್ರ ಮೋದಿ ಅವರ ಸಮಾವೇಶ, ಭಾಷಣಗಳನ್ನು ವಾರದ 24 ಗಂಟೆಯೂ ಪ್ರಸಾರ ಮಾಡುವ ಉದ್ದೇಶದಿಂದ ಬಿಜೆಪಿ ಮಾರ್ಚ್‌ 31ರಂದು ’ನಮೋ ಟಿವಿ’ ವಾಹಿನಿಗೆ ಚಾಲನೆ ನೀಡಿತ್ತು.

ದೇಶದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ವಸ್ತು ವಿಷಯವುಳ್ಳ ವಾಹಿನಿಗೆ ಅನುಮತಿ ನೀಡಿದ್ದು ಹೇಗೆ, ಈ ಬಗ್ಗೆ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿ ಆಮ್‌ ಆದ್ಮಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದವು. ಇದೇ ಹಿನ್ನೆಲೆಯಲ್ಲೇ ಚುನಾವಣೆ ಆಯೋಗ ಬುಧವಾರ ಕೇಂದ್ರ ವಾರ್ತಾ ಇಲಾಖೆಯಿಂದ ಸ್ಪಷ್ಟನೆ ಕೇಳಿದೆ.

ಮೈನ್‌ ಭೀ ಚೌಕಿದಾರ ಸಂವಾದವನ್ನು ಗಂಟೆಗಟ್ಟಲೆ ಲೈವ್‌ ಮಾಡಿದ್ದು ಏಕೆ?

ಪ್ರಧಾನಿ ಮೋದಿ ಅವರು ಮಾರ್ಚ್‌ 31ರಂದು ನಡೆಸಿದ ಮೈನ್‌ ಭೀ ಚೌಕಿದಾರ್‌ ಸಂವಾದವನ್ನು ಗಂಟೆಗಟ್ಟಲೆ ನೇರ ಪ್ರಸಾರ ಮಾಡಿದ ಬಗ್ಗೆ ಸರ್ಕಾರಿ ಒಡೆತನದ ರಾಷ್ಟ್ರೀಯ ವಾಹಿನಿ ದೂರದರ್ಶನದಿಂದಲೂ ಚುನಾವಣೆ ಆಯೋಗ ಸ್ಪಷ್ಟೀಕರಣ ಕೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.