ನವದೆಹಲಿ (ಪಿಟಿಐ): ಜಪಾನ್ ಹಾಗೂ ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಅಪಾರ ನಿರೀಕ್ಷೆಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಜಪಾನ್ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನ ಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜಪಾನ್‌ಗೆ ಭೇಟಿ ನೀಡುತ್ತಿರುವ ಮೋದಿ ಅವರು, ತಂತ್ರಜ್ಞಾನ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಒಡಂಬಡಿಕೆಗಳಿಗೆ ಸಹಿ ಹಾಕಲಿದ್ದಾರೆ.
ಈ ಭೇಟಿ ಒಂದು ಹೊಸ ಅಧ್ಯಾಯ ಬರೆಯಲಿದೆ ಎಂದು ಬಣ್ಣಿಸಿರುವ ಮೋದಿ ಅವರು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಈ ಭೇಟಿ ಪ್ರಮುಖ ಮೈಲುಗಲ್ಲಾಗಲಿದೆ ಎಂದಿದ್ದಾರೆ.
ಜಪಾನ್‌ನ ಸ್ಮಾರ್ಟ್ ಸಿಟಿ ‘ಕ್ಯೊಟೊ’ ನಗರಕ್ಕೆ ಭೇಟಿ ನೀಡಲಿರುವ ಮೋದಿ ಅವರನ್ನು ಜಪಾನ್‌ನ ಪ್ರಧಾನ ಮಂತ್ರಿ ಶಿಂಜೋ ಅಬೆ ಸ್ವಾಗತಿಸಲಿದ್ದಾರೆ. ಭಾರತದಲ್ಲಿ 100 ಸ್ಮಾರ್ಟ್ ಸಿಟಿಗಳ ನಿರ್ಮಾಣದ ಕನಸು ಹೊಂದಿರುವ ಮೋದಿ ಅವರು ಕ್ಯೊಟೊ ನಗರ ನಿರ್ಮಾಣದ ರೂಪುರೇಷೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಸೆಪ್ಟೆಂಬರ್ 1ರಂದು ಕ್ಯೊಟೊದಲ್ಲಿ ನಡೆಯುವ ವಾರ್ಷಿಕ ಸಮಾವೇಶದಲ್ಲಿ ಉಭಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಆರ್ಥಿಕ ವೃದ್ಧಿ, ತಂತ್ರಜ್ಞಾನ ಸಹಕಾರ ಹಾಗೂ ಜಾಗತಿಕ ಬೆಳವಣಿಗೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ತಂತ್ರಜ್ಞಾನ ಸಹಕಾರದ ಹಲವು ಒಡಂಬಡಿಕೆಗಳಿಗೆ ಮೋದಿ ಹಾಗೂ ಅಬೆ ಸಹಿ ಹಾಕಲಿದ್ದಾರೆ.
‘ಜಪಾನ್‌ನ ಪ್ರಧಾನ ಮಂತ್ರಿ ಶಿಂಜೋ ಅಬೆ ಅವರ ಆತ್ಮೀಯ ಆಮಂತ್ರಣದಿಂದ ಐದು ದಿನಗಳ ಜಪಾನ್ ಪ್ರವಾಸ ಕೈಗೊಂಡಿದ್ದೇನೆ. ಈ ಭೇಟಿ ಅಪಾರ ನಿರೀಕ್ಷೆಗಳನ್ನು ಒಳಗೊಂಡಿದೆ’ ಎಂದು ಪ್ರವಾಸಕ್ಕೂ ಮುನ್ನ ಮೋದಿ ಹೇಳಿದ್ದಾರೆ.
‘ಪರಮಾಣು ನೀತಿ ಬದಲಾಗದು’
‘ಭಾರತದ ಪರಮಾಣು ನೀತಿ ಪುನರಾವಲೋಕಿಸುವ ಪ್ರಶ್ನೆ ಇಲ್ಲ. ಜಪಾನ್ ಪ್ರವಾಸ ಕೈಗೊಂಡ ಮಾತ್ರಕ್ಕೆ ರಾಷ್ಟ್ರದ ಪರಮಾಣು ನೀತಿ ಬಗ್ಗೆ ಪುನರಾವಲೋಕನ ನಡೆಸಬೇಕೆಂಬ ಆಲೋಚನೆಯೇನೂ ಇಲ್ಲ’ ಎಂದು ಮೋದಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.