ADVERTISEMENT

ನಾರಿಮನ್ ಮನ ಒಲಿಸಿದ ದೇವೇಗೌಡ, ಸಿದ್ದರಾಮಯ್ಯ, ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST

ನವದೆಹಲಿ: ನಿಂದನೆಗಳಿಂದ ಮನನೊಂದು ಕರ್ನಾಟಕದ ಗೊಡವೆ ಬೇಡವೆಂದು ದೂರ ಸರಿದಿದ್ದ ಹಿರಿಯ ವಕೀಲ ಫಾಲಿ ಸ್ಯಾಮ್ ನಾರಿಮನ್ ಅವರನ್ನು ರಾಜ್ಯ ಮತ್ತೆ ಒಲಿಸಿಕೊಂಡಿತು. ಪರಿಣಾಮವಾಗಿ ನಾರಿಮನ್ ಮತ್ತು ಅವರ ತಂಡ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾವೇರಿ ಜಲವಿವಾದ ವ್ಯಾಜ್ಯದಲ್ಲಿ ಪುನಃ ಎಂದಿನಂತೆ ರಾಜ್ಯದ ಪರ ನಿಂತಿತು.

ಆಡಳಿತ ಮತ್ತು ಪ್ರತಿಪಕ್ಷಗಳೆಂಬ ಭೇದವಿಲ್ಲದೆ ನಾರಿಮನ್ ಅವರನ್ನು ರಾಜ್ಯ ಕಾವೇರಿ ಸಮರ ತಂಡದ ದಂಡನಾಯಕರನ್ನಾಗಿ ಉಳಿಸಿಕೊಳ್ಳಲು ಇಂದು ಜರುಗಿದ ಪ್ರಯತ್ನ ವಿರಳವೂ, ವಿಶೇಷವೂ ಎನಿಸಿಕೊಂಡಿತು.

ಸೋಮವಾರ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ವಿಶೇಷವಾಗಿ ಬಿಜೆಪಿಯ ಕೆಲ ತಲೆಯಾಳುಗಳು ಮಾಡಿದ ಟೀಕೆ ನಿಂದನೆಗಳಿಂದ ನಾರಿಮನ್ ಸಿಟ್ಟಿಗೆದ್ದಿದ್ದರು.ಕರ್ನಾಟಕದ ಗೊಡವೆಯೇ ಬೇಡವೆಂದು ಸಾರಿದ್ದ ಅವರು, ರಾಜ್ಯದ ಪರ ವಾದಿಸುವಂತೆ ಕೋರಿ ತಮ್ಮ ಮನೆಯ ಹೊಸ್ತಿಲು ತುಳಿಯಬಾರದೆಂದು ಸರ್ಕಾರಕ್ಕೆ ತಾಕೀತು ಮಾಡಿದ್ದರು.

ಮಾಜಿ ಪ್ರಧಾನಮಂತ್ರಿ ಮತ್ತು ಜಾತ್ಯತೀತ ಜನತಾದಳದ ನಾಯಕರೂ ಆಗಿದ್ದು, ಖುದ್ದು ನೀರಾವರಿ ವಿಷಯತಜ್ಞರೂ ಆಗಿರುವ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಮಂತ್ರಿ ಅನಂತಕುಮಾರ್ ಅವರು ಇಂದು ಮುಂಜಾನೆ ನಾರಿಮನ್ ಅವರೊಂದಿಗೆ ದೂರವಾಣಿಯಲ್ಲಿ ಮಾತಾಡಿ ಮನ ಒಲಿಸುವ ಪ್ರಯತ್ನ ಮಾಡಿದರು.

ಕಾವೇರಿ ಜಲವಿವಾದದ ಮೊಕದ್ದಮೆಗಳಲ್ಲಿ ಕರ್ನಾಟಕದ ಕೈ ಬಿಟ್ಟರೆ ಸಾವಿರಾರು ರೈತರನ್ನು ದಿಲ್ಲಿಗೆ ಕರೆ ತಂದು ನಾರಿಮನ್ ನಿವಾಸದ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ದೇವೇಗೌಡ ಅವರು ಹಾಕಿದ ಪ್ರೀತಿಪೂರ್ವಕ ಬೆದರಿಕೆ ಪರಿಣಾಮ ಬೀರಿತು ಎಂದು ಬಲ್ಲ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರು ದೂರವಾಣಿಯಲ್ಲಿ ಮಾತಾಡಿ, ಅಗತ್ಯ ಬಿದ್ದರೆ ದೆಹಲಿಗೆ ಬಂದು ಖುದ್ದು ಮನವಿ ಮಾಡಿಕೂಳ್ಳಲೂ ತಾವು ತಯಾರೆಂದು ನಾರಿಮನ್ ಅವರಿಗೆ ತಿಳಿಸಿದರು. ರಾಜ್ಯ ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಮುಂತಾದವರ ಮಾತುಗಳಿಂದ ನೋವಾಗಿದ್ದರೆ ಕ್ಷಮಿಸಿ ಎಂದು ನಾರಿಮನ್ ಅವರನ್ನು ಕೋರಿದವರು ಕೇಂದ್ರ ಮಂತ್ರಿ ಅನಂತಕುಮಾರ್.

ದೆಹಲಿಯಲ್ಲೇ ತಂಗಿದ್ದ ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ನಾರಿಮನ್ ಆಪ್ತ ಮೋಹನ್ ಕಾತರಕಿ, ರಾಜ್ಯ ನೀರಾವರಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಮೊದಲಾದವರು ನಾರಿಮನ್ ಅವರನ್ನು ಭೇಟಿ ಮಾಡಿ ಅನುನಯಿಸಿದರು.

ಭಾವೋದ್ವೇಗಕ್ಕೆ ಒಳಗಾಗಿದ್ದ ನಾರಿಮನ್ ಅವರು ಒಂದು ಹಂತದಲ್ಲಿ ರಾಜ್ಯ ಸರ್ಕಾರ ತಮಗೆ ಈವರೆಗೆ ನೀಡಿರುವ ಶುಲ್ಕವನ್ನು ವಾಪಸು ನೀಡಲು ಮುಂದಾದರು. ನಿಮ್ಮ ಸೇವೆ ಕರ್ನಾಟಕಕ್ಕೆ ಬೇಕಿಲ್ಲವೆಂದು ಸಜ್ಜನಿಕೆಯಿಂದ ಹೇಳಿದ್ದರೆ ಸಾಕಿತ್ತು. ಇಷ್ಟೊಂದು ಶುಲ್ಕದ ಮೊತ್ತ, ಬೆನ್ನಿಗೆ ಚೂರಿ, ಮೋಸ ಮುಂತಾದ ಪ್ರಸ್ತಾಪ ಮಾಡಿ ಅವಹೇಳನ ಮಾಡುವ ಅಗತ್ಯವಾದರೂ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾಗಿ ಗೊತ್ತಾಗಿದೆ.

ಕರ್ನಾಟಕ ದಶಕಗಳಿಂದ ನನ್ನ ಹೃದಯಕ್ಕೆ ಹತ್ತಿರವಾಗಿರುವ ರಾಜ್ಯ. ನನ್ನ ಕರ್ನಾಟಕ ಪ್ರೀತಿಯನ್ನು ಯಾರೂ ಪ್ರಶ್ನಿಸಲಾಗದು. ಕರ್ನಾಟಕದಿಂದ ನಾನು ಪಡೆಯುತ್ತಿರುವ ಫೀಸು ನಾನು ಇತರರಿಂದ ಪಡೆಯುವುದರ ಮೂರನೆಯ ಒಂದರಷ್ಟು ಮಾತ್ರ.

ಜೊತೆಗೆ ಕರ್ನಾಟಕದ ಕೇಸುಗಳಿದ್ದಾಗ ಇತರೆ ಕೇಸುಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಈ ನಿರ್ಧಾರದಿಂದ ಉಂಟಾಗುವ ಹಣಕಾಸು ನಷ್ಟವನ್ನು ನಾನು ಲೆಕ್ಕಿಸಿಲ್ಲ. ಕೇವಲ ಹಣಕ್ಕಾಗಿ ಕೆಲಸ ಮಾಡುವ ಮನೋಭಾವ ನನ್ನದಾಗಿದ್ದರೆ ಕರ್ನಾಟಕದ ಕೇಸನ್ನು ನಾನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ ಎಂದೂ ಅವರು ಜಲಸಂಪನ್ಮೂಲ ಸಚಿವ ಪಾಟೀಲ ಅವರ ಮುಂದೆ ಬೇಸರಿಸಿ ಹೇಳಿದರೆನ್ನಲಾಗಿದೆ.

ಅಪರಾಹ್ನ ಎರಡು ಗಂಟೆಗೆ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ವಿಚಾರಣೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯ ಅಧಿಕಾರ ವ್ಯಾಪ್ತಿ ನ್ಯಾಯಾಲಯಕ್ಕೆ ಇಲ್ಲವೆಂದು ಪ್ರಶ್ನಿಸಿದ್ದ ಕೇಂದ್ರ ಸರ್ಕಾರದ ಅರ್ಜಿ. ತಮಿಳುನಾಡಿಗೆ ನೀರು ಬಿಡುವಂತೆ ಸೆ.30ರಂದು ತಾವು ನೀಡಿದ್ದ ಆದೇಶದ ಪಾಲನೆ ಎಷ್ಟರಮಟ್ಟಿಗೆ ಆಗಿದೆಯೆಂದು ಇಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಬೇಕಿತ್ತು. ಕಪಿಲ್ ಸಿಬಲ್ ಬರುವರೆಂಬ ಮಾತುಗಳ ನಡುವೆ ನಿಜದಲ್ಲಿ ನ್ಯಾಯಾಲಯಕ್ಕೆ ಕರ್ನಾಟಕದ ರಕ್ಷಣೆಗೆ ಬಂದವರು ನಾರಿಮನ್.

ರಾಜ್ಯ ಸರ್ಕಾರ ನೀರು ಬಿಡಬೇಕೆಂಬ ನ್ಯಾಯಾಲಯದ ಆದೇಶವನ್ನು ಪಾಲಿಸಿರುವ ಕಾರಣ ತಾವು ದೂರ ಉಳಿಯುವ ಈ ಹಿಂದಿನ ನಿರ್ಧಾರವನ್ನು ತ್ಯಜಿಸಿ ಪುನಃ ವಾದ ಮಂಡನೆಗೆ ಬಂದಿರುವುದಾಗಿ ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಉದಯಲಲಿತ್ ಅವರನ್ನು ಒಳಗೊಂಡಿದ್ದ ನ್ಯಾಯಪೀಠಕ್ಕೆ ನಾರಿಮನ್ ಹಲವು ಬಾರಿ ಚುರುಕು ಮುಟ್ಟಿಸಿದರು. ಮತ್ತೆ ನೀರು ಬಿಡುವಂತೆ ಆದೇಶ ನೀಡಿ ನನ್ನನ್ನು ಮುಜುಗರಕ್ಕೆ ದೂಡಬೇಡಿ ಎಂದರು. ನಾವು ಗಣಿತದ ಪ್ರಕಾರ ಆದೇಶ ನೀಡಿದೆವು ಎಂಬ ನ್ಯಾಯಮೂರ್ತಿಗಳ ಮಾತನ್ನು ನಡುವೆಯೇ ತುಂಡರಿಸಿದರು. ತಾವು ನೋಡಬೇಕಿದ್ದುದು ಕಾವೇರಿ ಕೊಳ್ಳದ ವಾಸ್ತವ ಪರಿಸ್ಥಿತಿಯನ್ನೇ ವಿನಾ ಗಣಿತವನ್ನಲ್ಲ ಎಂದರು.

ಹತ್ತು ಸಾವಿರ, ಹದಿನೈದು ಸಾವಿರ ಹದಿನೇಳು ಸಾವಿರ ಕ್ಯುಸೆಕ್ ನೀರು ಬಿಡಿ ಎಂದು (ನಮಗೆ) ತೋಚಿದಂತೆಲ್ಲ ಆದೇಶ ನೀಡಿದಿರಿ. ನೀರಿಲ್ಲದ ಕಾರಣ ಪಾಲಿಸಲು ಸಾಧ್ಯವೇ ಇಲ್ಲದ ಆದೇಶಗಳನ್ನು ನೀಡಬೇಡಿ ಎಂದು ನಾನು ಬೇಡಿಕೊಂಡರೂ ನೀವು ಕೇಳಲಿಲ್ಲ. ನಿಮ್ಮ ಆದೇಶದ ಪರಿಣಾಮದ ಪೆಟ್ಟುಗಳನ್ನು ವಿನಾ ಕಾರಣ ನಾನೂ ತಿನ್ನಬೇಕಾಯಿತು ಎಂದು ದನಿಯೇರಿಸಿದರು ಕೂಡ. ತಮಿಳುನಾಡಿನ ಪರ ಹಿರಿಯ ವಕೀಲ ಶೇಖರ್ ನಾಫಡೆ ಅವರನ್ನೂ ನಡು ನಡುವೆ ತಡೆದು ಕಟಕಿದರು.

ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿರುವ ಸಿವಿಲ್ ಅರ್ಜಿಗಳ ವಿಚಾರಣೆಯನ್ನೂ ಇದೇ 18ರಿಂದ ಕೈಗೆತ್ತಿಕೊಳ್ಳುವ ಉದ್ದೇಶವಿದ್ದರೆ ಈಗಲೇ ತಿಳಿಸಿಬಿಡಿ, ನಾವು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠದಿಂದ ನಿರ್ದಿಷ್ಟ ಉತ್ತರ ಬಯಸಿದರು.

ಕರ್ನಾಟಕಕ್ಕೆ ಧನ್ಯವಾದ ಹೇಳಿದ ನಾರಿಮನ್‌ ನೇತೃತ್ವದ ತಂಡ
ನವದೆಹಲಿ:
'ಕಾವೇರಿ ಕಾನೂನು ಸಮರದ ಅತ್ಯಂತ ಕಷ್ಟದ ಕಾಲದಲ್ಲಿ ಬೆಂಬಲಿಸಿ, ನಮ್ಮೊಂದಿಗೆ ನಿಂತ ಕರ್ನಾಟಕಕ್ಕೆ ತಮ್ಮ ಧನ್ಯವಾದಗಳು' ಎಂದು ನಾರಿಮನ್ ನೇತೃತ್ವದ ಕಾನೂನು ತಂಡ ಹೇಳಿದೆ.

ಕೆಲ ಅಪಕ್ವ ರಾಜಕಾರಣಿಗಳು ಮತ್ತು ವಕೀಲರು ಮಾಡಿರುವ ಟೀಕೆ ಟಿಪ್ಪಣಿಗಳು, ನಿಂದೆ, ಭರ್ತ್ಸನೆಗಳು ನಮ್ಮ ಕಾನೂನು ತಂಡವನ್ನು ಬಹುತೇಕ ಕೆಡವಿ ಹಾಕಿತ್ತಲ್ಲದೆ ನಮ್ಮ ಕಾವೇರಿ ಕೇಸ್ ನ್ನು ದುರ್ಬಲಗೊಳಿಸಲಿತ್ತು. ನಮಗೆ ಯಾರ ಮೇಲೂ ದ್ವೇಷವಿಲ್ಲ.

ಇದೇ ತಿಂಗಳ 18ರಿಂದ ಆರಂಭವಾಗುವ ಮುಖ್ಯ ಕೇಸ್ ಗೆ (ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಿವಿಲ್ ಅರ್ಜಿಗಳ ವಿಚಾರಣೆ) ಎಲ್ಲ ಬೆಂಬಲವನ್ನು ಎದುರು ನೋಡುತ್ತೇವೆ ಎಂದು ತಂಡದ ಪರವಾಗಿ ಮೋಹನ್ ವೆಂಕಟೇಶ ಕಾತರಕಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT