ADVERTISEMENT

ನಿತೀಶ್‌ ‘ಅಬ್ಬರ’ದ ಹಿಂದೆ ‘ಪ್ರಶಾಂತ’!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2015, 19:49 IST
Last Updated 8 ನವೆಂಬರ್ 2015, 19:49 IST

ಪಟ್ನಾ: ನಿತೀಶ್‌ ಕುಮಾರ್ ಪ್ರಚಂಡ ಗೆಲುವಿನ ಹಿಂದೆ ವ್ಯಕ್ತಿಯೊಬ್ಬರ ಕೈಚಳಕವಿದೆ. ಅವರ ಹೆಸರು ಪ್ರಶಾಂತ್‌ ಕಿಶೋರ್‌!

 2012ರ ಗುಜರಾತ್‌ ವಿಧಾನಸಭೆ ಚುನಾವಣೆ ಮತ್ತು  2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಗೆಲುವಿಗೆ ಶ್ರಮಿಸಿದ್ದ ಪ್ರಶಾಂತ್‌ ಕಿಶೋರ್‌, ಬಿಹಾರದಲ್ಲಿ ನಿತೀಶ್‌ ಕುಮಾರ್‌ ಗೆಲುವಿನ ಹಿಂದಿನ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದ ಕಿಶೋರ್‌ ಮತ್ತು ಅವರ ತಂಡ, ಬ್ರ್ಯಾಂಡ್ ಮೋದಿ ನಿರ್ಮಾಣ, ‘ಚಾಯ್‌ ಪೇ ಚರ್ಚಾ’ ಸೇರಿದಂತೆ ವಿವಿಧ ವಿಶಿಷ್ಟ ರೀತಿಯ ಪ್ರಚಾರ ತಂತ್ರಗಳನ್ನು ಹೆಣೆದು ಮೋದಿ ಅವರ ಗೆಲುವನ್ನು ಸುಲಭಗೊಳಿಸಿತ್ತು.

ಚುನಾವಣೆ ಬಳಿಕ ಕಿಶೋರ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮುನಿಸಿಕೊಂಡು ಬಿಜೆಪಿಯಿಂದ ಹೊರ ಬಂದಿದ್ದರು. ನಂತರ ಬಿಹಾರದಲ್ಲಿ ನಿತೀಶ್‌  ಪಾಳಯ ಸೇರಿ ಚುನಾವಣಾ  ಕಾರ್ಯತಂತ್ರ ರೂಪಿಸಿದ್ದರು.

‘ಚಾಯ್‌ ಪೇ ಚರ್ಚಾ’ದಂತೆಯೇ ಬಿಹಾರದಲ್ಲಿ ‘ಪರ್ಚಾ ಪೇ ಚರ್ಚಾ’ (ಭಿತ್ತಿಪತ್ರಗಳ ಕುರಿತು ಚರ್ಚೆ) ಎಂಬ ಪ್ರಚಾರ ಕಾರ್ಯಕ್ರಮ ರೂಪಿಸಿದ್ದರು. ಇದರ ಅಡಿಯಲ್ಲಿ ನಿತೀಶ್‌ ಕುಮಾರ್‌ ಅವರ ಆಡಳಿತದ ಸಾಧನೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು.

ಜೊತೆಗೆ ರಾಜ್ಯದ ಪ್ರತಿ ಮತದಾರರನ್ನು ತಲುಪಲು ‘ಹರ್‌ ಘರ್‌ ದಸ್ತಕ್‌’ (ಪ್ರತಿ ಮನೆಯ ಕದ ತಟ್ಟಿ) ಎಂಬ ಕಾರ್ಯಕ್ರಮವನ್ನೂ ಕಿಶೋರ್‌ ನೇತೃತ್ವದ ತಂಡ ರೂಪಿಸಿತ್ತು.

37 ವರ್ಷದ ಕಿಶೋರ್‌ ಮೂಲತಃ ಬಿಹಾರದ ಬಕ್ಸರ್‌ನವರು. ಆಫ್ರಿಕಾದಲ್ಲಿ ವಿಶ್ವಸಂಸ್ಥೆಯ ಆರೋಗ್ಯ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು 2011ರಲ್ಲಿ ರಾಜೀನಾಮೆ ನೀಡಿ, ಭಾರತಕ್ಕೆ ಮರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.