ADVERTISEMENT

ನಿಷೇಧಕ್ಕೆ ಪರಂಪರೆ ಸಮರ್ಥನೆಯಲ್ಲ

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2016, 19:51 IST
Last Updated 13 ಏಪ್ರಿಲ್ 2016, 19:51 IST
ನಿಷೇಧಕ್ಕೆ ಪರಂಪರೆ ಸಮರ್ಥನೆಯಲ್ಲ
ನಿಷೇಧಕ್ಕೆ ಪರಂಪರೆ ಸಮರ್ಥನೆಯಲ್ಲ   

ನವದೆಹಲಿ (ಪಿಟಿಐ): ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರಿಗೆ ದೇವಾಲಯ ಪ್ರವೇಶ ನಿಷೇಧಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ವಿ.ಗೋಪಾಲಗೌಡ ಮತ್ತು ಕುರಿಯನ್‌ ಜೋಸೆಫ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಹಿಳೆಯರು ಋತುಚಕ್ರಕ್ಕೆ ಒಳಗಾಗುವ ಸಂಗತಿಯನ್ನೇ ಆಧಾರವಾಗಿ ಇರಿಸಿಕೊಂಡು ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆಯೇ ಎಂದು ಪೀಠ ಪ್ರಶ್ನಿಸಿದೆ. ‘ಹಿಂದೂ ಧರ್ಮದಲ್ಲಿ ಹಿಂದೂ ಪುರುಷ ಮತ್ತು ಹಿಂದೂ ಮಹಿಳೆ ಎಂಬ ವರ್ಗೀಕರಣ ಇಲ್ಲ. ಹಿಂದೂ ಎಂದರೆ ಅದರಲ್ಲಿ ಪುರುಷರು ಮತ್ತು ಮಹಿಳೆಯರು ಸೇರುತ್ತಾರೆ.   ಮಹಿಳೆಯರಿಗೆ ಪ್ರವೇಶ ನೀಡದಿರುವುದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಪೀಠ ಹೇಳಿದೆ.

ಶಬರಿಮಲೆ ದೇವಸ್ಥಾನದ ಪ್ರಭಾವಿ ಆಡಳಿತ ಮಂಡಳಿ ಮತ್ತು ಕೇರಳ ಸರ್ಕಾರದ ಪರ ವಕೀಲರು ಸಾಂಪ್ರದಾಯಿಕ ನಿಷೇಧವನ್ನು ಮುಂದುವರಿಸಬೇಕು ಎಂದು ವಾದಿಸಿದರು. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ. ಹಾಗಾಗಿ ಋತುಮತಿಯರಾಗುವ ಮಹಿಳೆಯರು ದೇವಸ್ಥಾನ ಪ್ರವೇಶಿಸಿದರೆ ದೇವರಿಗೆ ‘ಅಶುದ್ಧಿ’ಯಾಗುತ್ತದೆ ಎಂದಿದ್ದಾರೆ.

ವಿಧಿವಿಧಾನಗಳು, ಪರಂಪರೆಯ ಆಧಾರದ ವಾದ ಸಂವಿಧಾನ ನೀಡಿರುವ ಹಕ್ಕುಗಳ  ಮುಂದೆ ನಿಲ್ಲುವ ಸಾಧ್ಯತೆ ಇಲ್ಲ ಎಂದು ಪೀಠ ಹೇಳಿದೆ.

‘ನವ ಹರಿಜನ’ರಲ್ಲ
‘ಹ್ಯಾಪಿ ಟು ಬ್ಲೀಡ್‌’ ಸಂಘಟನೆಯ ಪರ ಹಾಜರಾಗಿದ್ದ ವಕೀಲೆ ಇಂದಿರಾ ಜೈಸಿಂಗ್‌ ಅವರು ಮಹಿಳೆಯರನ್ನು ‘ನವ ಹರಿಜನರು’ ಎಂದು ಪರಿಗಣಿಸಲಾಗುತ್ತಿದೆ. ಹಾಗಾಗಿ ದೇವಾಲಯಗಳಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ವಾದಿಸಿದರು.

ಇದಕ್ಕೆ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿತು. ‘ನೀವು ಯಾಕೆ ಹಾಗೆ ಹೇಳುತ್ತೀರಿ? ನೀವು ಆದಿಶಕ್ತಿ. ಸೃಷ್ಟಿಗೆ ಮಹಿಳೆಯೇ ಕಾರಣ. ನಾವು ಸಮಾನರು ಎಂದೇ ನೀವು ಹೇಳಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.