ADVERTISEMENT

ನೀರವ್, ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್ ನೋಟಿಸ್‌?

ಇಂಟರ್‌ಪೋಲ್‌ ಮೊರೆ: ಸಿಬಿಐ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:46 IST
Last Updated 20 ಮೇ 2018, 19:46 IST
ನೀರವ್ ಮೋದಿ
ನೀರವ್ ಮೋದಿ   

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್ ಜಾರಿ ಮಾಡುವಂತೆ ಇಂಟರ್‌ಪೋಲ್‌ನ ಮೊರೆ ಹೋಗಲು ಸಿಬಿಐ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ವಾರವಷ್ಟೇ ಮುಂಬೈ ನ್ಯಾಯಾಲಯದಲ್ಲಿ ಈ ಇಬ್ಬರ ವಿರುದ್ಧವೂ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಈ ಕ್ರಮಕ್ಕೆ ಮುಂದಾಗಿದೆ. ಇಂಟರ್‌ಪೋಲ್‌ನ ಮೊರೆ ಹೋಗಲು ಬೇಕಿರುವ ಅಗತ್ಯ ಸಿದ್ಧತೆಗಳನ್ನು ಸಿಬಿಐ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅಕ್ರಮವಾಗಿ ‘ಸಾಲಮರುಪಾವತಿ ಖಾತರಿ ಪತ್ರಗಳ (ಎಲ್‌ಒಯು)’ ನೆರವಿನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ₹ 13,000 ಕೋಟಿ ಸಾಲ ಪಡೆದು ಮರುಪಾವತಿ ಮಾಡದ ಆರೋಪ ಈ ಇಬ್ಬರ ಮೇಲಿದೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎನ್‌ಬಿಯು ಸಿಬಿಐಗೆ ಜನವರಿ 30ರಂದು ದೂರು ನೀಡಿತ್ತು. ಆದರೆ ಅದಕ್ಕೂ ಮೊದಲೇ ನೀರವ್ ಮತ್ತು ಮೆಹುಲ್ ಹಾಗೂ ಇಬ್ಬರೂ ದೇಶಬಿಟ್ಟು ಪರಾರಿಯಾಗಿದ್ದರು. ಆರೋಪಿಗಳು ಎಲ್ಲಿದ್ದಾರೆ ಎಂಬುದು ತಿಳಿಯದಿದ್ದ ಕಾರಣ ಸಿಬಿಐ ಆಗಲೇ ಇಂಟರ್‌ಪೋಲ್‌ನ ಮೂಲಕ ನೋಟಿಸ್ ಜಾರಿ ಮಾಡಿತ್ತು. ಅವರನ್ನು ಪತ್ತೆ ಮಾಡಲು ಮತ್ತು ಅವರ ಇರುವಿಕೆ ಬಗ್ಗೆ ಮಾಹಿತಿ ನೀಡಲು ಇಂಟರ್‌ಪೋಲ್ ಪ್ರಯತ್ನಿಸಿತ್ತಾದರೂ, ಅದು ಫಲಪ್ರದವಾಗಿರಲಿಲ್ಲ.

ಇಂಟರ್‌ಪೋಲ್‌ ಏಕೆ?: ಇಂಟರ್‌ಪೋಲ್‌ ಎಂಬುದು ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆ ಎಂಬುದರ ಸಂಕ್ಷಿಪ್ತ ರೂಪ.

ವಿಶ್ವದ 192 ದೇಶಗಳು ಇದರ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯ ದೇಶಗಳ ಪೊಲೀಸ್ ಪಡೆ/ಕಾನೂನು ಜಾರಿ ಪ್ರಾಧಿಕಾರಗಳ ಜಾಲದಂತೆ ಇಂಟರ್‌ಪೋಲ್ ಕಾರ್ಯನಿರ್ವಹಿಸುತ್ತದೆ.

ಯಾವುದೇ ಪ್ರಕರಣದಲ್ಲಿ ಜಾರಿಯಾದ ರೆಡ್‌ ಕಾರ್ನರ್ ನೋಟಿಸ್‌ ಅನ್ನು ಅದು ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತದೆ. ಆನಂತರ ಆರೋಪಿಗಳ ಪತ್ತೆಗೆ ಸದಸ್ಯ ರಾಷ್ಟ್ರಗಳು ಎಲ್ಲಾ ಸ್ವರೂಪದಲ್ಲೂ ನೆರವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.