ADVERTISEMENT

ನೀಲಕಂಠನಾಗಲು ಆರ್‌ಬಿಐ ಸಿದ್ಧ: ಉರ್ಜಿತ್‌ ಪಟೇಲ್‌

ಪಿಟಿಐ
Published 14 ಮಾರ್ಚ್ 2018, 20:28 IST
Last Updated 14 ಮಾರ್ಚ್ 2018, 20:28 IST
ನೀಲಕಂಠನಾಗಲು ಆರ್‌ಬಿಐ ಸಿದ್ಧ: ಉರ್ಜಿತ್‌ ಪಟೇಲ್‌
ನೀಲಕಂಠನಾಗಲು ಆರ್‌ಬಿಐ ಸಿದ್ಧ: ಉರ್ಜಿತ್‌ ಪಟೇಲ್‌   

ನವದೆಹಲಿ: ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಬೆಳಕಿಗೆ ಬರುತ್ತಿರುವ ಹಗರಣಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು, ‘ನೀಲಕಂಠನಂತೆ, ಆರ್‌ಬಿಐ ಕೂಡ ವಿಷ ಸೇವಿಸಲು ಮತ್ತು ತನ್ನ ವೈಫಲ್ಯ ಕುರಿತ ಟೀಕಾ ಪ್ರಹಾರಗಳನ್ನು ಮುಕ್ತ ಮನಸ್ಸಿನಿಂದ ಎದುರಿಸಲು ಮುಂದಾಗಲಿದೆ’ ಎಂದು ಹೇಳಿದ್ದಾರೆ.

ಬ್ಯಾಂಕ್‌ ವಂಚನೆ ಪ್ರಕರಣಗಳ ಬಗ್ಗೆ ಇದೇ ಮೊದಲ ಬಾರಿಗೆ ಪಟೇಲ್‌ ಅವರು ಮೌನ ಮುರಿದಿದ್ದಾರೆ. ‘ಅವ್ಯವಹಾರಗಳನ್ನು ಕಂಡು ನಮಗೂ (ಆರ್‌ಬಿಐಗೆ) ಸಿಟ್ಟು ಬರುತ್ತಿದೆ. ನಮ್ಮ ಮನಸ್ಸೂ ತೀವ್ರವಾಗಿ ಘಾಸಿಗೊಂಡಿದೆ. ಸರಳ ಭಾಷೆಯಲ್ಲಿಯೇ ಹೇಳುವುದಾದರೆ, ಕೆಲ ಉದ್ಯಮಿಗಳು, ಹಲವು ಬ್ಯಾಂಕ್‌ಗಳ ಸಿಬ್ಬಂದಿ ಜತೆ ಸೇರಿಕೊಂಡು ದೇಶದ ಭವಿಷ್ಯವನ್ನೇ ಲೂಟಿ ಮಾಡುತ್ತಿದ್ದಾರೆ. ಇಂತಹ ಅಪವಿತ್ರ ಸಂಬಂಧ ಕೊನೆಹಾಡಲು ಆರ್‌ಬಿಐ ಸರ್ವ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದ್ದಾರೆ.

ಪುರಾಣ ಕಥೆ ಉಲ್ಲೇಖಿಸಿದ ಉರ್ಜಿತ್‌, ‘ದೇಶದ ಸಾಲ ನೀಡಿಕೆ ಸಂಸ್ಕೃತಿಯನ್ನು ಸ್ವಚ್ಛಗೊಳಿಸಲು ಆರ್‌ಬಿಐ ಮುಂದಾಗಿದೆ. ದೇಶಿ ಅರ್ಥ ವ್ಯವಸ್ಥೆಯನ್ನು ಸಮುದ್ರಮಂಥನದಂತೆ ಕಡೆಯಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ದೇಶದ ಸುಸ್ಥಿರ ಸುರಕ್ಷತೆಯ ಅಮೃತ ಹೊರಬರುವವರೆಗೆ ಯಾರಾದರೂ ವಿಷ ಸೇವಿಸಬೇಕಾಗಿದೆ. ನೀಲಕಂಠನು ವಿಷ ಸೇವಿಸಿದಂತೆ ನಾವು ಕೂಡ (ಆರ್‌ಬಿಐ) ವಿಷ ಸೇವಿಸಲು ಸಿದ್ಧರಿದ್ದೇವೆ. ನಾವು ನಮ್ಮ ಕರ್ತವ್ಯ ನಿಭಾಯಿಸುತ್ತಿದ್ದೇವೆ. ಈ ಹಾದಿಯಲ್ಲಿ ಎದುರಾಗಲಿರುವ ತೊಂದರೆಗಳಿಗೆಲ್ಲ ಮುಖಾಮುಖಿಯಾಗಲು ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ.

ADVERTISEMENT

‘ಇಂತಹ ಘಟನೆಗಳು ಸಂಭವಿಸದಂತೆ ತಡೆಗಟ್ಟಲು ಆರ್‌ಬಿಐಗೆ ಸಾಧ್ಯವಾಗಲಿಲ್ಲ. ಎಲ್ಲೆಡೆ ನಾವು ಗಮನ ಕೇಂದ್ರಿಕರಿಸಲೂ ಆಗುವುದಿಲ್ಲ’ ಎಂದೂ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕಿಂಗ್‌ ಕ್ಷೇತ್ರವು ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ನಿಯಂತ್ರಣಕ್ಕೆ ಒಳಪಟ್ಟಿದೆ. ಇದು ನಿಯಂತ್ರಣ ವ್ಯವಸ್ಥೆಯಲ್ಲಿ ಬಿರುಕುಗಳಿಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಹೇಳಿದ್ದಾರೆ. ಗುಜರಾತ್‌ನ ನ್ಯಾಷನಲ್‌ ಲಾ ಯುನಿವರ್ಸಿಟಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಬ್ಯಾಂಕ್‌ಗಳ ನಿಯಂತ್ರಣ ವಿಷಯದಲ್ಲಿ ಹಣಕಾಸು ಸಚಿವಾಲಯದ ಪಾಲ್ಗೊಳ್ಳುವಿಕೆಯ ಕಾರಣಕ್ಕೆ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಷಯದಲ್ಲಿ ಮಾರುಕಟ್ಟೆ ಶಿಸ್ತನ್ನು ಸಮರ್ಪಕವಾಗಿ ಪಾಲಿಸದಿರುವುದರಿಂದ ವಂಚನೆಗಳು ನಡೆಯುತ್ತಿವೆ. ಇಂತಹ ಹಗರಣಗಳು ಮರುಕಳಿಸದಂತೆ ತಡೆಗಟ್ಟಲು ತನಿಖೆ ಬಲಪಡಿಸುವ ಮತ್ತು ಕಠಿಣ ಸ್ವರೂಪದ ದಂಡನಾ ಕ್ರಮಗಳನ್ನು ಜಾರಿಗೆ ತರುವ ಅಗತ್ಯ ಇದೆ’ ಎಂದರು.

**

ಈ ಅಮೃತ ಮಂಥನದಲ್ಲಿ ಕೈಗಾರಿಕಾ ಸಂಘಟನೆಗಳು ರಾಕ್ಷಸರ ಬೆನ್ನಿಗೆ ನಿಲ್ಲುವ ಬದಲಿಗೆ, ದೇವತೆಗಳನ್ನು ಬೆಂಬಲಿಸಬೇಕು.
– ಉರ್ಜಿತ್‌ ಪಟೇಲ್‌, ಆರ್‌ಬಿಐ ಗವರ್ನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.