ADVERTISEMENT

ನೇರ ಪ್ರಸಾರಗೊಂಡ ಮದ್ರಾಸ್ ಹೈಕೋರ್ಟ್‌ ಕಲಾಪ

ಇತಿಹಾಸ ಸೃಷ್ಟಿಸಿದ ನ್ಯಾಯಾಲಯ ಕಲಾಪ ಪ್ರಸಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2015, 11:12 IST
Last Updated 30 ಸೆಪ್ಟೆಂಬರ್ 2015, 11:12 IST

ಚೆನ್ನೈ (ಏಜೆನ್ಸೀಸ್‌): ಇದೇ ಮೊದಲ ಬಾರಿಗೆ ನ್ಯಾಯಾಲಯದ ಕಲಾಪ ನೇರ ಪ್ರಸಾರಗೊಂಡ ಘಟನೆಗೆ ಮದ್ರಾಸ್‌ ಹೈಕೋರ್ಟ್‌ ಬುಧವಾರ ಸಾಕ್ಷಿಯಾಯಿತು.

ಮಧುರೈ ಮೂಲದ ಇಬ್ಬರು ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯ ಕಲಾಪ ಹೈಕೋರ್ಟ್‌ ಆವರಣದಲ್ಲಿ ಅಳವಡಿಸಿದ್ದ 55 ಸೆಂ.ಮೀ ಎಲ್‌ಇಡಿ ಪರದೆಯ ಮೇಲೆ ನೇರ ಪ್ರಸಾರವಾಯಿತು.

ಸೆ.16ರಂದು ಇದೇ ಪ್ರಕರಣದ ವಿಚಾರಣೆಯ ಕಲಾಪ ವೀಕ್ಷಿಸಲು ಮಧುರೈನಿಂದ ಹೆಚ್ಚಿನ ಸಂಖ್ಯೆಯ ವಕೀಲರು ಮದ್ರಾಸ್‌ ಹೈಕೋರ್ಟ್‌ನಲ್ಲಿ ಜಮಾಯಿಸಿದ್ದರು. ಆದರೆ, ವಿಚಾರಣೆ ನಡೆಯಲಿದ್ದ ಕೋರ್ಟ್‌ ಹಾಲ್‌ಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ADVERTISEMENT

ಬುಧವಾರವೂ ಸಹ ಹೆಚ್ಚಿನ ಸಂಖ್ಯೆಯ ವಕೀಲರು ಕಲಾಪ ವೀಕ್ಷಿಸಲು ಬರುವ ನಿರೀಕ್ಷೆಯಿತ್ತು. ವಿಚಾರಣೆ ವೇಳೆ ಗದ್ದಲವಾಗಬಾರದೆಂಬ ಕಾರಣಕ್ಕೆ ಕೋರ್ಟ್‌ ಆವರಣದಲ್ಲಿ ಕಲಾಪ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ, ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನೇರ ಪ್ರಸಾರ ಸ್ಥಗಿತಗೊಳಿಸಲಾಗಿತ್ತು ಎನ್ನಲಾಗಿದೆ. ನ್ಯಾಯಾಂಗದ ಇತಿಹಾಸದಲ್ಲೇ ನ್ಯಾಯಾಲಯದ ಕಲಾಪ ನೇರ ಪ್ರಸಾರವಾಗಿದ್ದು ಇದೇ ಮೊದಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.