ADVERTISEMENT

'ನೋಟು ರದ್ದತಿ' ಎಂಬುದು ದೊಡ್ಡ ಹಗರಣ, ಇದು ಜನ ಸಾಮಾನ್ಯರ ಮೇಲೆ ನಡೆಸಿದ 'ನಿರ್ದಿಷ್ಟ ದಾಳಿ'

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2016, 7:18 IST
Last Updated 12 ನವೆಂಬರ್ 2016, 7:18 IST
'ನೋಟು ರದ್ದತಿ' ಎಂಬುದು ದೊಡ್ಡ ಹಗರಣ, ಇದು ಜನ ಸಾಮಾನ್ಯರ ಮೇಲೆ ನಡೆಸಿದ 'ನಿರ್ದಿಷ್ಟ ದಾಳಿ'
'ನೋಟು ರದ್ದತಿ' ಎಂಬುದು ದೊಡ್ಡ ಹಗರಣ, ಇದು ಜನ ಸಾಮಾನ್ಯರ ಮೇಲೆ ನಡೆಸಿದ 'ನಿರ್ದಿಷ್ಟ ದಾಳಿ'   

ನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ತನ್ನ ಆಪ್ತರಿಗೆ ಈ ನಡೆ ಬಗ್ಗೆ ತಿಳಿಸಿದ್ದರು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹೇಳಿ ಹಗರಣವೊಂದನ್ನು ನಡೆಸಲಾಗಿದೆ. ಇದಕ್ಕೆ ಕೆಲವು ದಿನಗಳ ಹಿಂದೆಯೇ ಯೋಜನೆ ಸಿದ್ಧಪಡಿಸಲಾಗಿತ್ತು. ಪ್ರಧಾನಿ ಈ ನಿರ್ಧಾರವನ್ನು ಪ್ರಕಟಿಸುವ ಮುನ್ನ, ಅವರು ತಮ್ಮ ಆಪ್ತರಿಗೆ ವಿಷಯ ತಿಳಿಸಿ ಕಪ್ಪು ಹಣವನ್ನು ಬಚ್ಚಿಡುವಂತೆ ಹೇಳಿದ್ದಾರೆ. ಪ್ರಧಾನಿಯವರು ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ನೋಟು ರದ್ದತಿಯಿಂದಾಗಿ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಇದು ಆರ್ಥಿಕತೆಯನ್ನು ಭಾದಿಸಲಿದೆ.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ ನಲ್ಲಿ ಠೇವಣಿ ಋಣಾತ್ಮಕವಾಗಿತ್ತು, ಆದರೆ  ಜುಲೈನಿಂದ ಸೆಪ್ಟೆಂಬರ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಅತೀ ಹೆಚ್ಚು ಠೇವಣಿ ಬ್ಯಾಂಕ್‍ಗಳಿಗೆ ಹರಿದು ಬಂದಿದೆ. ಹಾಗಾದರೆ ಇಷ್ಟೊಂದು ಹಣ ಎಲ್ಲಿತ್ತು?

ADVERTISEMENT

ಅವರೀಗ (ಮೋದಿ) ಇಷ್ಟೊಂದು ದೊಡ್ಡ ಮೊತ್ತದ ಹಣ ಬೆಳಕಿಗೆ ಬರುತ್ತಿದೆ. ಕಪ್ಪು ಹಣವನ್ನು ತಡೆಯುವುದಕ್ಕಾಗಿ ಈ ನಡೆ ಎಂದೂ ಹೇಳುತ್ತಿದ್ದಾರೆ. ಆದರೆ ಇಲ್ಲಿ ಹಣ ಒಂದು ಕೈಯಿಂದ ಇನ್ನೊಂದು ಕೈಗೆ ಬದಲಾವಣೆಯಾಗುತ್ತಿದೆಯಷ್ಟೇ. ಈ ರೀತಿ ಮಾಡುವುದಕ್ಕಾಗಿ ಜನರಿಗೆ ತೊಂದರೆ ನೀಡಲಾಗಿದೆ.
ತಮ್ಮ ಕಪ್ಪು ಹಣವನ್ನು ಠೇವಣಿ ಮಾಡಿದರೆ ಅದಕ್ಕೆ ತೆರಿಗೆ ಪಾವತಿ ಮಾಡಬೇಕು ಮತ್ತು ಶೇ.200 ರಷ್ಟು ದಂಡ ಪಾವತಿಸಬೇಕೆಂದು ಸರ್ಕಾರ ಹೇಳುತ್ತಿದೆ. ಅಂದರೆ ಶೇ. 90 ರಷ್ಟು ಹಣ ನಷ್ಟವಾದಂತೆ. ಆದಾಗ್ಯೂ, ಕಪ್ಪುಹಣ ಹೊಂದಿರುವ ಯಾವ ವ್ಯಕ್ತಿ ಇಷ್ಟೊಂದು ಹಣವನ್ನು ಠೇವಣಿ ಮಾಡಲು ಹೋಗುತ್ತಾರೆ? ಇದರರ್ಥ ಕಪ್ಪು ಹಣ ಹೊಂದಿದವರು ಯಾರೂ ತಮ್ಮ ಹಣವನ್ನು ಠೇವಣಿ ಮಾಡಬೇಡಿ ಎಂದು ಸರ್ಕಾರ ಪರೋಕ್ಷವಾಗಿ ಹೇಳುತ್ತಿದೆ.

ಸರ್ಕಾರದ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಬೇಕಿತ್ತು, ಎಟಿಎಂಗಳು ₹2000 ನೋಟನ್ನು ನೀಡುವುದಕ್ಕೆ ಸುಸಜ್ಜಿತವಾಗಿಲ್ಲ ಎಂದು ಗೊತ್ತಿದ್ದರೂ, ಅದನ್ನು ಲೆಕ್ಕಿಸದೆ ಸರ್ಕಾರ ನೋಟು ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.

ಈ ದೇಶದಲ್ಲಿ ಕಪ್ಪು ಹಣ ಹೊಂದಿರುವವರು ಯಾರು ಹೇಳಿ? ಅದಾನಿಯವರು, ಅಂಬಾನಿಯವರು, ಸುಭಾಶ್ ಚಂದ್ರ ಮತ್ತು ಬಾದಲ್ ಅವರು? ಅಥವಾ ರಿಕ್ಷಾವಾಲಗಳೋ,ಚಮ್ಮಾರರೋ, ಕಾರ್ಮಿಕರರೋ, ರೈತರೋ? ಎಂದು ಕೇಜ್ರಿವಾಲ್  ಪ್ರಶ್ನಿಸಿದ್ದಾರೆ.

ಇದು ಕಪ್ಪು ಹಣದ ವಿರುದ್ಧ ನಡೆದ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಅಲ್ಲ, ಇದು ಸಾಮಾನ್ಯ ಜನರ ಉಳಿತಾಯದ ಹಣದ  ಮೇಲೆ ನಡೆದ ನಿರ್ದಿಷ್ಟ ದಾಳಿ. ಸರ್ಕಾರದ ಈ ಉದ್ದೇಶ ಮತ್ತು ಅನುಷ್ಠಾನದ ಬಗ್ಗೆ ನಮ್ಮಲ್ಲಿ ಪ್ರಶ್ನೆಗಳಿವೆ ಎಂದಿದ್ದಾರೆ.

ಏತನ್ಮಧ್ಯೆ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಅಮಿತ್ ಶಾ ಅವರು ಪ್ರಾಮಾಣಿಕತೆಯ ಭಾಷಣ ಮಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.