ADVERTISEMENT

ಪತ್ರ ಬಹಿರಂಗ: ಮೋದಿ ‘ಇಷ್ಟ’ ಕೇಳಲಿರುವ ಪಿಎಂಒ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2014, 10:31 IST
Last Updated 13 ಏಪ್ರಿಲ್ 2014, 10:31 IST

ನವದೆಹಲಿ (ಪಿಟಿಐ): 2002ರ ಗೋಧ್ರೋತ್ತರ ಹತ್ಯಾಕಾಂಡದ ಬಳಿಕ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಡುವೆ ನಡೆದ ಪತ್ರ ವ್ಯವಹಾರವನ್ನು ಬಹಿರಂಗ ಪಡಿಸುವ ಬಗ್ಗೆ ಪ್ರಧಾನಿ ಸಚಿವಾಲಯವು ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಅಭಿಪ್ರಾಯ ಕೋರಲಿದೆ.

ಈ ಮೊದಲು, ಮಾಹಿತಿ ಹಕ್ಕು ಕಾಯ್ದೆಯ 8 (1) (h) ಕಲಂ  ಉದ್ಧರಿಸಿ ಯಾವುದೇ ಕಾರಣಗಳನ್ನು ನೀಡದೇ ಪ್ರಧಾನಿ ಕಚೇರಿಯ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ(ಸಿಪಿಐಒ) ಎಸ್‌ ಇ ರಿಜ್ವಿ ಅವರು ಈ ಸಂಬಂಧ ಮಾಹಿತಿ ನೀಡಲು ನಿರಾಕರಿಸಿದ್ದರು.

ಆದರೆ ಪ್ರಧಾನಿ ಸಚಿವಾಲಯದ ನಿರ್ದೇಶಕ  ಕೃಷ್ಣ ಕುಮಾರ್‌ ಅವರಿಗೆ
ಮೇಲ್ಮನವಿ ಸಲ್ಲಿಸಿದ ಅರ್ಜಿದಾರ,  ರಿಜ್ವಿ ಅವರು ಮಾಹಿತಿ ನಿರಾಕರಿಸಲು  ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಆಕ್ಷೇಪಿಸಿದ್ದರು.

ADVERTISEMENT

ಅಲ್ಲದೇ, ಘಟನೆ 11 ವರ್ಷಗಳಷ್ಟು ಹಳೆಯದು. ಆದ್ದರಿಂದ ತಪ್ಪಿತಸ್ಥರ  ತನಿಖೆ, ಗ್ರಹಿಕೆ ಹಾಗೂ ಪ್ರಾಸಿಕ್ಯೂಷನ್‌ ಮೇಲೆ ಯಾವುದೇ ಪರಿಣಾಮ ಬೀರದು ಎಂದೂ ಅರ್ಜಿದಾರ ವಾದಿಸಿದ್ದರು.

ಅರ್ಜಿದಾರ ನೀಡಿದ ಕಾರಣಗಳನ್ನು ಪರಿಗಣಿಸಿದ ಮೇಲ್ಮನವಿ ಪ್ರಾಧಿಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವಿವರಣೆಗಳನ್ನು ನೀಡುವಂತೆ ಸಿಪಿಐಒಗೆ ನಿರ್ದೇಶನ ನೀಡಿದೆ.

‘ಮಾಹಿತಿ ಹಕ್ಕು ಕಾಯ್ದೆಯ 8 (1) (h) ಕಲಂ ಅಡಿಯಲ್ಲಿ ಮಾಹಿತಿಗೆ ರಕ್ಷಣೆ ಇದೆ ಎಂಬ ವಾದ ಸಮರ್ಥನೀಯವಲ್ಲ. ಈ ಸಂಬಂಧ 15 ಕೆಲಸದ ದಿನಗಳ ಒಳಗಾಗಿ ಅರ್ಜಿದಾರನಿಗೆ ಮಾಹಿತಿ ನೀಡುವಂತೆ ಪ್ರಧಾನಿ ಸಚಿವಾಲಯದ ಸಿಪಿಐಒಗೆ ಸೂಚಿಸಿಲಾಗಿದೆ’ ಎಂದು ಕೃಷ್ಣ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.