ಚೆನ್ನೈ (ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಜೈಲು ಪಾಲಾದ ಕಾರಣ ಅವರ ನಿಷ್ಠಾವಂತ ಒ. ಪನ್ನೀರ್‌ಸೆಲ್ವಂ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದಕ್ಕೆ ವೇದಿಕೆ ಸಜ್ಜಾಗಿದೆ.
ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹಣಕಾಸು ಸಚಿವ ಪನ್ನೀರ್‌ಸೆಲ್ವಂ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
೬೩ ವರ್ಷದ ಪನ್ನೀರ್‌ಸೆಲ್ವಂ ಜಯಾ ಅವರ ಬಲಗೈ ಬಂಟನಾಗಿಯೇ ಗುರುತಿಸಿಕೊಂಡವರು. ಮೃದು ಭಾಷಿಯಾಗಿರುವ ಅವರು ರಾಜ್ಯದಲ್ಲಿ ಬಹುಸಂಖ್ಯಾತರಾದ ಮುದುಕುಲಥೋರ್ ಸಮುದಾಯಕ್ಕೆ ಸೇರಿದವರು.
೨೦೦೧ರಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದ್ದಾಗ ಅವರು ಕೇವಲ ಆರು ತಿಂಗಳ ಕಾಲ ಜಯಾ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದರು. ತಾನ್ಸಿ ಭೂಹಗರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ತಾವು ರಾಜೀನಾಮೆ ನೀಡಬೇಕಾಗಿ ಬಂದಿದ್ದಾಗ ಪನ್ನೀರ್‌ಸೆಲ್ವಂ ಅವರನ್ನೇ ಜಯಲಲಿತಾ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ೨೦೦೧ರ ಸೆ.೨೧ರಿಂದ ೨೦೦೨ರ ಮಾರ್ಚ್ ೧ರವರೆಗೆ ಅವರು ಆಡಳಿತ ನಡೆಸಿದ್ದರು. ಈ ಪ್ರಕರಣದಲ್ಲಿ ಜಯಾ ಖುಲಾಸೆಗೊಂಡ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು.
ಅಕ್ರಮ ಆಸ್ತಿ ಪ್ರಕರಣದಲ್ಲಿ ಶನಿವಾರ ವಿಶೇಷ ಕೋರ್ಟ್ ತಮ್ಮನ್ನು ಅಪರಾಧಿ ಎಂದು ಘೋಷಿಸಿದ ಬಳಿಕ ಜಯಲಲಿತಾ ಅವರು ಕೋರ್ಟ್ನಿಂದಲೇ ಪನ್ನೀರ್‌ಸೆಲ್ವಂ ಹೆಸರನ್ನು ಮುಖ್ಯಮಂತ್ರಿ ಗಾದಿಗೆ ಸೂಚಿಸಿದ್ದರು ಎನ್ನಲಾಗಿದೆ.
ಜೈಲಿನಲ್ಲಿಯೇ ಚರ್ಚೆ: ಜಯಾ ಅವರು ಇದಕ್ಕೆ ಮುನ್ನ ಭಾನುವಾರ ಬೆಳಿಗ್ಗೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಪನ್ನೀರ್‌ಸೆಲ್ವಂ, ಇಂಧನ ಸಚಿವ ನಾಥಂ ವಿಶ್ವನಾಥನ್, ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ ಹಾಗೂ ಸರ್ಕಾರದ ಸಲಹೆಗಾರ್ತಿಯಾಗಿರುವ ಮಾಜಿ ಮುಖ್ಯಕಾರ್ಯದರ್ಶಿ ಶೀಲಾ ಬಾಲಕೃಷ್ಣನ್ ಜತೆ ಜೈಲಿನಲ್ಲಿಯೇ ಚರ್ಚೆ ನಡೆಸಿದ್ದರು.
ರಾಜ್ಯಪಾಲರ ಭೇಟಿ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ತಕ್ಷಣವೇ ಪನ್ನೀರ್‌ಸೆಲ್ವಂ, ರಾಜಭವನಕ್ಕೆ ತೆರಳಿ ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾದರು. ಗೃಹ ಸಚಿವ ಆರ್.ವೈತಿಲಿಂಗಂ, ನಾಥಂ ವಿಶ್ವನಾಥನ್, ಹೆದ್ದಾರಿ ಸಚಿವ ಎಡಪ್ಪಡಿ ಪಳನಿಸ್ವಾಮಿ ಕೂಡ ಈ ಸಂದರ್ಭದಲ್ಲಿ ಇದ್ದರು. ಆದರೆ ರಾಜಭನದೊಳಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಇಂದು ಪ್ರಮಾಣವಚನ?: ತಮ್ಮ ಸಂಪುಟ ಸೇರುವ ಸಚಿವರ ಹೆಸರುಗಳನ್ನು ಕೂಡ ಪನ್ನೀರ್‌ಸೆಲ್ವಂ ರಾಜ್ಯಪಾಲರಿಗೆ ಕೊಟ್ಟರು. ಕೂಡಲೇ ರಾಜ್ಯಪಾಲರು ಹೊಸ ಸರ್ಕಾರ ರಚಿಸುವಂತೆ ಅವರಿಗೆ ಆಹ್ವಾನ ನೀಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಯಾ ಉತ್ತರಾಧಿಕಾರಿ ಸ್ಥಾನಕ್ಕೆ ನಾಥಂ ವಿಶ್ವನಾಥಂ, ಸೆಂಥಿಲ್ ಬಾಲಾಜಿ ಅವರ ಹೆಸರುಗಳು ಕೂಡ ಕೇಳಿ ಬಂದಿದ್ದವು. ‘ಪನ್ನೀರ್‌ಸೆಲ್ವಂ ಪಕ್ಷದ ಅತಿ ಹಿರಿಯ ನಾಯಕ. ಆದ ಕಾರಣ ಅವರನ್ನೇ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ‘‘ಅಮ್ಮಾ’’ ನಿರ್ದೋಷಿ ಎಂದು ಸಾಬೀತಾಗಿ ಹೊರಬರುವ ತನಕ ಪನ್ನೀರ್‌ಸೆಲ್ವಂ ಅಧಿಕಾರದಲ್ಲಿರುವರು’ ಎಂದು ಪಕ್ಷದ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.
ಟೀ ಅಂಗಡಿ ನಡೆಸುತ್ತಿದ್ದರು...
ಪನ್ನೀರ್‌ಸೆಲ್ವಂ ಮೊದಲು ಕೃಷಿಕರಾಗಿದ್ದರು. ೧೯೯೬ರಲ್ಲಿ ಪೆರಿಯಾಕುಳಂ ನಗರಪಾಲಿಕೆ ಅಧ್ಯಕ್ಷರಾಗುವುದಕ್ಕೆ ಮುನ್ನ ಚಹಾ ಮಾರಾಟ ಮಾಡುತ್ತಿದ್ದರು.
೨೦೦೧ರಲ್ಲಿ ಪೆರಿಯಾಕುಳಂ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದರು. ನಂತರದಲ್ಲಿ ಕಂದಾಯ ಹಾಗೂ ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ೨೦೦೬ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಸೋತಾಗ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು. ಪೆರಿಯಾಕುಳಂ ಕ್ಷೇತ್ರದಿಂದ ಎರಡು ಬಾರಿ ಅವರು ಆಯ್ಕೆಯಾಗಿದ್ದಾರೆ. ಪನ್ನೀರ್‌ಸೆಲ್ವಂ ನಿಷ್ಠೆಗೆ ಮಾರುಹೋದ ಜಯಲಲಿತಾ, 201೧ರಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ಮಹತ್ವದ ಹಣಕಾಸು ಖಾತೆಯನ್ನು ಅವರಿಗೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.