ADVERTISEMENT

ಪಾಕ್‌ ವಿರುದ್ಧ ಸರ್ಜಿಕಲ್ ಕಾರ್ಯಾಚರಣೆ: 35 ಉಗ್ರರು, 9 ಪಾಕ್‌ ಯೋಧರ ಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2016, 13:00 IST
Last Updated 29 ಸೆಪ್ಟೆಂಬರ್ 2016, 13:00 IST
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು   

ನವದೆಹಲಿ: ಭಾರತೀಯ ಸೇನೆ  ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗುದಾಣಗಳ ಮೇಲೆ ದಾಳಿ ನಡೆಸಿ 35 ಉಗ್ರರು ಸೇರಿದಂತೆ 9 ಪಾಕ್‌ ಸೈನಿಕರನ್ನು ಹತ್ಯೆ ಮಾಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಹೆಲಿಕಾಪ್ಟರ್‌ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದ ಭಾರತೀಯ ಸೇನೆ ಸರ್ಜಿಕಲ್‌ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ  ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತು. ಈ ಸಂದರ್ಭದಲ್ಲಿ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ 9 ಪಾಕ್‌ ಯೋಧರನ್ನು ಹತ್ಯೆ ಮಾಡಲಾಗಿದೆ
ಎಂದು ರಕ್ಷಣಾ ಮೂಲಗಳು ತಿಳಿಸಿವೆ.
 


 



35 ಉಗ್ರರನ್ನು ಹತ್ಯೆ ಮಾಡಿ ಸೇನಾ ಯೋಧರು ವಾಪಸ್ಸು ಮರಳಿದ್ದು, ಮುಂದಿನ ದಿನಗಳಲ್ಲಿಯೂ ಸೀಮಿತ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ. ಪಂಜಾಬ್‌ ಗಡಿ ಪ್ರದೇಶದಲ್ಲಿರುವ (10 ಕಿ.ಮೀ) ಗ್ರಾಮಗಳಲ್ಲಿನ ಜನರನ್ನು ತೆರವುಗೊಳಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ.

ADVERTISEMENT


ಸರ್ಜಿಕಲ್ ಕಾರ್ಯಾಚರಣೆ ಎಂದರೇನು?
ನಿರ್ದಿಷ್ಟ ಮತ್ತು ನಿಖರ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಆಪರೇಷನ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್‌ ಆಪರೇಷನ್ ಎಂದೂ ಕರೆಯಲಾಗುತ್ತದೆ. ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ.

1) ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಜನರ ಬಿಡುಗಡೆಗಾಗಿ.

2) ವೈರಿ ದೇಶದಲ್ಲಿ ನಮ್ಮ ದೇಶದ ಸರ್ಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.

ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.

ಇಂಥ ಕಾರ್ಯಾಚರಣೆಗೆ ಇಸ್ರೇಲ್ ಸೇನೆ ಹೆಸರುವಾಸಿ. ನೈಜೀರಿಯಾಗೆ ನುಗ್ಗಿದ ಇಸ್ರೇಲ್ ಸೇನೆ ತನ್ನ ಒತ್ತೆ ನಾಗರಿಕರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆ ಈಚೆಗೆ ಬರ್ಮಾ ಗಡಿಗೆ ನುಗ್ಗಿ ಭಯೋತ್ಪಾದಕರನ್ನು ಕೊಂದಿದ್ದು ಸರ್ಜಿಕಲ್ ಆಪರೇಷನ್‌ಗೆ ಉತ್ತಮ ಉದಾಹರಣೆ.

ಸರ್ಜಿಕಲ್ ಅಥವಾ ಪ್ರಿಸಿಷನ್ ಕಾರ್ಯಾಚಾರಣೆಯು ಒಂದು ದೇಶದ ಮಿಲಿಟರಿ ಬಲ, ರಾಜಕೀಯ ಇಚ್ಛಾಶಕ್ತಿ ಮತ್ತು ನಾಯಕರ ಬುದ್ಧಿವಂತಿಕೆ ತೋರುವ ಟ್ಯಾಕ್ಟಿಕಲ್ ಯುದ್ಧತಂತ್ರವೂ ಹೌದು.

(ಸಾಂದರ್ಭಿಕ ಚಿತ್ರಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.