ADVERTISEMENT

ಪುಸ್ತಕ ನಿಷೇಧಿಸುವ ಶಕ್ತಿಗಳೇ ಹೆಚ್ಚು ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2015, 7:21 IST
Last Updated 22 ಜನವರಿ 2015, 7:21 IST

ಜೈಪುರ: ಪುಸ್ತಕ ಸಂಸ್ಕೃತಿಗೆ ಗ್ಯಾಡ್ಜೆಟ್‌ಗ­ಳಂತಹ ವಿದ್ಯುನ್ಮಾನ ಪರದೆಗಳಿಗಿಂತಲೂ ಪುಸ್ತಕ ನಿಷೇಧಿ­ಸುವ ಶಕ್ತಿಗಳೇ ಹೆಚ್ಚು ಅಪಾಯ­ಕಾರಿಯಾಗಿವೆ ಎಂದು ಪ್ರಸಿದ್ಧ ನಾಟಕಕಾರ ಗಿರೀಶ ಕಾರ್ನಾಡ್‌ ಅಭಿಪ್ರಾಯಪಟ್ಟರು.

ಜೈಪುರ ಸಾಹಿತ್ಯ ಉತ್ಸವದಲ್ಲಿ ಬುಧ­ವಾರ ನಡೆದ ಗೋಷ್ಠಿಯೊಂದರಲ್ಲಿ ‘ಓದುವ ಹವ್ಯಾಸ’ ವಿಷಯದ ಕುರಿತು ಮಾತನಾಡಿದ ಅವರು, ‘ಓದು ಕಣ್ಮರೆ­ಯಾಗುತ್ತಿದೆ, ಹೊಸ ತಲೆಮಾರು ತಂತ್ರ­ಜ್ಞಾನ ಸ್ನೇಹಿಯಾಗಿರುವುದು ಪುಸ್ತಕ ಸಂಸ್ಕೃತಿ ಕ್ಷೀಣಿಸಲು ಕಾರಣ­ವಾಗುತ್ತಿದೆ ಎನ್ನುವ ಆತಂಕ ವ್ಯಕ್ತವಾ­ಗುತ್ತಿದೆ. ಆದರೆ, ಇದೆಲ್ಲಕ್ಕಿಂತಲೂ ಹೆಚ್ಚಿನ ಅಪಾಯ ಇರುವುದು ಪುಸ್ತಕ ನಿಷೇಧಿ­ಸುವ ಪ್ರವೃತ್ತಿಯಿಂದ’ ಎಂದು ಕಳವಳ ವ್ಯಕ್ತಪಡಿಸಿದರು. ತಮ್ಮ ಆತಂಕಕ್ಕೆ ಅವರು, ತಮಿಳುನಾಡಿನ ಲೇಖನ ಪೆರು­ಮಾಳ್‌ ಮುರುಗನ್‌ ಅವರ ಉದಾ­ಹರಣೆ ನೀಡಿದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ­ಕೊಂಡ ಕಾರ್ನಾಡರು, ವಿದ್ಯುತ್‌ ಇಲ್ಲದ ಮನೆಯಲ್ಲಿ ಎಪ್ಪತ್ತಾರು ವರ್ಷಗಳ ಹಿಂದೆ ಹುಟ್ಟಿದ ನನಗೆ ಆ ಸಂದರ್ಭದಲ್ಲಿ ಓದುವುದನ್ನು ಕಲ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಕತ್ತಲಾದ ಮೇಲೆ ಸೀಮೆಎಣ್ಣೆ ಬುಡ್ಡಿ ದೀಪ ಹಚ್ಚುತ್ತಿದ್ದೆವು. ಊಟವಾದ ಕೂಡಲೇ ಮಲಗುತ್ತಿದ್ದೆವು. ಆಗ ಮಕ್ಕಳು ಓದಬಹುದಾದ ಪುಸ್ತಕ­ಗಳೂ ಇರಲಿಲ್ಲ ಎಂದರು. ವಿದ್ಯುತ್‌ ಬಂದ ನಂತರ ರಾತ್ರಿ ವೇಳೆ ಓದುವ ಅಭ್ಯಾಸ ಶುರುವಾಯಿತು. ಅದು ಜೀವ­ನದ ಅದ್ಭುತ ಸುಖಗಳ-­ಲ್ಲೊಂದಾಗಿದೆ ಎಂದು ತಮ್ಮ ಓದಿನ ಪ್ರೀತಿಯ ಕುರಿತು ಕಾರ್ನಾಡ್‌ ಹೇಳಿದರು.

ಪೆರುಮಾಳ್‌ ಪ್ರಸಂಗ: ಪುಸ್ತಕ ನಿಷೇಧದ ಪ್ರಸ್ತಾಪವು ಕಾರ್ನಾಡರ ಕಳವಳ ನಂತರ ನಡೆದ ‘ಸಾಹಿತ್ಯದ ವಾಣಿಜ್ಯೀಕರಣ ಒಳ್ಳೆಯ ಬರವಣಿಗೆಗೆ ಮಾರಕವಾಗಿ­ದೆಯೇ?’ ಎನ್ನುವ ಗೋಷ್ಠಿಯಲ್ಲೂ ಅನುರಣಿಸಿತು. ‘ಪೆರುಮಾಳ್‌ ಎನ್ನುವ ಲೇಖಕ ಸಾವಿಗೀಡಾಗಿದ್ದಾನೆ’ ಎನ್ನುವ ಪೆರು­ಮಾಳರ ಹೇಳಿಕೆ ಹಿನ್ನೆಲೆಯಲ್ಲಿ ನಡೆದ ಚರ್ಚೆ, ಅವರನ್ನು ಮತ್ತೆ ಜೀವಂತ­ಗೊಳಿಸಿದ ಪ್ರಯತ್ನದಂತಿತ್ತು.
‘ಲೇಖಕ ಬರೆಯಲಾಗದ ಸ್ಥಿತಿ ಹೆಚ್ಚು ಆತಂಕಕಾರಿಯಾಗಿದ್ದು, ಜಾತೀಯ ಶಕ್ತಿ­ಗಳು ಹೆಚ್ಚು ಪ್ರಭಾವಿಯಾ­ಗುತ್ತಿರುವುದೇ ಇದಕ್ಕೆ ಕಾರಣವಾಗಿದೆ’ ಎಂದು ತಮಿಳು ಲೇಖಕಿ ಸಿ.ಎಸ್‌. ಲಕ್ಷ್ಮಿ ಅಭಿಪ್ರಾಯ­ಪಟ್ಟರು.

ಪೆರುಮಾಳ್‌ ಅವರಂಥ ಲೇಖಕರ ಮೇಲೆ ಜಾತೀಯ ಶಕ್ತಿಗಳು ಒತ್ತಡ ತಂದಾಗ, ಅವರ ನೈತಿಕ ಬೆಂಬಲಕ್ಕೆ ನಿಲ್ಲುವುದು ಲೇಖಕ ಸಮೂಹದ ಕರ್ತವ್ಯ. ಬರಹಗಾರರು ಮಾತ್ರವಲ್ಲದೆ ಪ್ರಕಾಶಕರು, ಕಲಾವಿದರು ಕೂಡ ಒಂದು ಧ್ವನಿಯಾಗಿ ಲೇಖಕ ಅಥವಾ ಪುಸ್ತಕಗಳನ್ನು ಹತ್ತಿಕ್ಕುವ ಪ್ರವೃತ್ತಿಯನ್ನು ವಿರೋಧಿಸಬೇಕಿದೆ. ಇಲ್ಲದೆ ಹೋದರೆ, ಇಂದಿನ ಪುಸ್ತಕ ಸುಡುವ ಪ್ರವೃತ್ತಿ ಮುಂದಿನ ದಿನಗಳಲ್ಲಿ ಲೇಖಕನನ್ನೇ ಸುಡುವ ಅತಿರೇಕಕ್ಕೆ ಹೋಗಬಹುದು ಎಂದು ಲೇಖಕಿ ನಯನತಾರಾ ಸೈಗಲ್‌ ಹೇಳಿದರು.

ಪುಸ್ತಕವೊಂದು ನಿಷೇಧಕ್ಕೆ ಒಳಗಾ­ದಾಗ ಅದರ ಅಂತರ್ಜಾಲ ಆವೃತ್ತಿ­ಯನ್ನು (ಇ–ಪುಸ್ತಕ) ಆಸಕ್ತರು ಉಚಿತವಾಗಿ ಡೌನ್‌ಲೋಡ್‌ ಮಾಡಿ­ಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ‘ನಿಷೇಧ ಸಂಸ್ಕೃತಿ’ಗೆ ಪ್ರತಿಕ್ರಿಯಿಸ­ಬೇಕಾಗಿದೆ ಎಂದು ಪ್ರಕಾಶಕಿ ವಿ.ಎಸ್‌. ಕಾರ್ತೀಕಾ ಹೇಳಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಒದಗಿದಾಗ ಸಹೃದಯರು ಧ್ವನಿಯೆತ್ತ­ಬೇಕು, ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳಲ್ಲಿ ತೊಡಗ­ಬೇಕು ಎಂದು ಗೋಷ್ಠಿಯನ್ನು ನಿರ್ವ­ಹಿಸಿದ ಲೇಖಕ ಪ್ರಸೂನ್‌ ಜೋಶಿ ಅಭಿಪ್ರಾಯಪಟ್ಟರು.
ಮಾಧ್ಯಮ ತಜ್ಞ, ಲೇಖಕ ಮಾರ್ಕ್‌ ಟುಲಿ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇಷ್ಟಪಡುವ ಪಾಪಕೃತ್ಯ
ನೀವು ತುಂಬಾ ಇಷ್ಟಪಡುವ ಪಾಪ (Sin) ಯಾವುದು? ಹಾರ್ವರ್ಡ್‌ನ ‘ಮಹೀಂದ್ರ ಹ್ಯುಮಾನಿಟಿ ಸೆಂಟರ್‌’ನ ಹೋಮಿ ಕೆ. ಭಾಭಾ ಅವರ ಈ ಪ್ರಶ್ನೆಗೆ ಕಾದಂಬರಿಗಾರ್ತಿ ಇಮರ್‌ ಮೆಕ್‌ಬ್ರೈಡ್‌ ಅವರ ಉತ್ತರ– ‘ವಿಷಯಾಸಕ್ತಿ’ (Lust). ತಕ್ಷಣವೇ ಭಾಭಾ ಅವರು ಪ್ರತಿಕ್ರಿಯಿಸಿದ್ದು– ‘ಸಭಿಕರಲ್ಲಿ ನೀವು ಎಷ್ಟುಮಂದಿ ವಿಷಯಾಸಕ್ತಿ ಎನ್ನುವ ಪಾಪ­ವನ್ನು ಇಷ್ಟಪಡುತ್ತೀರಿ?’. ಇದಕ್ಕೆ ಉತ್ತರವಾಗಿ ಮೇಲೇರಿದ್ದು ಕೆಲವೇ ಕೈಗಳು. ಉಳಿದವರದೆಲ್ಲ ನಗುವಿನ ಉತ್ತರ.

‘ಒಳ್ಳೆ ಪಾಪಗಳನ್ನು ಎಲ್ಲರೂ ಪ್ರೀತಿಸುತ್ತಾರೆ. ಪಾಪಕೃತ್ಯ­ಗಳನ್ನು ತಡೆಯಲು ಪ್ರಯತ್ನಿಸುವುದು ಕೂಡ ಪಾಪವೇ ಆಗಿ­ರುತ್ತದೆ’ ಎಂದು ಭಾಭಾ ಹೇಳಿದಾಗ ಮತ್ತೆ ಜೋರುನಗು. ‘ಕೆಲವು ಪಾಪಕೃತ್ಯಗಳು ನಮ್ಮನ್ನು ಪುಣ್ಯದತ್ತ ಕೊಂಡೊ­ಯ್ಯುತ್ತವೆ. ದೇವರು­ಗಳು ಕೂಡ ಪಾಪ ಮಾಡುವುದಿದೆ. ಅದಕ್ಕಾಗಿ ಶಿಕ್ಷೆಯನ್ನೂ ಅನುಭವಿಸಿ­ದ್ದಾರೆ’ ಎಂದ ಕವಿ ಅಶೋಕ್‌ ವಾಜಪೇಯಿ, ಬ್ರಹ್ಮ ತನ್ನ ಮಗಳನ್ನೇ ಕಾಮಿಸಿ­ದ್ದನ್ನು ಉದಾಹರಿಸಿದರು. ‘ಸಾವಿರ ಕಣ್ಣುಗಳ ಇಂದ್ರ ದೇವರು­ಗಳಲ್ಲೇ ಅತ್ಯಂತ ವಿಷಯಾಸಕ್ತ’ ಎಂದು ಭಾಭಾ ಚಟಾಕಿ ಹಾರಿಸಿ­ದರು. 

ಪಾಪಗಳ ಕುರಿತ ಈ ಸೌಂದರ್ಯಸಮೀಕ್ಷೆ ಮತ್ತು ವಿನೋದವನ್ನು ಮರೆ­ಮಾಚಿದ್ದು, ಅಹಮದಾ­ಬಾದ್‌ನ ಲೇಖಕಿ ಎಸ್ತರ್‌ ಡೇವಿಡ್‌ ಅವರ ಮಾತುಗಳು. ಎಸ್ತರ್‌ ಅವರು ತಮ್ಮ ಪಾಪಪ್ರಜ್ಞೆ­ಯನ್ನು ಗುಜರಾತ್‌ ಗಲಭೆಯ ಪ್ರಸಂಗಕ್ಕೆ ತಳಕು ಹಾಕಿದರು. ಗುಜರಾತ್‌ನಲ್ಲಿ ಗಲಭೆಗಳು ನಡೆಯುತ್ತಿರುವ ಸಂದರ್ಭ­ದಲ್ಲಿ ತಾವು ಅಸಹಾಯಕತೆ ಮತ್ತು ಪಾಪಪ್ರಜ್ಞೆಯಿಂದ ನರಳಿದ್ದನ್ನು ಅವರು ನೆನಪಿಸಿಕೊಂಡರು.

ಕಂಬಾರರಿಗೆ ಗೌರವ
ಓದುವ ಪ್ರವೃತ್ತಿಗೆ ಸಂಬಂಧಿಸಿದ ಗೋಷ್ಠಿ­ಯಲ್ಲಿ ‘ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌’ನ ಹೊಸ ಆವೃತ್ತಿ ಬಿಡುಗ­ಡೆ­­ಯಾಯಿತು. ಸಾಹಿತ್ಯಕ್ಕೆ ಪ್ರತ್ಯೇಕ ವಿಭಾಗವಿದ್ದು, ವರ್ಷದ ವ್ಯಕ್ತಿಗಳ­ನ್ನಾಗಿ ವಿವಿಧ ಭಾಷೆಗಳ ಲೇಖಕರನ್ನು ಗುರ್ತಿಸಿರುವುದು ಈ ಪುಸ್ತಕದ ವಿಶೇಷ. ಕರ್ನಾಟಕದಿಂದ ಕನ್ನಡ ಸಾಹಿತ್ಯಕ್ಕೆ ನೀಡಿರುವ ವಿಶೇಷ ಕೊಡು­ಗೆ­ಗಾಗಿ ಕವಿ ಚಂದ್ರಶೇಖರ ಕಂಬಾರ ಅವರನ್ನು ಗುರ್ತಿಸ­ಲಾಗಿದ್ದು, ಕಳೆದ ವರ್ಷ ನಿಧನರಾದ ಯು.ಆರ್‌. ಅನಂತ­­ಮೂರ್ತಿ ಅವರ ಬಗ್ಗೆ ವಿಶೇಷ ಬರಹ­ವೊಂದನ್ನು ಪುಸ್ತಕ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT