ADVERTISEMENT

ಪೌಲ್ಟ್ರಿ ಕೋಳಿ, ಮೊಟ್ಟೆ ಸೇವನೆ: ಎಚ್ಚರವಿರಲಿ

ಪಶುವೈದ್ಯರ ಮೇಲ್ವಿಚಾರಣೆಯಲ್ಲೇ ಕೋಳಿಗಳಿಗೆ ಆ್ಯಂಟಿಬಯೊಟಿಕ್‌ ನೀಡಿ: ಕಾನೂನು ಆಯೋಗ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 19:30 IST
Last Updated 10 ಜುಲೈ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ನೀವು ಸೇವಿಸುವ ಕೋಳಿ ಮಾಂಸ ಮತ್ತು ಮೊಟ್ಟೆಯು ಆ್ಯಂಟಿಬಯೊಟಿಕ್‌ಗಳಿಂದ (ಪ್ರತಿಜೀವಕ) ಕಲುಷಿತಗೊಂಡಿರಬಹುದಾದ ಸಾಧ್ಯತೆಯಿದ್ದು, ಅದು ನಿಮ್ಮ ದೇಹದಲ್ಲಿನ ಔಷಧ ನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು ಎಂದು ಕಾನೂನು ಆಯೋಗ ಎಚ್ಚರಿಸಿದೆ.

ಆದ್ದರಿಂದ, ಪಶುವೈದ್ಯರ ಮೇಲ್ವಿಚಾರಣೆಯ ಹೊರತಾಗಿ, ಮಾಂಸದ ಕೋಳಿ ಮತ್ತು ಮೊಟ್ಟೆ ಇಡುವ ಕೋಳಿಗಳಿಗೆ ಕಾಕ್ಸಿಡಿಯೋಸ್ಟಾಟ್‌ ಔಷಧಿ ಸೇರಿದಂತೆ ಆ್ಯಂಟಿಬಯೊಟಿಕ್‌ಗಳನ್ನು ನೀಡುವಂತಿಲ್ಲ ಎಂದು ಆಯೋಗ ಶಿಫಾರಸು ಮಾಡಿದೆ.

ಅಲ್ಲದೆ, ಪೌಷ್ಟಿಕಾಂಶಯುಕ್ತ ಮತ್ತು ಗ್ರಾಹಕ ಆಹಾರ ಯೋಗ್ಯ ಗುಣಮಟ್ಟದ  ಆಹಾರವನ್ನೇ ಕೋಳಿಗಳಿಗೆ ನೀಡುವುದು ಅವಶ್ಯ ಎಂಬುದನ್ನು ಕೋಳಿ ಸಾಕಣೆ ಕೇಂದ್ರದ ಕೋಳಿಗಳ ಕುರಿತಾದ ಅಧ್ಯಯನ ವರದಿಯಲ್ಲಿ ಆಯೋಗವು ಎತ್ತಿ ಹಿಡಿದಿದೆ.

ADVERTISEMENT

‘ಸದ್ಯ ಯಾವುದೇ ಶಾಸನಬದ್ಧ ನಿಯಮಗಳು ಇಲ್ಲದಿರುವುದರಿಂದ ಕೋಳಿ ಸಾಕಣೆ ಕೇಂದ್ರಗಳಲ್ಲಿ ಕೋಳಿಗಳಿಗೆ ಬೇಕಾಬಿಟ್ಟಿ ಆ್ಯಂಟಿಬಯೊಟಿಕ್‌ಗಳನ್ನು  ನೀಡಲಾಗುತ್ತಿದೆ’ ಎಂದು ವರದಿ ಹೇಳಿದೆ. ‘ವಾತಾವರಣವು ಕೋಳಿ ಸಾಕಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಧಿಕ ತಾಪಮಾನ ಇದ್ದರೆ ಕೋಳಿಗಳ ಉತ್ಪಾದಕತೆ ಕಡಿಮೆ ಆಗುತ್ತದೆ. ಹೀಗಾಗಿ ಭಾರತದಲ್ಲಿ ಸ್ಥಿರ ತಾಪಮಾನದಲ್ಲೇ ಕೋಳಿಗಳನ್ನು ಪೋಷಿಸಲಾಗುತ್ತದೆ. ವಾತಾವರಣದಲ್ಲಿ ಸಣ್ಣ ವ್ಯತ್ಯಾಸವಾದರೂ ಅವುಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದನ್ನು ತಡೆಯುವ ಸಲುವಾಗಿ ಅವುಗಳಿಗೆ ಆ್ಯಂಟಿಬಯೊಟಿಕ್‌ಗಳನ್ನು ನೀಡಲಾಗುತ್ತದೆ’ ಎಂದು ವರದಿ ಹೇಳಿದೆ.

ಈ ಸಂಬಂಧ ಮುಂಬೈನ ಟಾಟಾ ಮೆಮೋರಿಯಲ್ ಕೇಂದ್ರ ನೀಡಿದ ಸಲಹೆಯಲ್ಲಿ, ‘ಕೋಳಿ ಸಾಕಣೆ ಕೇಂದ್ರದಲ್ಲಿ ಆ್ಯಂಟಿಬಯೊಟಿಕ್‌ಗಳನ್ನು ಬಳಸುವ ಪರಿಣಾಮವಾಗಿ ಭಾರತದಲ್ಲಿ ಅನೇಕರು ಆ್ಯಂಟಿಬಯೊಟಿಕ್‌ ನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ  ಬಳಲುತ್ತಿದ್ದಾರೆ. ಮುಕ್ತ ಮತ್ತು ಸ್ವಚ್ಛ ಸ್ಥಳದಲ್ಲಿ ಕೋಳಿಗಳನ್ನು ಬೆಳೆಸಿದರೆ ಆ್ಯಂಟಿಬಯೊಟಿಕ್‌ ನೀಡಿಕೆಯ ಅಗತ್ಯ ಕಡಿಮೆಯಾಗುತ್ತದೆ. ಆಗ ಕೋಳಿ ಮಾಂಸ ಮತ್ತು ಮೊಟ್ಟೆ ಹೆಚ್ಚು ಆರೋಗ್ಯಕರವಾಗಿರುತ್ತದೆ’ ಎಂದು ಹೇಳಲಾಗಿದೆ.

2014ರಲ್ಲಿ ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಇಲಾಖೆಯು ಎಲ್ಲಾ ರಾಜ್ಯಗಳ ಪಶುಸಂಗೋಪನಾ ಇಲಾಖೆಗಳಿಗೆ ನೀಡಿದ ಸಲಹೆಯಲ್ಲಿ, ‘ಕೋಳಿ, ದನ ಮತ್ತು ಮೀನುಗಳಿಗೆ ನಿರಂತರವಾಗಿ ಆ್ಯಂಟಿಬಯೊಟಿಕ್‌ಗಳನ್ನು ನೀಡುವುದು ಜನರ ಬದುಕಿನ ಮೇಲೂ ದುಷ್ಪರಿಣಾಮ ಬೀರುತ್ತದೆ’ ಎಂದು ಹೇಳಿತ್ತು. ಕಾನೂನು ಆಯೋಗವು ಇದೀಗ ಮತ್ತೊಮ್ಮೆ ಈ ಸಲಹೆಯನ್ನು ನೆನಪಿಸಿದೆ.

ಮೊಟ್ಟೆಯಿಡುವ ಕೋಳಿ ಮತ್ತು ಮಾಂಸದ ಕೋಳಿಗಳಿಗೆಂದೇ ಪ್ರತ್ಯೇಕ ಹಿಂಸೆ ತಡೆ ನಿಯಮಗಳನ್ನೂ ಆಯೋಗವು ರೂಪಿಸಿದೆ.

‘ಕೋಳಿ ಸಾಗಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿ ಈಗಾಗಲೇ ಇರುವ ಕಾನೂನು, ಅಂತರರಾಷ್ಟ್ರೀಯವಾಗಿ ರೂಢಿಯಲ್ಲಿರುವ ಸಂಗತಿಗಳು ಹಾಗೂ ಕಾನೂನು ಆಯೋಗ ಸಲ್ಲಿಸಿದ ವರದಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಪರಿಶೀಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.