ನವದೆಹಲಿ: ಮಕ್ಕಳ ಭವಿಷ್ಯ ರೂಪಿಸಬೇಕಾದ ದೇಶದ ಸಾವಿರಾರು ಪ್ರಾಥಮಿಕ ಶಾಲೆಗಳಲ್ಲಿ ಇಂದಿಗೂ ಲಕ್ಷಾಂತರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿದ್ದು ಶಿಕ್ಷಣದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಸಂಸದೀಯ ಸಮಿತಿಯ ವರದಿ ಬಹಿರಂಗಗೊಳಿಸಿದೆ.
ಪ್ರಾಥಮಿಕ ಶಾಲೆಗಳಿಗೆ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಕ ಮಾಡಲು ಬಹುತೇಕ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂದು ವರದಿ ಹೇಳಿದೆ.
ಬಿಜೆಪಿ ‘ಮಾದರಿ ರಾಜ್ಯ’ ಎಂದು ಹೇಳುತ್ತಿರುವ ಗುಜರಾತ್‌ನಲ್ಲಿ 9 ಸಾವಿರ ಹಾಗೂ ಕರ್ನಾಟಕದಲ್ಲಿ ನಾಲ್ಕು ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.
ಉತ್ತರ ಪ್ರದೇಶ ಮೊದಲು: ಶಿಕ್ಷಕರ ಕೊರತೆ ಎದುರಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 1.4 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಉಳಿದಿವೆ. ನಂತರದ ಸ್ಥಾನದಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳಗಳಿದ್ದು ಇಲ್ಲಿ ಕ್ರಮವಾಗಿ 1.3 ಲಕ್ಷ 46 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಗುಜರಾತ್, ಹರಿಯಾಣ, ಪಂಜಾಬ್ ಮತ್ತು ರಾಜಸ್ತಾನ ಸೇರಿದಂತೆ ಅನೇಕ ರಾಜ್ಯಗಳು ಕಳೆದ ಮೂರು ವರ್ಷಗಳಿಂದ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿಲ್ಲ. ಕೆಲವು ರಾಜ್ಯಗಳು ಶಿಕ್ಷಕರ ತರಬೇತಿಗೆ ಮೀಸಲಿಟ್ಟ ಹಣವನ್ನೂ ವೆಚ್ಚ ಮಾಡುತ್ತಿಲ್ಲ.
2010 ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಇದುವರೆಗೂ ಕೇಂದ್ರ ಸರ್ಕಾರ ಒಟ್ಟು 19.85 ಲಕ್ಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ.
ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳು ಇಲ್ಲಿಯವರೆಗೆ 15.06 ಲಕ್ಷ ಶಿಕ್ಷಕರನ್ನು ನೇಮಕ ಮಾಡಿಕೊಂಡಿವೆ. ಆ ಪೈಕಿ ಇನ್ನೂ ಆರು ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.
ಪಾಲನೆಯಾಗದ ಸೂತ್ರ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಪ್ರತಿ 27 ಮಕ್ಕಳಿಗೆ ಒಬ್ಬ ಶಿಕ್ಷಕನಿರುವುದು ಕಡ್ಡಾಯ. ಆದರೆ, ಸರ್ಕಾರಗಳು ಶಿಕ್ಷಕರ ನೇಮಕಾತಿ ಮಾಡಿಕೊಳ್ಳದಿರುವ ಕಾರಣ ಆರ್‌ಟಿಇ ಸೂಚಿಸಿದ 27:1 ವಿದ್ಯಾರ್ಥಿ, ಮಕ್ಕಳ ಅನುಪಾತ ಸೂತ್ರ ಪಾಲನೆಯಾಗುತ್ತಿಲ್ಲ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ಉತ್ತರ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಈ ಅನುಪಾತ 57:1 ರಷ್ಟಿದೆ.
ಇದರಿಂದಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆಯಿಂದ ಹೊರ ಬರುತ್ತಿರುವ ವಿದ್ಯಾರ್ಥಿಗಳ ಜ್ಞಾನದ ಮಟ್ಟವೂ ಶೋಚನೀಯವಾಗಿದೆ ಎಂದು ಸ್ಥಾಯಿ ಸಮಿತಿ ವರದಿ ಕಳವಳ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.