ಬೆಂಗಳೂರು/ನವದೆಹಲಿ(ಪಿಟಿಐ): ಚಿನ್ನದ ಗಟ್ಟಿ ಮತ್ತು ಆಭರಣಕ್ಕೆ ದಿನೇ ದಿನೇ ಬೇಡಿಕೆ ಕಡಿಮೆ ಆಗುತ್ತಿರುವುದರಿಂದ ಚಿನ್ನದ ಧಾರಣೆ ನಗರದಲ್ಲಿ ಒಂದೇ ದಿನದಲ್ಲಿ ರೂ. 506ರಷ್ಟು ಕುಸಿದಿದ್ದು, ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಬೆಂಗಳೂರಿನಲ್ಲಿ ಕೇವಲ
ರೂ. 2,404 ಆಗಿದೆ.
ಮಂಗಳವಾರ 10ಗ್ರಾಂಗೆ ರೂ. 26,354ರಂತೆ ಮಾರಾಟವಾಗಿದ್ದ ಸ್ಟ್ಯಾಂಡರ್ಡ್ ಚಿನ್ನ (ಶೇ 99.5 ಪರಿಶುದ್ಧ) ಬುಧವಾರ ರೂ. 25,848ಕ್ಕೆ ಇಳಿಯಿತು. ಆಭರಣ ಚಿನ್ನವೂ ಒಂದು ಗ್ರಾಂಗೆ ರೂ. 2,451ರಿಂದ ರೂ. 2,404ಕ್ಕೆ ತಗ್ಗಿತು. ಮುಂಬೈನಲ್ಲಿ ಬುಧವಾರ 10 ಗ್ರಾಂ ಅಪರಂಜಿ ಚಿನ್ನ ರೂ. 25,600, ಸ್ಟಾಂಡರ್ಡ್ ಚಿನ್ನ ರೂ. 25,455 ರಂತೆ ಮಾರಾಟವಾಯಿತು.
ಚೆನ್ನೈನಲ್ಲಿ 10 ಗ್ರಾಂ ಸ್ಟಾಂಡರ್ಡ್ ಚಿನ್ನ ರೂ. 25,900, ಆಭರಣ ಚಿನ್ನ (22 ಕ್ಯಾರಟ್) ಒಂದು ಗ್ರಾಂಗೆ ರೂ. 2,422ರಂತೆ ಮಾರಾಟವಾಯಿತು.
ಬೆಳ್ಳಿ ರೂ. 1400 ಇಳಿಕೆ: ಬೆಂಗಳೂರಿನಲ್ಲಿ ಬೆಳ್ಳಿ ಧಾರಣೆ ಕೆ.ಜಿಗೆ ರೂ. 35,100ಕ್ಕೆ ತಗ್ಗಿದೆ. ಮಂಗಳವಾರ ರೂ. 36,500ರಂತೆ ಮಾರಾಟವಾಗಿದ್ದ ಬೆಳ್ಳಿ ಒಂದೇ ದಿನಕ್ಕೆ ರೂ. 1,400ರಷ್ಟು ಅಗ್ಗವಾಯಿತು. ದೆಹಲಿಯಲ್ಲಿ ಬೆಳ್ಳಿ ರೂ. 900ರಷ್ಟು ಕುಸಿದು, ಕೆ.ಜಿಗೆ ರೂ. 35,050ರಂತೆ ಮಾರಾಟವಾಯಿತು. ಮುಂಬೈನಲ್ಲಿ ರೂ. 35,360ಕ್ಕೆ, ಚೆನ್ನೈನಲ್ಲಿ ಬೆಳ್ಳಿ (ಗಟ್ಟಿ) ಕೆ.ಜಿ.ಗೆ ರೂ. 34,360ಕ್ಕೆ ಇಳಿದಿದೆ.
ಸಿಂಗಪುರದಲ್ಲಿ ಬುಧವಾರ ಚಿನ್ನದ ಬೆಲೆ ಶೇ 1.90ರಷ್ಟು ತಗ್ಗಿದ್ದು, ಔನ್ಸ್‌ಗೆ 1,146.34 ಡಾಲರ್‌ಗಳಂತೆ ಮಾರಾಟವಾಗಿದೆ. ಆ ಮೂಲಕ 2010ರ ಏಪ್ರಿಲ್ ನಂತರದ ಕನಿಷ್ಠ ಮಟ್ಟಕ್ಕೆ ಬಂದಿದೆ.
ಇಳಿಕೆಗೆ ಕಾರಣ: ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ ಆಗಲಿದೆ ಎಂಬ ನಿರೀಕ್ಷೆಯಲ್ಲಿರುವ ಚಿನ್ನ ಸಂಗ್ರಹಕಾರರು ಈಗ ದೊಡ್ಡ ಪ್ರಮಾಣದ ಖರೀದಿಗೆ ಮನಸ್ಸು ಮಾಡುತ್ತಿಲ್ಲ.
ಇನ್ನೊಂದೆಡೆ, ಅಂತರರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಹೆಚ್ಚುತ್ತಿದ್ದು, ಅಮೆರಿಕದ ಕರೆನ್ಸಿ ದಿನದಿಂದ ದಿನಕ್ಕೆ ಸದೃಢವಾಗುತ್ತಲೇ ಇದೆ. ಇದರಿಂದ ಹೂಡಿಕೆದಾರರ ಆಕರ್ಷಣೆ ಚಿನ್ನದಿಂದ ಡಾಲರ್‌ನತ್ತ ತಿರುಗಿದೆ.
ಈ ಸಂಗತಿಗಳು ದೇಶ ವಿದೇಶದ ಚಿನಿವಾರ ಪೇಟೆಯಲ್ಲಿ ಬಂಗಾರದ ಬೇಡಿಕೆ ತಗ್ಗುವಂತೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.