ಜಮ್ಮು: ಕೈಯಲ್ಲಿ ಅರೆ ಬೆಂದ ಪರೋಟಾ ಮತ್ತು ಚಹಾದ ಲೋಟ ತೋರಿಸಿ, ನೋಡಿ ಇದೇ ನಮ್ಮ ಬ್ರೇಕ್‍ಫಾಸ್ಟ್ ಎಂದು ಯೋಧರಿಗೆ ನೀಡುವ ಆಹಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಾಕಷ್ಟು ಚರ್ಚೆಗೀಡಾಗಿದೆ.
ಸರಿಯಾದ ಊಟ ತಿಂಡಿ ಇಲ್ಲ. ನೀರಿನಂತಿರುವ ದಾಲ್‍ನಲ್ಲಿ ಬರೀ ಉಪ್ಪು, ಅರಶಿನ ಬಿಟ್ಟರೆ ಬೇರೇನೂ ಇಲ್ಲ, ಪರೋಟಾ ಜತೆ ಉಪ್ಪಿನಕಾಯಿಯಾಗಲೀ, ಜಾಮ್ ಆಗಲಿ ಇಲ್ಲ. ಇದನ್ನು ತಿಂದು ನಾವು 11 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು. ಗಡಿ ಕಾಯುವ ಯೋಧರಿಗೆ ಕೊಡುವ ಆಹಾರ ಇದು ಎಂದು ಹೇಳಿ ಜಮ್ಮು ಕಾಶ್ಮೀರದಲ್ಲಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‍ನ ಯೋಧ ತೇಜ್ ಬಹದ್ದೂರ್ ಯಾದವ್ ತಮ್ಮ ಫೇಸ್‍ಬುಕ್‍ನಲ್ಲಿ ನಾಲ್ಕು ವಿಡಿಯೊಗಳನ್ನು ಅಪ್‍ಲೋಡ್ ಮಾಡಿದ್ದರು.
ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸರ್ಕಾರ ಮತ್ತು ಸೇನಾಪಡೆಯ ಹಿರಿಯ ಅಧಿಕಾರಿಗಳ ವಿರುದ್ಧ ಟೀಕೆಗಳೂ ಕೇಳಿ ಬಂದಿವೆ.
ಯೋಧನ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಗಡಿ ರಕ್ಷಣಾ ಪಡೆ, ಸೇನಾಪಡೆಯ ಹಿತಕ್ಕಾಗಿ ಬಿಎಸ್‍ಎಫ್ ಹೆಚ್ಚಿನ ಒತ್ತು ನೀಡುತ್ತದೆ ಎಂದು ಹೇಳಿಕೆ ನೀಡಿದೆ. ಆದಾಗ್ಯೂ, ಯೋಧರಿಗೆ ಏನಾದರೂ ಸಮಸ್ಯೆಗಳಿದ್ದರೆ ಆ ಬಗ್ಗೆ ತನಿಖೆ ನಡೆಸಲಾಗುವುದು. ಈಗಾಗಲೇ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳು ತೇಜ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶಕ್ಕೆ ದೌಡಾಯಿಸಿದ್ದಾರೆ ಎಂದಿದೆ.
[related]
ಅದೇ ವೇಳೆ ಈ ವಿಡಿಯೊ ಬಗ್ಗೆ ಹೆಚ್ಚಿನ ವರದಿ ಕೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಯೋಧರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.