ADVERTISEMENT

ಬಿಜೆಪಿಗೆ ಈಶಾನ್ಯದ ಹೆಬ್ಬಾಗಿಲು ತೆರೆಯಿತೇ?

ಉಮಾಪತಿ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಬಿಜೆಪಿ ಕಾರ್ಯಕರ್ತರ ಸಂಭ್ರಮ –ಚಿತ್ರ: ಪಿಟಿಐ
ಬಿಜೆಪಿ ಕಾರ್ಯಕರ್ತರ ಸಂಭ್ರಮ –ಚಿತ್ರ: ಪಿಟಿಐ   

ನವದೆಹಲಿ: ಈಶಾನ್ಯದಲ್ಲಿ ಮಿಜೋರಾಂ ಮತ್ತು ಕೆಲಮಟ್ಟಿಗೆ ಸಿಕ್ಕಿಂ ವಿನಾ ಉಳಿದೆಲ್ಲ ರಾಜ್ಯಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ನಿಚ್ಚಳವಾಗಿ ಮೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯದ ವಿಧಾನಸಭಾ ಚುನಾವಣಾ ಫಲಿತಾಂಶಗಳು ಈ ಮಾತನ್ನು ರುಜುವಾತುಪಡಿಸಿವೆ. ಮೇಘಾಲಯದ ಮೇಲಿನ ಹಿಡಿತ ಉಳಿಸಿಕೊಳ್ಳಲು ಹೆಣಗುತ್ತಿರುವ ಕಾಂಗ್ರೆಸ್ ಉಳಿದೆರಡು ರಾಜ್ಯಗಳಲ್ಲಿ ಸದ್ಯಕ್ಕಂತೂ ಅಳಿದು ಹೋಗಿದೆ.

ಮಿಜೋರಾಂ ಕಾಂಗ್ರೆಸ್ ಸರ್ಕಾರದ ಅಳಿವು ಉಳಿವನ್ನು ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿರ್ಧರಿಸಲಿದೆ. ಕಾಂಗ್ರೆಸ್ ಮುಕ್ತ ಭಾರತವನ್ನು ಕಟ್ಟಲು ಹೊರಟಿರುವ ಬಿಜೆಪಿ, ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ ಸೃಷ್ಟಿಯತ್ತ ದಾಪುಗಾಲಿರಿಸಿದೆ.

ADVERTISEMENT

ಈ ಅಸಾಧಾರಣ ವಿದ್ಯಮಾನ 2019ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಗಣನೀಯವಾಗಿ ನೆರವಾಗಲಿದೆ. ಈಶಾನ್ಯ ಭಾರತದ ಲೋಕಸಭಾ ಸ್ಥಾನಗಳ ಸಂಖ್ಯೆ 25. ಸದ್ಯಕ್ಕೆ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಹದಿನೇಳಕ್ಕೆ ದಾರಿ ತೆರೆದಂತಾಗಿದೆ.

ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಉಪಚುನಾವಣೆಗಳಲ್ಲಿ ಎದುರಿಸಿದ ಭಾರೀ ಮುಖಭಂಗವನ್ನು ಈಶಾನ್ಯ ರಾಜ್ಯಗಳ ಚುನಾವಣಾ ಗೆಲುವು ಸದ್ಯಕ್ಕಾದರೂ ಅಳಿಸಿ ಹಾಕಿದೆ. ಕರ್ನಾಟಕದಂತಹ ದೊಡ್ಡ ರಾಜ್ಯವೊಂದರ ವಿಧಾನಸಭಾ ಚುನಾವಣೆಗಳ ಹೊಸ್ತಿಲಲ್ಲಿ ಇಂತಹ ಆತ್ಮವಿಶ್ವಾಸ ಬಿಜೆಪಿಗೆ ಅತ್ಯಗತ್ಯ. ಆದರೆ ಈಶಾನ್ಯದಲ್ಲಿ ಮೋದಿ- ಅಮಿತ್ ಶಾ ಜೋಡಿಯ ಈ ಯಶಸ್ಸು, ನಿಗೂಢ 'ನಾಗಾ ಒಪ್ಪಂದ'ದ ಅಗ್ನಿಪರೀಕ್ಷೆಯನ್ನು ಹಾಯಬೇಕಿದೆ ಎಂಬುದನ್ನು ನೆನಪಿಡಬೇಕು.

ಸ್ಥಳೀಯ ರಾಜಕಾರಣದ ಏಳುಬೀಳುಗಳನ್ನು ಒಳಗೊಂಡ ಈ ಮೂರೂ ರಾಜ್ಯಗಳ ಚುನಾವಣಾ ಫಲಿತಾಂಶಗಳು ರಾಷ್ಟ್ರೀಯ ಕಥನವೊಂದನ್ನೂ ಬಿಚ್ಚಿರಿಸಿವೆ. ತ್ರಿಪುರಾದ ಗೆಲುವನ್ನು ಎಡಪಂಥೀಯರ ಪ್ರಬಲ ಅಸ್ತಿತ್ವ ಕಂಡಿರುವ ಬಂಗಾಳ ಮತ್ತು ಕೇರಳದಲ್ಲಿ ಬಿಂಬಿಸಲು ಹೊರಟಿದೆ ಬಿಜೆಪಿ.

ಎರಡೂ ರಾಜ್ಯಗಳ ರಾಜಕಾರಣದ ಅಂಚಿನಲ್ಲಿರುವ ಬಿಜೆಪಿಯ ಸದ್ಯದ ಗುರಿ ಕನಿಷ್ಠ ಪಕ್ಷ ಅಧಿಕೃತ ಪ್ರತಿಪಕ್ಷ ಆಗುವುದು. ಐದು ವರ್ಷಗಳ ಹಿಂದಿನ ಪಾತಾಳದಿಂದ ಇಂದಿನ ಆಗಸಕ್ಕೆ ಜಿಗಿದ ಅಸಾಧಾರಣ ಸಾಧನೆ ಕಣ್ಣ ಮುಂದಿದೆ. ಹೀಗಾಗಿ ಕೇಸರಿ ಪಕ್ಷದ ಆತ್ಮವಿಶ್ವಾಸವೂ ಆಕಾಶಕ್ಕೆ ನೆಗೆದಿದೆ. ಜೊತೆ ಜೊತೆಗೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಕ್ಷ ಹತ್ತಿರ ಬರುವ ಸೂಚನೆಗಳನ್ನೂ ಈ ಫಲಿತಾಂಶಗಳು ಮೂಡಿಸಿವೆ. 

ಈ ಸಂಬಂಧ ಸಿಪಿಐ(ಎಂ) ನಲ್ಲಿ ಪ್ರಕಾಶ್ ಕಾರಟ್ ಮತ್ತು ಸೀತಾರಾಂ ಯೆಚೂರಿ ಆಲೋಚನೆಗಳು ಇತ್ತೀಚೆಗೆ ಪರಸ್ಪರ ತಾಕಲಾಡಿ ಸುದ್ದಿ ಮಾಡಿದ್ದವು. ತ್ರಿಪುರಾದ ಹಾಲಿ ಚುನಾವಣೆಯಲ್ಲಿ ಮೂರನೆಯ ರಾಜಕೀಯ ಶಕ್ತಿ ಇರಲಿಲ್ಲ ಎಂಬ ಅಂಶ ಬಿಜೆಪಿಯ ಗೆಲುವನ್ನು ಐತಿಹಾಸಿಕ ಆಗಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ.

ಹಾಗೆ ಮೂರನೆಯ ಶಕ್ತಿಯಾಗಿ ಇರಬೇಕಿದ್ದ ಕಾಂಗ್ರೆಸ್ ಪಕ್ಷವನ್ನು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಇಡಿಯಾಗಿ ನುಂಗಿತ್ತು. ಹಾಗೆ ಕಾಂಗ್ರೆಸ್‌ ಅನ್ನು ನುಂಗಿ ಮೈತಳೆದಿದ್ದ ತೃಣಮೂಲವನ್ನು ಬಿಜೆಪಿ ನುಂಗಿತ್ತು. ಒಂದು ಕಾಲಕ್ಕೆ ತ್ರಿಪುರಾವನ್ನು ಆಳಿದ್ದ ಕಾಂಗ್ರೆಸ್ ಪಕ್ಷದ ಈ ಮಹಾಕುಸಿತ ತ್ರಿಪುರಾ ರಾಜಕಾರಣದ ರೂಪುರೇಷೆಗಳನ್ನೇ ಬದಲಿಸಿತು.

2013ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 36.54. ಹಾಲಿ ಚುನಾವಣೆಗಳಲ್ಲಿ ಈ ಪ್ರಮಾಣ ಶೇ.1.8ಕ್ಕೆ ಕುಸಿದಿದೆ. ಬಿಜೆಪಿಯ ಗೆಲುವಿನ ಗುಟ್ಟಿನ ದೊಡ್ಡ ಅಂಶವೊಂದು ಕಾಂಗ್ರೆಸ್ ಕುಸಿತದಲ್ಲಿ ಅಡಗಿದೆ. ಪರಿಣಾಮವಾಗಿ ಸ್ವತಂತ್ರ ಭಾರತದ ಇತಿಹಾಸದ ಎಡ ಮತ್ತು ಬಲದ ನಡುವೆ ನಡೆದ ಮೊಟ್ಟಮೊದಲ ನೇರ ಮುಖಾಮುಖಿಗೆ ದೇಶ ಸಾಕ್ಷಿಯಾಯಿತು.

ಪಶ್ಚಿಮ ಬಂಗಾಳದ 2011ರ 'ಪೊರಿಬೊರ್ತನ್' (ಪರಿವರ್ತನೆ) ಮತ್ತು ತ್ರಿಪುರಾದ ಹಾಲಿ ‘ನಡೀರಿ ಪಲ್ಟಿ ಹೊಡೆಸೋಣ'' (ಚಲೋ ಪಲ್ಟಾಯಿ) ನಡುವೆ ಬಹಳಷ್ಟು ಸಾಮ್ಯಗಳಿವೆ. ಅಂದು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ಎಡರಂಗದ ಸತತ 34 ವರ್ಷಗಳ ಸರ್ಕಾರವನ್ನು ಉರುಳಿಸಿತ್ತು. ಇಂದು ತ್ರಿಪುರಾದಲ್ಲಿ ನರೇಂದ್ರ ಮೋದಿ -ಅಮಿತ್ ಶಾ ಜೋಡಿಯ ಬಿಜೆಪಿ, ಅದೇ ಎಡರಂಗದ ಸತತ 25 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ.

ಎರಡೂ ಐತಿಹಾಸಿಕ ಗೆಲುವುಗಳು. ಬಂಗಾಳದಲ್ಲಿ ಮಮತಾ ಅವರು ಕಾಂಗ್ರೆಸ್ ಪಕ್ಷದೊಡನೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರು. ತ್ರಿಪುರಾದಲ್ಲಿ ಬಿಜೆಪಿ ತ್ರಿಪುರ ಮೂಲನಿವಾಸಿ ಜನಜಾತಿಗಳ ರಂಗದೊಂದಿಗೆ (ಇಂಡೈಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ- ಐ.ಪಿ.ಎಫ್.ಟಿ) ಚುನಾವಣೆ ಮೈತ್ರಿ ಮಾಡಿಕೊಂಡು ಮಾಣಿಕ್ ಸರ್ಕಾರವನ್ನು ಉರುಳಿಸಿತು.

1978ರಲ್ಲೇ ಬುಡಕಟ್ಟು ಜನರನ್ನು ದೂರ ಮಾಡಿಕೊಂಡಿತ್ತು ಎಡರಂಗ. ತ್ರಿಪುರಾದ ಬುಡಕಟ್ಟು ಜನ ಬಂಗಾಳದ 1947ರ ವಿಭಜನೆ ಹುಟ್ಟಿ ಹಾಕಿದ ಭಾರೀ ವಲಸೆಯ ಕಾರಣ ತಮ್ಮ ನಾಡಿನಲ್ಲೇ ಅಲ್ಪಸಂಖ್ಯಾತರಾದರು. ತಮ್ಮನ್ನು ಮೂಲೆಗೆ ಸರಿಸಲಾಗಿದೆ ಎಂಬ ಅವರ ಗಾಯಗೊಂಡ ಭಾವನೆಗಳಿಗೆ ಮುಲಾಮು ಹಚ್ಚುವ ಕೆಲಸವನ್ನು ಕಾಂಗ್ರೆಸ್ ಪಕ್ಷವಾಗಲೀ, ಎಡರಂಗವೇ ಆಗಲಿ ಸಕಾಲದಲ್ಲಿ ಸಕ್ರಿಯವಾಗಿ ಮಾಡಲಿಲ್ಲ. ಕಾಂಗ್ರೆಸ್ ಅವರನ್ನು ಬಳಸಿ ಬಿಸಾಡಿತ್ತು.

ಬುಡಕಟ್ಟು ಜನರ ಈ ಎಡರಂಗ ವಿರೋಧಿ ಭಾವನೆಯನ್ನು ಬಿಜೆಪಿ ಯಶಸ್ವಿಯಾಗಿ ಬಳಸಿಕೊಂಡಿತು. ಬದುಕಿನ ಮೂಲಭೂತ ಅಗತ್ಯಗಳನ್ನು ಕಟ್ಟಿ ಕೊಡುವ ಬೇರುಮಟ್ಟದಿಂದ ಕೆಲಸ ಆರಂಭಿಸಿದ ಎಡರಂಗ ಸರ್ಕಾರ ಭಾರೀ ಪ್ರಮಾಣದ ನಿರುದ್ಯೋಗಿ ಯುವಜನರ ಕೈಗಳಿಗೆ ಉದ್ಯೋಗ ಒದಗಿಸಲು ಹಲವು ಕಾರಣಗಳಿಂದಾಗಿ ವಿಫಲವಾಯಿತು. ಈ ಬಹುತೇಕ ಯುವಜನರು ಕೂಸುಗಳಾಗಿ ಕಣ್ಣುಬಿಟ್ಟ ದಿನದಿಂದ ಎಡರಂಗ ಸರ್ಕಾರ ಬಿಟ್ಟರೆ ಬೇರೆ ಸರ್ಕಾರವನ್ನೇ ಕಂಡವರಲ್ಲ.

ನಿರುದ್ಯೋಗದ ಹುಟ್ಟಿಸಿದ ಹತಾಶೆ ಮತ್ತು ಬದಲಾವಣೆಯ ಬಯಕೆ ಅವರಲ್ಲಿ ಮನೆ ಮಾಡಿದ್ದು ಸ್ವಾಭಾವಿಕ. ಇಂತಹುದೊಂದು ಅತೃಪ್ತ ಮತ್ತು 'ಶೂನ್ಯ' ವಾತಾವರಣದಲ್ಲಿ ನರೇಂದ್ರ ಮೋದಿ ಅವರಂತಹ ವರ್ಚಸ್ವೀ ನಾಯಕ ಉದ್ಯೋಗಾವಕಾಶಗಳು ಮತ್ತು ಸ್ಮಾರ್ಟ್ ಫೋನುಗಳಂತಹ ಬಣ್ಣ ಬಣ್ಣದ ಕನಸುಗಳನ್ನು ಹರವಿ ಸೆಳೆದರೆ ಆಶೋತ್ತರಗಳ ಯುವಜನರು ಒಲ್ಲೆವೆಂದು ದೂರ ನಿಲ್ಲುವುದಾದರೂ ಎಂತು?

2013ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ 50 ಅಭ್ಯರ್ಥಿಗಳ ಪೈಕಿ 49 ಮಂದಿ ಠೇವಣಿ ಕಳೆದುಕೊಂಡಿದ್ದರು. ಗಳಿಸಿದ್ದ ಮತಗಳ ಪ್ರಮಾಣ ಶೇ.1.5 ಮಾತ್ರ. ಅಂತಹ ಪಾತಾಳದಿಂದ ಇಂದಿನ ಆಕಾಶಕ್ಕೆ ನೆಗೆದಿರುವ ಬಿಜೆಪಿಯ ಸಾಧನೆ ಅಸಾಧಾರಣವೇ ಹೌದು. ಒಂದು ಕಾಲಕ್ಕೆ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷ ಈಗ ನೆಲಕಚ್ಚಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಾಯಕರು-ಶಾಸಕರನ್ನು ಅನಾಮತ್ತು ತನ್ನ ಪಾಳೆಯಕ್ಕೆ ಎತ್ತಿ ಹಾಕಿಕೊಂಡಿರುವ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ತಲೆಯೆತ್ತಿದೆ.

ಎಡರಂಗದ ಶಾಂತಿ- ಸಹಬಾಳ್ವೆಯ ಮಂತ್ರವನ್ನು ಅಭಿವೃದ್ಧಿಯ ಪ್ರತಿಮಂತ್ರದಿಂದ ಕಟ್ಟಿ ಹಾಕಲು ತನ್ನ ಎಲ್ಲ ಶಕ್ತಿ-ಸಾಧನಗಳನ್ನೂ ಪಣಕ್ಕೆ ಇರಿಸಿದೆ. ಗ್ರಾಮಾಂತರ ತ್ರಿಪುರಾದಲ್ಲಿ ಸಿಪಿಐ (ಎಂ) ದಶಕಗಳಿಂದ ಕಟ್ಟಿರುವ ಸಮರ್ಪಿತ ಕಾರ್ಯಕರ್ತರ ಪಡೆಗೆ ಪ್ರತಿಯಾಗಿ ತಾನು ಶೇ.30ರಷ್ಟಿರುವ ಬುಡಕಟ್ಟು ಜನರ ಮತಗಳನ್ನು ಒಟ್ಟು ಹಾಕಿ ತನ್ನತ್ತ ಸೆಳೆಯತೊಡಗಿದೆ. ಬಹುಸಂಖ್ಯಾತರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಕೇಸರಿ ಪಕ್ಷ ತ್ರಿಪುರಾದಲ್ಲಿ ತಂತ್ರ ಬದಲಿಸಿದೆ.

ಹಾಲಿ ಚುನಾವಣೆಯಲ್ಲಿ ಎಡರಂಗದ ಮತಗಳು ಭಾರೀ ಪ್ರಮಾಣದಲ್ಲೇನೂ ಕುಸಿದಿಲ್ಲ ಎಂಬುದು ಗಮನಾರ್ಹ. ಕಮ್ಮೂನಿಸ್ಟ್ ನಾಯಕರ ಪ್ರಕಾರ ಈ ಬಾರಿ ಎಡರಂಗಕ್ಕೆ ದೊರೆತಿರುವ ಮತಗಳ ಪ್ರಮಾಣ ಶೇ.45. 2013ರಲ್ಲಿ 49 ಸ್ಥಾನಗಳನ್ನು ಗೆದ್ದಿದ್ದ ಸಿಪಿಐ(ಎಂ) ಶೇ.48.11ರಷ್ಟು ಮತಗಳನ್ನು ಮತ್ತು ಒಂದು ಸ್ಥಾನವನ್ನು ಗೆದ್ದಿದ್ದ ಸಿಪಿಐ ಶೇ. 1.57 ರಷ್ಟು ಮತಗಳನ್ನು ಗಳಿಸಿದ್ದವು. ಹೀಗಾಗಿ 25 ವರ್ಷಗಳ ಸತತ ಆಡಳಿತದ ನಂತರ ಹುಟ್ಟಿದ ಆಡಳಿತ ವಿರೋಧಿ ಮನೋಭಾವನೆ ಅವರನ್ನು ಸೋಲಿಸಿರುವುದು ಸ್ವಾಭಾವಿಕ. ಬಿಜೆಪಿ ಮತ್ತು ಐಪಿಎಫ್ಟಿ ಮೈತ್ರಿಕೂಟ ಶೇ.50ರಷ್ಟು ಮತಗಳನ್ನು ಗಳಿಸಿ ಭಾರೀ ಗೆಲುವನ್ನು ಬುಟ್ಟಿಗೆ ಹಾಕಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.