ಪಟ್ನಾ (ಪಿಟಿಐ/ಐಎಎನ್‌ಎಸ್): ಎಲ್ಲರಿಗೂ ವ್ಯಂಗ್ಯ ಟೀಕೆಗಳಿಗೆ ಸಾಕಷ್ಟು ಗ್ರಾಸ ಒದಗಿಸಿದ್ದ ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಪಕ್ಷಗಳ ‘ಮಹಾಮೈತ್ರಿ’ ಕೊನೆಗೂ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ಮೂರ್ತ ಸ್ವರೂಪ ಪಡೆದಿದೆ. ಈ ಸಂಬಂಧ ಬುಧವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಟ್ನಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಹಾಗೂ ಬಿಹಾರ್ ಪ್ರದೇಶ ಕಾಂಗ್ರೆಸ್ ವರಿಷ್ಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಆಗಸ್ಟ್ 30ರಂದು ಗಾಂಧಿ ಮೈದಾನದಲ್ಲಿ ಬಿಹಾರ್ ಸ್ವಾಭಿಮಾನ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಗೆಹರಿದ ಸೀಟು ಹಂಚಿಕೆ ಕಗ್ಗಂಟು: ಅಲ್ಲದೇ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 100, ಸಂಯುಕ್ತ ಜನತಾ ದಳ (ಜೆಡಿಯು) 100 ಹಾಗೂ ಕಾಂಗ್ರೆಸ್ ಪಕ್ಷಕ್ಕೆ 40 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದೂ ಅವರು ಪ್ರಕಟಿಸಿದರು.
ಬಳಿಕ ಮಾತನಾಡಿದ, ಲಾಲೂ ಪ್ರಸಾದ್, ಪ್ರಧಾನಿಯಾಗಿ ಮೋದಿ ಅವರು ಬಿಹಾರ್‌ವನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಅವರ ವಂಶವಾಹಿನಿ ಬಗ್ಗೆ ಪ್ರಶ್ನಿಸಿದ್ದಾರೆ. ಅದೆಲ್ಲಕ್ಕೂ ಆಗಸ್ಟ್ 30ರಂದು ಗಾಂಧಿ ಮೈದಾನದಲ್ಲಿ ನಡೆಯಲಿರುವ ರ‍್ಯಾಲಿಯಲ್ಲಿ ಉತ್ತರ ನೀಡಲಾಗುವುದು ಎಂದರು.
ಅಲ್ಲದೇ, ದೇಶದ ಪ್ರಧಾನಿ ಅವರು ಬಿಹಾರವನ್ನು ಅವಮಾನಿಸಿದ ರೀತಿ, ಬಿಜೆಪಿಗೆ ಚುನಾವಣೆಯಲ್ಲಿ ಅಂಥದ್ಧೇ ಉತ್ತರವನ್ನು ಜನತೆ ನೀಡಲಿದ್ದಾರೆ.ಇನ್ನು, ನಾವೆಲ್ಲರೂ ಒಂದ್ದಾಗಿದ್ದೇವು. ಒಂದಾಗಿದ್ದೇವೆ. ಕೇಸರಿ ಪಕ್ಷದವರನ್ನು ಬರಿಗಾಲಿನಿಂದ ನಾಗಪುರ ತಲುಪಿಸಲಾಗುವುದು ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.