ನವದೆಹಲಿ (ಐಎಎನ್‌ಎಸ್): ಭಗವದ್ಗೀತೆಗೆ ಪವಿತ್ರ ರಾಷ್ಟ್ರೀಯ ಗ್ರಂಥದ ಸ್ಥಾನಮಾನ ನೀಡಬೇಕು ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಈ ಮೂಲಕ ಭಗವದ್ಗೀತೆಯನ್ನು ಜಗತ್ತಿನ ನಾಯಕರಿಗೆ ಪರಿಚಯಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಒಲವನ್ನು ಪ್ರಶಂಸಿಸಿದ್ದಾರೆ.
ಭಗವದ್ಗೀತೆಗೆ ರಾಷ್ಟ್ರೀಯ ಧರ್ಮಗ್ರಂಥ ಸ್ಥಾನಮಾನವನ್ನು ಅಧಿಕೃತವಾಗಿ ಘೋಷಿಸಬೇಕು ಎಂಬ ಪ್ರಸ್ತಾವವನ್ನು ಸುಷ್ಮಾ ಮುಂದಿಟ್ಟಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯ ಪ್ರತಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ನೀಡಿದ್ದಾರೆ. ಇದರರ್ಥ ಈ ಕೃತಿಗೆ ರಾಷ್ಟ್ರೀಯ ಗೌರವ ಇದೆ ಎಂಬುದೇ ಆಗಿದೆ. ಆದ್ದರಿಂದ ಇದನ್ನು ರಾಷ್ಟ್ರೀಯ ಪವಿತ್ರಗ್ರಂಥ ಎಂದು ಅಧಿಕೃತವಾಗಿ ಘೋಷಿಸಬೇಕಿದೆ’ ಎಂದು ನವದೆಹಲಿಯ ಕೆಂಪುಕೋಟೆಯಲ್ಲಿ ಭಾನುವಾರ ನಡೆದ ಭಗವದ್ಗೀತೆಯ 5,151ನೇ ಸ್ಮರಣೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಿಳಿಸಿದರು.
‘ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ವಿಶ್ವದ ಹಲವಾರು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುತ್ತೇನೆ. ಇವುಗಳಿಗೆಲ್ಲ ಪರಿಹಾರ ನೀಡಲು ಗೀತೆಯ ತತ್ವಗಳು ಪ್ರೇರಣೆಯಾಗಿವೆ. ಗೀತೆಯನ್ನು ಬೋಧಿಸಿದ ಕೃಷ್ಣನಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು.
ನಮ್ಮದು ಜಾತ್ಯತೀತ ರಾಷ್ಟ್ರ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಿರುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಪವಿತ್ರ ಗ್ರಂಥ
-ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.