ನವದೆಹಲಿ (ಪಿಟಿಐ): ವಿವಾದಾತ್ಮಕ ಭೂಸ್ವಾಧೀನ ಮಸೂದೆ ಜಾರಿಗೆ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡದ ಕಾರಣ ಕೇಂದ್ರ ಸರ್ಕಾರವು ನಾಲ್ಕನೇ ಬಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.
ಮಂಗಳವಾರ ಆರಂಭವಾಗಲಿರುವ ಮಳೆಗಾಲ ಅಧಿವೇಶನದಲ್ಲಿ ಸರ್ಕಾರ ಭೂಸ್ವಾಧೀನ ಮಸೂದೆ ಮಂಡಿಸುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗಿದೆ. ಈಗಾಗಲೇ ಮೂರು ಬಾರಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದರೂ, ಅವುಗಳನ್ನು ಕಾಯ್ದೆಯಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಈ ಬಾರಿಯೂ ಮಸೂದೆಯು ಪ್ರತಿಪಕ್ಷಗಳ ಅಸಹಕಾರದಿಂದ ಅಂಗೀಕಾರವಾಗುವ ಸಾಧ್ಯತೆಯು ಕ್ಷೀಣಿಸಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ನಾಲ್ಕನೇ ಯತ್ನಕ್ಕೆ ಮುಂದಾಗುವುದರೊಂದಿಗೆ ಹೊಸ ದಾಖಲೆ ಬರೆಯಲು ಹೊರಟಿದೆ.
‘ಮಸೂದೆಗೆ ಸಂಬಂಧಿಸಿದಂತೆ ಇದುವರೆಗೂ ಒಮ್ಮತ ಮೂಡದ ಕಾರಣ ಮಳೆಗಾಲ ಅಧಿವೇಶನದ ನಂತರ ಮತ್ತೊಮ್ಮೆ ಸುಗ್ರೀವಾಜ್ಞೆ ಮೊರೆ ಹೋಗದೆ ಸರ್ಕಾರದ ಮುಂದೆ ಬೇರೆ ದಾರಿ ಉಳಿದಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಭೂಸ್ವಾಧೀನ ಮಸೂದೆ ಅನುಷ್ಠಾನ ಸರ್ಕಾರದ ಪ್ರತಿಷ್ಠೆಯ ಪ್ರಶ್ನೆಯಾಗಲಿ ಇಲ್ಲವೇ ನನ್ನ ಜೀವನ್ಮರಣ ವಿಷಯವಾಗಲಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದಾರೆ. ಆದರೆ, ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಜಾರಿಗೆ ಈ ಮಸೂದೆ ಅಂಗೀಕಾರ ಅನಿವಾರ್ಯವಾಗಿದೆ.
ಸಡಿಲಾಗದ ಪ್ರತಿಪಕ್ಷ ಪಟ್ಟು: ಈ ಮಸೂದೆಗೆ ಭಾರಿ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಇನ್ನಿತರ ಪ್ರಮುಖ ವಿರೋಧ ಪಕ್ಷಗಳು ತಮ್ಮ ಪಟ್ಟನ್ನು ಸಡಿಲಿಸದೇ ಇರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಹಾಗಾದರೆ ಸರ್ಕಾರದ ಮುಂದೆ ಸುಗ್ರೀವಾಜ್ಞೆ ಹೊರತುಪಡಿಸಿ ಬೇರೆ ಮಾರ್ಗ ಉಳಿದಿಲ್ಲವೇ ಎನ್ನುವ ಪ್ರಶ್ನೆಗೆ, ‘ವಿರೋಧ ಪಕ್ಷಗಳ ಟೀಕೆ–ಟಿಪ್ಪಣಿಗಳಿಗೆ ಕಿವಿಗೊಡದೆ ಜಂಟಿ ಅಧಿವೇಶನ ಕರೆದು ಅಂಗೀಕರಿಸುವುದೊಂದೇ ಉಳಿದ ಮಾರ್ಗ’ ಎಂದು ಮೂಲಗಳು ತಿಳಿಸಿವೆ.
ವರದಿ ಸಲ್ಲಿಕೆ ಅನುಮಾನ?: ಈ ನಡುವೆ ವಿವಾದಿತ ಮಸೂದೆಯ ಸಾಧಕ–ಬಾಧಕ ಕುರಿತು ವರದಿ ಸಲ್ಲಿಸಲು ಬಿಜೆಪಿ ಸಂಸದ ಎಸ್.ಎಸ್. ಅಹ್ಲುವಾಲಿಯಾ ನೇತೃತ್ವದ ಜಂಟಿ ಸದನ ಸಮಿತಿ ವರದಿ ಇನ್ನೂ ಅಂತಿಮಗೊಂಡಿಲ್ಲ.
ಪೂರ್ವ ನಿಗದಿಯಂತೆ ಮಳೆಗಾಲ ಅಧಿವೇಶನದ ಮೊದಲ ದಿನವೇ ಸಮಿತಿ ವರದಿ ಸಲ್ಲಿಸಬೇಕಿತ್ತು. ಆದರೆ, ಮಸೂದೆ ಕುರಿತು ಇದುವರೆಗೂ ದೃಢ ನಿರ್ಧಾರಕ್ಕೆ ಬರಲು ವಿಫಲವಾಗಿರುವ ಜಂಟಿ ಸದನ ಸಮಿತಿಯು ವರದಿ ಸಲ್ಲಿಸಲು ಆಗಸ್ಟ್ 3ರವರೆಗೆ ಕಾಲಾವಕಾಶ ಕೋರಿದೆ.
ಅಧಿವೇಶನ ಆಗಸ್ಟ್ 13ರಂದು ಕೊನೆಗೊಳ್ಳಲಿದ್ದು, ಜಂಟಿ ಸದನ ಸಮಿತಿ ಆಗಲೂ ವರದಿ ಸಲ್ಲಿಸುವುದು ಬಹುತೇಕ ಅನುಮಾನ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ –ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರ ಎನ್‌ಡಿಎ ಸರ್ಕಾರ ಮಸೂದೆ ಜಾರಿಗೆ ತರುವುದು ಅನುಮಾನ ಎನ್ನಲಾಗುತ್ತಿದೆ.
ಮೊದಲೇನಲ್ಲ: ಸರ್ಕಾರ ಸಮರ್ಥನೆ: ಭೂಸ್ವಾಧೀನ ಸುಗ್ರೀವಾಜ್ಞೆಗೆ ಮತ್ತೊಮ್ಮೆ ಯತ್ನಿಸುವುದರಲ್ಲಿ ತಪ್ಪೇನಿಲ್ಲ. ಹಾಗೂ ಇಂಥ ಯತ್ನ ಇದೇ ಮೊದಲೇನಲ್ಲ ಎನ್ನುವುದು ಸರ್ಕಾರದ ಸಮರ್ಥನೆ.
ಹಿಂದಿನ ವಿವಿಧ ಸರ್ಕಾರಗಳ ಆಡಳಿತ ಅವಧಿಯಲ್ಲಿ ಕನಿಷ್ಠ 15 ಸುಗ್ರೀವಾಜ್ಞೆಗಳನ್ನು ಎರಡು ಅಥವಾ ಮೂರು ಬಾರಿ ಹೊರಡಿಸಲಾಗಿದೆ.
ಯುಪಿಎ ಎರಡನೇ ಅವಧಿ ಸೇರಿದಂತೆ ವಿವಿಧ ಸರ್ಕಾರಗಳು ಆರು ಸುಗ್ರೀವಾಜ್ಞೆಗಳನ್ನು ಮೂರು ಬಾರಿ ಜಾರಿಗೊಳಿಸಲು ಯತ್ನಿಸಿದ ನಿದರ್ಶನಗಳಿವೆ ಎಂದು ಸರ್ಕಾರದ ಮೂಲಗಳು ಸಮರ್ಥಿಸಿಕೊಂಡಿವೆ.
ಆಕ್ಷೇಪಗಳ ಮಹಾಪೂರ: ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಬಿಜೆಪಿ ಸಂಸದ ಅಹ್ಲುವಾಲಿಯಾ ನೇತೃತ್ವದ ಜಂಟಿ ಸದನ ಸಮಿತಿ ಸ್ವೀಕರಿಸಿರುವ 672 ಅರ್ಜಿಗಳಲ್ಲಿ 670 ಅರ್ಜಿಗಳು ತಿದ್ದುಪಡಿ ಯನ್ನು ಬಲವಾಗಿ ವಿರೋಧಿಸಿವೆ. ಇಲ್ಲಿಯವರೆಗೆ 52 ಸಂಸದರು ಈ ಸಮಿತಿ ಎದುರು ಹಾಜರಾಗಿ ಹೇಳಿಕೆ ನೀಡಿದ್ದಾರೆ.
11 ಹೊಸ ಮಸೂದೆ: ಮಂಗಳವಾರದಿಂದ ಆರಂಭವಾಗಲಿರುವ ಸಂಸತ್ ಮಳೆಗಾಲ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಎಡಿಎ ಸರ್ಕಾರ 11 ಹೊಸ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ರಾಜ್ಯಸಭೆಯಲ್ಲಿ ಬಾಕಿ ಇರುವ 9 ಮಸೂದೆ ಹಾಗೂ ಲೋಕಸಭೆಯಲ್ಲಿ ಬಾಕಿ ಇರುವ ನಾಲ್ಕು ಮಸೂದೆ ಸೇರಿ 35 ಪ್ರಮುಖ ವಿಷಯಗಳ ಕಲಾಪ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ.
ಮೂರು ಬಾರಿ ಸುಗ್ರೀವಾಜ್ಞೆ
ಆಡಳಿತಾರೂಢ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿರುವುದೇ ಭೂಸ್ವಾಧೀನ ಮಸೂದೆ ಅಂಗೀಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
* ಡಿಸೆಂಬರ್: ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿ ಭೂಸ್ವಾಧೀನ ಸುಗ್ರೀವಾಜ್ಞೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಬಿದ್ದು ಹೋಗಿತ್ತು.
* ಮಾರ್ಚ್: ಇದೇ ಮಾರ್ಚ್‌ನಲ್ಲಿ ಎರಡನೇ ಬಾರಿ ಸುಗ್ರೀವಾಜ್ಞೆ ಮರು ಜಾರಿಗೆ ಯತ್ನ. ಮತ್ತೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ವಿಫಲ.
* ಮೇ: ಇದೇ ಮೇ 31ರಂದು ಮೂರನೇ ಬಾರಿ ಸುಗ್ರೀವಾಜ್ಞೆ ಜಾರಿಗೆ ಯತ್ನ. ಸರ್ಕಾರಕ್ಕೆ ಮತ್ತೆ ಮುಖಭಂಗ.
* ಜೂನ್: ಜೂನ್ 3ರಂದು ಸುಗ್ರೀವಾಜ್ಞೆ ಅವಧಿ ಮುಕ್ತಾಯ. ಸುಗ್ರೀವಾಜ್ಞೆ ಮರು ಜಾರಿಗೆ ರಾಷ್ಟ್ರಪತಿ ಅಂಕಿತಕ್ಕೆ ಶಿಫಾರಸು ಮಾಡಿದ ಕೇಂದ್ರ ಸಂಪುಟ.
* ಇತ್ತೀಚೆಗೆ ಮುಕ್ತಾಯವಾದ ಲೋಕಸಭೆಯ ಅಧಿವೇಶನದಲ್ಲಿ ರಾಜ್ಯಸಭೆ ಆಯ್ಕೆ ಸಮಿತಿಗೆ ಭೂ ಮಸೂದೆ.
* 6 ತಿಂಗಳು: ಒಂದು ಸುಗ್ರೀವಾಜ್ಞೆ ಯ ಕಾಲಾವಧಿ ಆರು ತಿಂಗಳು.
*ಮರು ಸುಗ್ರೀವಾಜ್ಞೆ : ಒಂದು ವೇಳೆ ಅಧಿವೇಶನ ಆರಂಭವಾದ ಆರು ವಾರಗಳ ಒಳಗಾಗಿ ಅಂಗೀಕಾರ ಪಡೆಯದಿದ್ದರೆ ಮರು ಸುಗ್ರೀವಾಜ್ಞೆಗೆ ಅವಕಾಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.