ಬೆಂಗಳೂರು: ಭೂಮಿಯಿಂದ 66.6 ಕೋಟಿ ಕಿ.ಮೀ. ದೂರದಲ್ಲಿರುವ ಮತ್ತು 300 ದಿನಗಳ ಕಾಲ ಸ್ತಬ್ಧ ಸ್ಥಿತಿಯಲ್ಲಿದ್ದ ಎಂಜಿನ್ ಒಂದಕ್ಕೆ ಮತ್ತೆ ಚಾಲನೆ ನೀಡುವುದು ವಿಜ್ಞಾನದ ಅದ್ಭುತವೇ ಸೈ. ‘ಮಂಗಳಯಾನ’ ಕಾರ್ಯಕ್ರಮದ ಅಂಗವಾಗಿ ಸೋಮವಾರ ‘ಮಾರ್ಸ್ ಆರ್ಬಿಟರ್’ ನೌಕೆಯ ಕೊನೆಯ ಪಥ ಸರಿಪಡಿಸುವಿಕೆ ಹಾಗೂ ಮುಖ್ಯ ದ್ರವ ಎಂಜಿನ್‌ನ ದಹನಶೀಲತೆಯ ಪರೀಕ್ಷೆ ಯಶಸ್ಸು ಕಂಡಿದ್ದು, ಇಸ್ರೊ ಈ ಹಿರಿಮೆಗೆ ಪಾತ್ರವಾಗಿದೆ.
ಮುನ್ನೂರು ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸಲಾಗಿದ್ದ 440 ನ್ಯೂಟನ್ ನೂಕುಬಲ ಸಾಮರ್ಥ್ಯದ ದ್ರವ ಎಂಜಿನನ್ನು ಪೂರ್ವನಿಗದಿಯಾದಂತೆ ಸೋಮವಾರ ಸುಮಾರು 4 ಸೆಕೆಂಡುಗಳ ಕಾಲ ಉರಿಸಲಾಯಿತು. ಪರೀಕ್ಷೆಯ ಯಶಸ್ಸಿನಿಂದ ಇಸ್ರೊ ವಿಜ್ಞಾನಿಗಳ ವಿಶ್ವಾಸ ನೂರ್ಮಡಿಸಿದೆ.
ಬುಧವಾರ (ಸೆ. 24) ಬೆಳಿಗ್ಗೆ ಇದೇ ಎಂಜಿನ್ 24 ನಿಮಿಷಗಳ ಕಾಲ ಉರಿದು ‘ಮಾರ್ಸ್ ಆರ್ಬಿಟರ್’ ಅನ್ನು ಮಂಗಳ ಗ್ರಹದ ಕಕ್ಷೆಗೆ ನೂಕಲಿದೆ. ಬುಧವಾರ ಬೆಳಿಗ್ಗೆ 7 ಗಂಟೆಯಿಂದ 7.30ರ ಅವಧಿಯಲ್ಲಿ ನೌಕೆ ಮಂಗಳನ ಕಕ್ಷೆಯನ್ನು ತಲುಪುವ ಸಾಧ್ಯತೆಯಿದೆ. 8.30ರ ಹೊತ್ತಿಗೆ ಫಲಿತಾಂಶ ಸ್ಪಷ್ಟವಾಗಲಿದೆ.
ಮಂಗಳನೌಕೆ ಈಗ ಮಂಗಳ ಗ್ರಹದ ಗುರುತ್ವ ವಲಯದ ಒಳಗೆ ಬಂದಿರುವುದರಿಂದ ಸೋಮವಾರದ ಪರೀಕ್ಷೆಯ ಯಶಸ್ಸು ಮತ್ತಷ್ಟು ಮಹತ್ತರವಾದದ್ದು. ‘ಮಾರ್ಸ್ ಆರ್ಬಿಟರ್’ ಸದ್ಯಕ್ಕೆ ಮಂಗಳನ 5.4 ಲಕ್ಷ ಕಿ.ಮೀ. ವ್ಯಾಪ್ತಿಯ ಗುರುತ್ವ ವಲಯದಲ್ಲಿ ಇದೆ.
ಬುಧವಾರ ಬೆಳಿಗ್ಗೆ 7 ಗಂಟೆಯಿಂದ 7.30ರ ಅವಧಿಯಲ್ಲಿ ನೌಕೆ ಮಂಗಳನ ಕಕ್ಷೆ ತಲುಪುವ ಸಾಧ್ಯತೆ
ಬುಧವಾರವೇ ಮೊದಲ ವರ್ಣ ಚಿತ್ರ...
ಮಂಗಳ ನೌಕೆಗೆ ಅಳವಡಿಸಲಾಗಿರುವ ಅತ್ಯಾಧುನಿಕ ಕ್ಯಾಮೆರಾಗೆ ಚಾಲನೆ ನೀಡಲು ಇಸ್ರೊ ಸಿದ್ಧತೆ ನಡೆಸಿದ್ದು, ಬುಧವಾರ ಮಧ್ಯಾಹ್ನದ ಹೊತ್ತಿಗೆ ನೌಕೆಯು ಮೊದಲ ವರ್ಣ ಚಿತ್ರವನ್ನು ಭೂಮಿಗೆ ಕಳಿಸುವ ಸಾಧ್ಯತೆಯಿದೆ. ‘ಬ್ಯಾಲಾಳುವಿನಲ್ಲಿರುವ ಇಸ್ರೊ ಕೇಂದ್ರಕ್ಕೆ ಈ ಚಿತ್ರ ರವಾನೆಯಾಗಲಿದೆ’ ಎಂದು ಮೂಲಗಳು ತಿಳಿಸಿವೆ.
ಮುಂದಿನ ಸವಾಲು
24ರಂದು ನೌಕೆಯನ್ನು ಕೆಂಪುಕಾಯ ಅಂಗಾರಕನ ಕಕ್ಷೆಗೆ ಸೇರಿಸಬೇಕೆಂದರೆ ಅದರ ವೇಗವನ್ನು ತಗ್ಗಿಸಬೇಕು.ಇದು ಕಠಿಣ ಸವಾಲು. ಮಂಗಳಕ್ಕೆ ಸಾಪೇಕ್ಷವಾಗಿ ನೌಕೆ ವೇಗವನ್ನು ಸೆಕೆಂಡ್‌ಗೆ 22.1 ಕಿ.ಮೀ.ನಿಂದ ಸೆಕೆಂಡ್‌ಗೆ 4.4 ಕಿ.ಮೀ.ಗೆ ಇಳಿಸಬೇಕು. ಹೀಗೆ ವೇಗ ತಗ್ಗಿಸಿ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲು ದ್ರವ ಎಂಜಿನ್‌ನ್ನು 24 ನಿಮಿಷಗಳ ಕಾಲ ಉರಿಸಬೇಕಾಗುತ್ತದೆ.
ಇದು ಸಂತಸದ ಕ್ಷಣ. ಮಂಗಳನೌಕೆ ಸುಸ್ಥಿತಿಯಲ್ಲಿದೆ. ಇದು ಶೇ 98ರಷ್ಟು ಪಯಣ ಮುಗಿಸಿದೆ. ಬುಧವಾರದ ಮಹತ್ವದ ಕಾರ್ಯಾಚರಣೆಗಾಗಿ ನಾವು ಸಜ್ಜಾಗುತ್ತಿದ್ದೇವೆ
– ಇಸ್ರೊ ಅಧ್ಯಕ್ಷ, ಕೆ.ರಾಧಾಕೃಷ್ಣನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.