ADVERTISEMENT

ಮತದಾರರ ಚೀಟಿ– ಆಧಾರ್‌ ಸಂಖ್ಯೆ ಜೋಡಣೆಗೆ ತಡೆ

ಸುಪ್ರೀಂ ತೀರ್ಪು; ಯೋಜನೆ ಕೈಬಿಟ್ಟ ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2015, 11:17 IST
Last Updated 14 ಆಗಸ್ಟ್ 2015, 11:17 IST

ನವದೆಹಲಿ (ಪಿಟಿಐ):  ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪಿನಿಂದ, ಮತದಾರರ ಗುರುತಿನ ಚೀಟಿ ಜತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಯೋಜನೆಯನ್ನು ಚುನಾವಣಾ ಆಯೋಗ ಕೈಬಿಟ್ಟಿದೆ.

ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳು, ಸಾಮಾಜಿಕ ಯೋಜನೆಗಳ ಲಾಭ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಹೇಳಿತ್ತು. ಇದು ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ‘ಆಧಾರ್‌–ಮತದಾರರ ಗುರುತಿನ ಚೀಟಿ ಜೋಡಣೆ’ ಯೋಜನೆಗೆ ತಡೆಯೊಡ್ಡಿದೆ.

ಮತದಾರರ ಗುರುತಿನ ಚೀಟಿ ಜತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದರಿಂದ, ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರು ಸೇರ್ಪಡೆಗೊಳ್ಳುವುದನ್ನು ತಡೆಯಬಹುದು, ಇಡೀ ಮತದಾರರ ಪಟ್ಟಿಯನ್ನೇ ಪರಿಷ್ಕರಿಸಬಹುದು ಎಂದು ಆಯೋಗ ಹೇಳಿತ್ತು. ಆದರೆ, ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲೇಬೇಕಾದ ಅನಿವಾರ್ಯತೆ ಈಗ ಆಯೋಗದ ಮುಂದಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ‘ರಾಷ್ಟ್ರೀಯ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಖಾತರಿಗೊಳಿಸುವಿಕೆ ಯೋಜನೆ (ಎನ್‌ಇಆರ್‌ಪಿಎಪಿ) ಕೈಬಿಡುವಂತೆ, ಚುನಾವಣಾ ಆಯೋಗ ಎಲ್ಲ ರಾಜ್ಯಗಳ  ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸುತ್ತೋಲೆಯನ್ನೂ ಹೊರಡಿಸಿದೆ. ಮುಂದಿನ ಆದೇಶ ಬಂದ ನಂತರವೇ ಯೋಜನೆ ಕೈಗೆತ್ತಿಕೊಳ್ಳಿ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.