ನವದೆಹಲಿ (ಪಿಟಿಐ): 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್ ಮೆಮನ್‌ನನ್ನು ಗುರುವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ. ಆದರೆ, ಇದಕ್ಕೂ ಮೊದಲು ರಾತ್ರಿ ಇಡೀ ಆತನನ್ನು ಬದುಕಿಸಲು ನಾಟಕೀಯ ಯತ್ನಗಳು ನಡೆದವು. ಸುಪ್ರೀಂ ಕೋರ್ಟ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ನಸುಕಿನ 3.20ಕ್ಕೆ ಒಂದೂವರೆ ಗಂಟೆಗಳ ಕಾಲ ಕಲಾಪ ನಡೆಸಿತು.
ರಾಷ್ಟ್ರಪತಿಗಳು ಹಾಗೂ ಮಹಾರಾಷ್ಟ್ರ ರಾಜ್ಯಪಾಲರು ಯಾಕೂಬ್ ಮೆಮನ್ ಕ್ಷಮಾದಾನ ಅರ್ಜಿಗಳನ್ನು ತಿರಿಸ್ಕರಿಸಿದ ಬೆನ್ನಲ್ಲೆ, ಬುಧವಾರ ತಡರಾತ್ರಿಯ ಬಳಿಕ ಆತನನ್ನು ಬದುಕಿಸುವ ಸಾಹಸ ಶುರುವಾಯಿತು.
ಮೆಮನ್‌ನನ್ನು ಗಲ್ಲಿನಿಂದ ತಡೆಯುವ ನಿಟ್ಟಿನಲ್ಲಿ ಕೆಲವು ವಕೀಲರ ಗುಂಪೊಂದು ತ್ವರಿತ ಅರ್ಜಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ದೌಡಾಯಿಸಿತು. ಕ್ಷಮಾದಾನ ಅರ್ಜಿ ವಜಾಗೊಂಡ ಬಳಿಕ ಅಪರಾಧಿಗೆ 14 ದಿನಗಳ ಕಾಲಾವಕಾಶ ನೀಡಬೇಕು ಎಂಬ ಅಂಶದ ಮೇಲೆ ಗಲ್ಲಿಗೆ ತಡೆ ನೀಡುವಂತೆ ಕೋರಿದರು.
ಆದರೆ, ದತ್ತು ಅವರು ರಚಿಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಮರಣ ದಂಡನೆ ಎತ್ತಿಹಿಡಿದು, ಗಲ್ಲು ತಡೆ ಅರ್ಜಿ ವಜಾಗೊಳಿಸಿದ್ದರಿಂದ ಸಮಾಲೋಚನೆಯ ಅಗತ್ಯ ಕಾಣಿಸಿತು.
ಬಳಿಕ, ವಕೀಲರ ಗುಂಪು, ತುಘಲಕ್ ರಸ್ತೆಯಲ್ಲಿರುವ ನ್ಯಾಯಮೂರ್ತಿ ದತ್ತು ಅವರ ನಿವಾಸದಿಂದ ನ್ಯಾಯಮೂರ್ತಿ ಮಿಶ್ರಾ ಅವರ ನಿವಾಸಕ್ಕೆ ತೆರಳಿತು. ಅಂತಿಮವಾಗಿ ಅಲ್ಲಿಂದ ಹಲವು ಕೀಲೋ ಮೀಟರ್ ದೂರದಲ್ಲಿರುವ ಸುಪ್ರೀಂ ಕೋರ್ಟ್ ತಲುಪಿದರು.
ಭದ್ರತಾ ತಪಾಸಣೆಯ ಬಳಿಕ 3.20ಕ್ಕೆ ನ್ಯಾಯಾಲಯದ ಕೊಠಡಿ ನಾಲ್ಕರಲ್ಲಿ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹಾಗೂ ಮೆಮನ್ ಪರ ಹಿರಿಯ ವಕೀಲ ಆನಂದ್ ಗ್ರೋವರ್ ಅವರು ವಾದ ಮಂಡಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಂತರ ಅಂದರೆ, ನಸುಕಿನ 4.50ಕ್ಕೆ ವಿಚಾರಣೆ ಅಂತ್ಯಗೊಂಡಿತು.
ವಾದ–ಪ್ರತಿವಾದ ಆಲಿಸಿದ ನ್ಯಾಯ ಪೀಠ, ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡ ಬಳಿಕ ಮೆಮನ್‌ಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.